ಚಾ.ನಗರ ವಿವಿ ಚಿನ್ನದ ಪದಕ ವಿಜೇತರಿಗೆ ಸನ್ಮಾನ

| Published : Jul 06 2024, 12:45 AM IST

ಸಾರಾಂಶ

ಚಾಮರಾಜನಗರ ವಿವಿ ಕನ್ನಡ ಮತ್ತು ಜಾನಪದ ವಿಭಾಗದ ವತಿಯಿಂದ ವಿವಿಯ ಸುವರ್ಣಗಂಗೋತ್ರಿಯ ನಿಜಗುಣ ಸಭಾಂಗಣದಲ್ಲಿ ಚಿನ್ನದ ಪದಕಗಳನ್ನು ಪಡೆದ ಸಾಧಕರಿಗೆ ಸನ್ಮಾನ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ವಿಶ್ವವಿದ್ಯಾನಿಲಯದ ಕನ್ನಡ ಮತ್ತು ಜಾನಪದ ವಿಭಾಗದ ವತಿಯಿಂದ ವಿಶ್ವವಿದ್ಯಾನಿಲಯದಲ್ಲಿರುವ ಸುವರ್ಣಗಂಗೋತ್ರಿಯ ನಿಜಗುಣ ಸಭಾಂಗಣದಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಕಿರಿಯ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಮತ್ತು ಚಿನ್ನದ ಪದಕಗಳನ್ನು ಪಡೆದ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂದರ್ಶಕ ಪ್ರೊ.ಕೃಷ್ಣಮೂರ್ತಿ, ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಚಾಮರಾಜನಗರ ವಿವಿ ಯಲ್ಲಿ ಉತ್ತಮ ವಾತಾವರಣವಿದ್ದು ಅಧ್ಯಾಪಕರು ನೀಡುವ ಮಾರ್ಗದರ್ಶನದೊಂದಿಗೆ ಪರಿಶ್ರಮದಿಂದ ಅಧ್ಯಯನ ಮಾಡಿದ್ದೇ ಆದಲ್ಲಿ ಯಶಸ್ಸನ್ನು ಸಾಧಿಸಬಹುದಾಗಿದೆ. ಕನ್ನಡ ವಿಭಾಗದ ವಿದ್ಯಾರ್ಥಿಗಳು ಕಳೆದ 9 ವರ್ಷಗಳಿಂದ ನಿರಂತರವಾಗಿ ಚಿನ್ನದ ಪದಕಗಳನ್ನು ಮತ್ತು ನಗದು ಬಹುಮಾನಗಳನ್ನು ಪಡೆದುಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಜೊತೆಗೆ ಸರ್ಕಾರಿ ಹುದ್ದೆಗಳನ್ನು ಸಹ ಪಡೆದುಕೊಂಡಿದ್ದಾರೆ ಎಂದರು.

ಕುಪ್ನಳ್ಳಿ ಬೈರಪ್ಪ ಮುಖ್ಯ ಅತಿಥಿಯಾಗಿ ಮಾತನಾಡಿ, ಕನ್ನಡ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹಲವಾರು ಕ್ಷೇತ್ರಗಳಲ್ಲಿ ಉದ್ಯೋಗದ ಅವಕಾಶಗಳಿದ್ದು, ಸರ್ಕಾರದ ಎಲ್ಲಾ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಕನ್ನಡ ಸಾಮಾನ್ಯ ಪತ್ರಿಕೆಯಾಗಿ, ಕಡ್ಡಾಯ ಕನ್ನಡ ಪತ್ರಿಕೆಯಾಗಿ ಹಾಗೂ ಮುಖ್ಯ ಪತ್ರಿಕೆಯಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಪಠ್ಯಕ್ರಮಗಳಿವೆ. ವಿದ್ಯಾರ್ಥಿಗಳು ಆಳವಾದ ಅಧ್ಯಯನ ಮಾಡಿ ಜ್ಞಾನವನ್ನು ಪಡೆದುಕೊಂಡು ಗುರಿ ತಲುಪಬೇಕು ಎಂದರು.

ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಪರಿಶ್ರಮ ಹಾಗೂ ಭವಿಷ್ಯದ ಬಗೆಗೆ ನಿಖರವಾದ ಯೋಜನೆಗಳಿದ್ದರೆ ಯಶಸ್ವಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸಾಧನೆ ಹೆಮ್ಮೆಯ ಸಂಗತಿಯಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಚಂದನ, ತರಗತಿಗಳಲ್ಲಿ ಉತ್ತಮ ಗುಣಮಟ್ಟದ ಬೋಧನೆ, ಗುರುಗಳ ಮಾರ್ಗದರ್ಶನ ಹಾಗೂ ಇಲ್ಲಿನ ಗ್ರಂಥಾಲಯ ನನ್ನ ಸಾಧನೆಗೆ ಸ್ಪೂರ್ತಿಯಾಯಿತು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಬಸವಣ್ಣ ಮೂಕಹಳ್ಳಿ, ಜಾನಪದ ವಿಭಾಗದ ಮುಖ್ಯಸ್ಥ ಡಾ ಶಿವರಾಜು, ಉಪನ್ಯಾಸಕರಾದ ಡಾ. ಮಹೇಶ್ ಬಾಬು, ಬಿ.ಗುರುರಾಜು, ಪಿ.ರಾಣಿ, ಡಾ.ಆರ್. ಶಶಿಕಲಾ, ಡಾ.ಜಗದೀಶ್, ಡಾ.ಆರ್.ಮಹೇಶ್, ಚಿನ್ನದ ಪದಕ ವಿಜೇತರಾದ ತೇಜಸ್ವಿನಿ ಆರ್, ಮಣಿಕಂಠ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.