ಸಾರಾಂಶ
ಹಾವೇರಿ (ಶಿಗ್ಗಾಂವಿ): ರೈತ ಆತ್ಮಹತ್ಯೆ ಮಾಡಿಕೊಂಡಿದ್ದು ವಕ್ಫ್‌ನಿಂದ ಅಲ್ಲ, ಬೇರೆ ಯಾವುದೋ ಕಾರಣಕ್ಕೆ ಅಂತ ಬಲವಂತವಾಗಿ ಪೊಲೀಸರ ಕೈಲಿ ಹೇಳಿಸಿದ್ದಾರೆ. ರೈತರನ್ನು ಯಾಕೆ ಬಲಿ ಕೊಡ್ತಿದೀರಿ ಎಂದು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಎಫ್‌ಐಆರ್ ಹಾಕಿಸಿದ್ದು, ಈ ಮೂಲಕ ಸರ್ಕಾರ ಏನು ಸಾಧಿಸಲು ಹೊರಟಿದೆ? ಎಂದು ಸಂಸದ ತೇಜಸ್ವಿ ಸೂರ್ಯ ಪ್ರಶ್ನಿಸಿದರು. ಶಿಗ್ಗಾಂವಿ ತಾಲೂಕು ತಡಸ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಹಾವೇರಿಯ ರೈತರು ಜಂಟಿ ಸಮಿತಿ ಅಧ್ಯಕ್ಷರ ಎದುರು ನಮ್ಮ ಮನೆ ಮಗನ ಹೆಸರಿಗೆ ಇದ್ದ ೪ ಎಕರೆ ಜಮೀನಿಗೆ ವಕ್ಫ್ ಅಂತ ಎಂಟ್ರಿ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಮನವಿ ಮಾಡಿದ್ರು. ಆ ವರದಿ ಮಾಧ್ಯಮದವರು ಬಿತ್ತರಿಸಿದ್ರು, ಸರ್ಕಾರವನ್ನು ಎಚ್ಚರಿಸಲು ಇದನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರಿಂದ ನನ್ನ ಮೇಲೆ ಹಾಗೂ ಮಾಧ್ಯಮದವರ ಮೇಲೆ ಎಫ್‌ಐಆರ್ ಹಾಕಿಸಿದ್ದಾರೆ. ವಾಕ್ ಸ್ವಾತಂತ್ರ್ಯ ಅಂತ ಮಾತಾಡೋರು ಸುದ್ದಿ ಬಿತ್ತರಿಸಿದ್ದಕ್ಕೆ ಎಫ್‌ಐಆರ್ ಹಾಕಿದ್ದೀರಿ ಎಂದು ಕಿಡಿಕಾರಿದರು.ಆತ್ಮಹತ್ಯೆ ಮಾಡಿಕೊಂಡ ರೈತನ ತಂದೆ ಎಲ್ಲ ಮಾಧ್ಯಮಗಳಲ್ಲಿ ಮಾತಾಡಿದ್ದಾರೆ. ಪಹಣಿಯಲ್ಲಿ ವಕ್ಫ್ ಅಂತ ಸೇರಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಎಂದು ಅವರು ಹೇಳಿದರು. ಸಂತೋಷ ಶಿವಪ್ಪ ಕೌದಿ ಎನ್ನುವವರ ಪಹಣಿಯಲ್ಲಿ ಮುಸ್ಲಿಂ ಸಮಾಜದವರು ಶವ ಸಂಸ್ಕಾರಕ್ಕೆ ಹಾಗೂ ಪ್ರಾರ್ಥನೆ ಸಲ್ಲಿಸಲು ಅಂತ ಕಾಲಂ ನಂ.೧೧ರಲ್ಲಿ ಸೇರಿಸಿದ್ದಾರೆ. ಯಾವ ಊರಿಗೆ ಹೋದರೂ ಇದೇ ಆಗಿದೆ. ನೂರಾರು ವರ್ಷ ಉಳುಮೆ ಮಾಡಿಕೊಂಡು ಇದ್ದ ಜಾಗವನ್ನು ವಕ್ಫ್ ಅಂತ ಮಾಡಿದ್ದಾರೆ. ಇವರ ಜಮೀನು ಎನ್‌ಎ, ಕೆಜೆಪಿ ಕೂಡಾ ಆಗಿದೆ. ಒಂದೊಂದು ತಾಲೂಕಿನಲ್ಲಿ ೨೫೦-೩೦೦ ಎಕರೆ ಜಮೀನು ವಕ್ಫ್ ಅಂತ ಕ್ಲೇಮ್ ಮಾಡ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ಎಫ್‌ಐಆರ್ ಹಾಕ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮೋದಿ ಸರ್ಕಾರ ವಕ್ಫ್ ಕಾಯಿದೆಗೆ ತಿದ್ದುಪಡಿ ತಂದು ವಕ್ಫ್ ಪರಮಾಧಿಕಾರ ಮೊಟಕುಗೊಳಿಸುತ್ತದೆ. ಅದಕ್ಕಿಂತ ಮುಂಚೆ ಪ್ರತಿ ಹಳ್ಳಿ, ತಾಲೂಕುಗಳಲ್ಲಿ ನೂರಾರು ಎಕರೆ ಜಮೀನು ಮುಸ್ಲಿಮರಿಗೆ ಕೊಟ್ಟುಬಿಡಬೇಕು ಅಂತ ಹೇಳಿ ಹೀಗೆ ಮಾಡ್ತಿದ್ದಾರೆ. ಪಹಣಿಯಲ್ಲಿ ವಕ್ಫ್ ಅಂತ ಎಂಟ್ರಿ ಆದರೆ ಕೃಷಿ ಸಾಲ ಸಿಗಲ್ಲ, ಸಬ್ಸಿಡಿ ನಿಂತು ಹೋಗುತ್ತವೆ, ಅವನ ಜಮೀನು ಮಾರಾಟ ಮಾಡಲು ಆಗಲ್ಲ. ಜಮೀನು ಇದ್ದರೂ ಸತ್ತಂತೆ. ಯಾರಿಗೆ ಏನು ಕೇಳದೇ ವಕ್ಫ್ ಅಂತ ಸೇರಿಸಿದರೆ ಹೇಗೆ ಎಂದು ಪ್ರಶ್ನಿಸಿದರು. ಇದರಿಂದ ನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ವಕ್ಫ್ ಅಂತ ಗೊತ್ತಾದರೆ ಸಮಾಜ ಎಚ್ಚೆತ್ತುಕೊಳ್ಳುತ್ತದೆ ಎಂಬ ಕಾರಣಕ್ಕೆ ಮಾಧ್ಯಮದವರ ಬಾಯಿ ಮುಚ್ಚಿಸಲು ಹೊರಟಿದ್ದಾರೆ ಎಂದರು.
ಈ ವೇಳೆ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ, ಶಾಸಕ ಅರವಿಂದ ಬೆಲ್ಲದ ಇದ್ದರು.