ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರು ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ (ಪ್ರೌಢಶಾಲಾ ವಿಭಾಗ) ಶುಕ್ರವಾರ ಭೇಟಿ ನೀಡಿ ಅಲ್ಲಿನ ಶಿಕ್ಷಕರು ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ವಿವಿಧ ಕಲಿಕಾ ವಿಷಯಗಳ ಕುರಿತು ಸಂವಾದ ನಡೆಸಿದರು.ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ನಡೆದ ಚಾಮರಾಜನಗರ ತಾಲೂಕುಮಟ್ಟದ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ರಚನಾ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಕ್ಷಕರ ಬೋಧನಾ ವಿಧಾನ ಹಾಗೂ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ಬಗ್ಗೆ ಪರಿಶೀಲನೆ ನಡೆಸಿದರು. ಮೊದಲಿಗೆ ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿನಿಯರನ್ನು ಪರಿಚಯ ಮಾಡಿಕೊಂಡ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯಾರ್ಥಿಗಳ ಜೊತೆ ಆತ್ಮೀಯವಾಗಿ ಮಾತನಾಡಿದರು. ಕಳೆದ ವಾರ್ಷಿಕ ಪರೀಕ್ಷೆಯಲ್ಲಿ ವಿವಿಧ ವಿಷಯಗಳಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರಶಂಸಿಸಿದರು. ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿಯೂ ಉತ್ತಮ ಸಾಧನೆ ಮಾಡಲು ಪ್ರೇರೇಪಿಸಿದರು.ಪಠ್ಯವಿಷಯದ ಕುರಿತು ವಿದ್ಯಾರ್ಥಿಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಿದರು. ಕಲಿಕಾ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಮಕ್ಕಳ ತೊಂದರೆಗಳ ಬಗ್ಗೆ ಸ್ವತಃ ಮಕ್ಕಳನ್ನೆ ವಿಚಾರಿಸಿ ಮಾಹಿತಿ ಪಡೆದರು. ಮಕ್ಕಳಿಗೆ ವ್ಯಾಕರಣ, ಪತ್ರ ಬರೆಯುವ ಬಗೆ, ವ್ಯಾಸಂಗ ಪೇರಣಾರ್ಥಕ ಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಕಠಿಣವಾದ ಅಧ್ಯಾಯಗಳನ ಸಂಕ್ಷಿಪ್ತವಾಗಿ ಅರ್ಥೈಸಿಕೊಳ್ಳುವ ರೀತಿಯಲ್ಲಿ ಮಕ್ಕಳಿಗೆ ಪಾಠ-ಪ್ರವಚನ ಮಾಡಬೇಕು. ಪ್ರತಿ ವಿಷಯದಲ್ಲಿಯೂ ಮಾದರಿ ಪರೀಕ್ಷೆ ನೆಡೆಸಬೇಕು. ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶ್ನೆಯನ್ನು ಕೇಳಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಬೇಕು. ಮಕ್ಕಳ ಮುಂದಿನ ಭವಿಷ್ಯ ರೂಪಿಸುವಲ್ಲಿ ಮುಂದಾಗುವಂತೆ ಶಿಕ್ಷಕರಿಗೆ ಸೂಚಿಸಿದರು.
ಬಳಿಕ ಸ್ವತಹ ಜಿಪಂ ಸಿಇಒ ಮೋನಾ ರೋತ್ ಅವರೇ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವ ಮಾದರಿಯಲ್ಲಿ ಸಮಾಜ ವಿಜ್ಞಾನ ಹಾಗೂ ಹಿಂದಿ ವಿಷಯಗಳ ಕುರಿತು ಪಾಠ ಮಾಡಿ ವಿದ್ಯಾರ್ಥಿಗಳ ಮನಗೆದ್ದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಕಾಲೇಜಿನ ಉಪಪ್ರಾಂಶುಪಾಲ ನಂಜುಂಡಸ್ವಾಮಿ, ಇತರರು ಇದೇ ಸಂದರ್ಭದಲ್ಲಿ ಇದ್ದರು.