ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ಕಳೆದ ೪೪ ವರ್ಷಗಳಿಂದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕುಟುಂಬದ ಕಪಿಮುಷ್ಠಿಯಲ್ಲಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಸ್ಥಳೀಯರಿಗೆ ಟಿಕೆಟ್ ನೀಡುವ ಮೂಲಕ ಕುಟುಂಬದಿಂದ ವಿಮೋಚನೆಗೊಳಿಸಿರುವುದು ತುಂಬಾ ಸಂತಸ ಉಂಟು ಮಾಡಿದೆ ಎಂದು ಹಿರಿಯ ಬಿಜೆಪಿ ಮುಖಂಡ ವೆಂಕಟರಮಣಸ್ವಾಮಿ (ಪಾಪು) ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ವಿ.ಶ್ರೀನಿವಾಸಪ್ರಸಾದ್ ಮತ್ತು ಅವರ ಕುಟುಂಬವು ಕಳೆದ ೪೪ ವರ್ಷಗಳಿಂದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ತಮ್ಮದೇ ಹಿಡಿತವನ್ನು ಸಾಧಿಸುವ ಜೊತೆಗೆ ರಾಜಕಾರಣದಲ್ಲಿ ಕುಟುಂಬದ ಅಧಿಪತ್ಯವನ್ನು ಸ್ಥಾಪಿಸಿದ್ದರು. ಈ ಬಾರಿ ಬಿಜೆಪಿಯಿಂದ ಅಳಿಯ ಡಾ.ಮೋಹನ್‌ಗೆ ಟಿಕೆಟ್ ಕೊಡಿಸಲು ಸತತ ಪ್ರಯತ್ನ ಮಾಡಿದ್ದರು, ವರಿಷ್ಠರ ಮಟ್ಟದಲ್ಲಿ ದೊಡ್ಡ ಲಾಬಿ ಮಾಡಿದ್ದ ಪ್ರಸಾದ್ ಅಳಿಯನಿಗೆ ಟಿಕೆಟ್ ಕೈ ತಪ್ಪಿ ತೀವ್ರ ಮುಖಭಂಗ ಉಂಟು ಮಾಡಿದೆ.ಈ ಬಾರಿ ಬಿಜೆಪಿ ವರಿಷ್ಟರು ನಮ್ಮ ಸ್ಥಳಿಯ ನಾಯಕರ ಮನವಿಯನ್ನು ಪುರಸ್ಕೃರಿಸಿ, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯರಾದ ಮಾಜಿ ಶಾಸಕ ಎಸ್.ಬಾಲರಾಜು ಅವರಿಗೆ ನೀಡುವ ಮೂಲಕ ಕ್ಷೇತ್ರದಲ್ಲಿ ಪ್ರಸಾದ್ ಹಿಡಿತ ಇಲ್ಲ ಎಂಬುವುದನ್ನು ತೋರ್ಪಡಿಸಿದೆ. ಹೀಗಾಗಿ ಪ್ರಧಾನಿ ಮೋದಿ ಅವರ ವರ್ಚಸ್ಸು, ಬಿಜೆಪಿ ಸಂಘಟನೆಯಿಂದಾಗಿ ಮತ್ತೊಮ್ಮೆ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಲಿದೆ. ನಾವೆಲ್ಲರು ಸೇರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು. ಕಳೆದ ಐದು ವರ್ಷಗಳಲ್ಲಿ ಸಂಸದರಾಗಿದ್ದುಕೊಂಡು ಒಂದೇ ಒಂದು ಹೊಸ ಯೋಜನೆಯನ್ನು ಜಾರಿ ಮಾಡದ ಪ್ರಸಾದ್, ರಾಷ್ಟ್ರೀಯ ಹಬ್ಬಗಳು, ಮಹಾಪುರುಷರ ಜಯಂತಿಗಳಿಗೂ ಸಹ ಭಾಗವಹಿಸದೇ ಅನಾರೋಗ್ಯ ಕಾರಣ ಹೇಳಿ ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿದ್ದರು. ಈಗ ಮತ್ತೇ ನನ್ನ ಅಳಿಯ ಡಾ.ಮೋಹನ್‌ಗೆ ಟಿಕೆಟ್ ಕೊಡಿ ಎಂದು ಲಾಬಿ ಮಾಡಿದ್ದರು. ಈ ಬಾರಿ ವರಿಷ್ಠರು ಸ್ಥಳಿಯರಿಗೆ ಮಣೆ ಹಾಕಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಇತ್ತೀಚಿನ ಬೆಳವಣೆಗೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿರುವ ಡಾ.ಮೋಹನ್ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಎಂಬ ಮಾಹಿತಿ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಕಾಂಗ್ರೆಸ್ ನಿಂದ ಟಿಕೆಟ್ ನೀಡುವಂತೆ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು ಸಹ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಪಾಪು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮುತ್ತಿಗೆ ಮೂರ್ತಿ, ಶಿವರುದ್ರಸ್ವಾಮಿ, ಅಸ್ಲಂಷರೀಪ್ ಇದ್ದರು.