ಸಾರಾಂಶ
ಕಾನೂನಿಗೆ ತಲೆಭಾಗದಂತಹ ವ್ಯಕ್ತಿಗಳನ್ನು ಹೆಡೆಮುರಿ ಕಟ್ಟಬೇಕು. ಶಿಕ್ಷೆ ಕೊಡಿಸಿದಾಗ ಮಾತ್ರ ಕಾನೂನು, ಪೊಲೀಸ್ ಎಂದರೆ ಭಯಬರುತ್ತದೆ. ಇದರಿಂದ ಅಪರಾಧ ಪ್ರಕರಣಗಳನ್ನು ತಡೆಯಲು ಸಾಧ್ಯವಿದೆ ಎಂದು ಎಸ್ಪಿ ಎಂ. ನಾರಾಯಣ ತಿಳಿಸಿದರು.
ಶಿರಸಿ: ಪೊಲೀಸರು ಆಸೆ, ಆಮಿಷಗಳಿಗೆ ಬಲಿಯಾಗಬಾರದು. ಅಂತಹ ಘಟನೆಗಳು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಎಚ್ಚರಿಕೆ ನೀಡಿದರು.
ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಶಿರಸಿ ಉಪವಿಭಾಗದ ಕವಾಯತು ಪರಿವೀಕ್ಷಣೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ಪೊಲೀಸ್ ಸಿಬ್ಬಂದಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಸಿಬ್ಬಂದಿ ಹಿತ ಕಾಯಲು, ಕುಟುಂಬ ಸಮಸ್ಯೆ ನಿವಾರಿಸಲು ದಿನದ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲಿ ಇಸ್ಪೀಟ್ ಕ್ಲಬ್, ಅಕ್ರಮ ಚಟುವಟಿಕೆ ನಡೆಯಬಾರದು. ಹಿಂದುಳಿದವರ ಮೇಲೆ, ದಲಿತ ಮೇಲೆ ದೌರ್ಜನ್ಯ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು. ಯಲ್ಲಾಪುರಲ್ಲಿ ೪೨ ಹಿಂದಿನ ಪ್ರಕರಣವನ್ನು ಬೀಟ್ ವ್ಯವಸ್ಥೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ವರ್ಗಾವಣೆ ಸಹಜ. ಇರುವ ವರೆಗೆ ನಾವು ತೆಗೆದುಕೊಳ್ಳುವ ಸಂಬಳಕ್ಕೆ ಶ್ರದ್ಧೆಯಿಂದ ಕೆಲಸ ಮಾಡಬೇಕು. ಕೇವಲ ಪ್ರಕರಣ ದಾಖಲಿಸುವುದು ಮಾತ್ರವಲ್ಲದೇ, ಸಾಕ್ಷಿಗಳನ್ನು ಸರಿಯಾಗಿ ಹಾಜರುಪಡಿಸಿ, ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು. ಕಾನೂನಿಗೆ ತಲೆಭಾಗದಂತಹ ವ್ಯಕ್ತಿಗಳನ್ನು ಹೆಡೆಮುರಿ ಕಟ್ಟಬೇಕು. ಶಿಕ್ಷೆ ಕೊಡಿಸಿದಾಗ ಮಾತ್ರ ಕಾನೂನು, ಪೊಲೀಸ್ ಎಂದರೆ ಭಯಬರುತ್ತದೆ. ಇದರಿಂದ ಅಪರಾಧ ಪ್ರಕರಣಗಳನ್ನು ತಡೆಯಲು ಸಾಧ್ಯವಿದೆ ಎಂದರು.ಜಿಲ್ಲೆಯಲ್ಲಿ ೫- ೬ ಜೀವಾವಧಿ ಶಿಕ್ಷೆ, ಪೊಕ್ಸೋ ೮- ೯ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ತೆರೆಮರೆಯಲ್ಲಿ ತಮ್ಮ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಈ ಕಾರಣಕ್ಕೆ ಜಿಲ್ಲೆಯ ಪೊಲೀಸರ ಮೇಲೆ ಅಪಾರ ಗೌರವವಿದೆ. ಸುಳ್ಳು ಪ್ರಕರಣ ದಾಖಲಿಸುವುದು, ಠಾಣೆಗೆ ಬಂದವರನ್ನು ಕಾಯಿಸುವುದು. ರಾಜಕೀಯ ದುರುದ್ದೇಶಕ್ಕೆ ಠಾಣೆಯನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಆಸ್ಪದವಿಲ್ಲ. ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.ಆಯುರ್ವೇದ ವೈದ್ಯ ವೆಂಕಟರಮಣ ಹೆಗಡೆ ಆರೋಗ್ಯದ ಕುರಿತಾಗಿ ಪೋಲೀಸ್ ಸಿಬ್ಬಂದಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ಡಿಎಸ್‌ಪಿ ಕೆ.ಎಲ್. ಗಣೇಶ, ಎಪಿಪಿ ಚೇತನಾ, ಸಿಪಿಐ ಶಶಿಕಾಂತ ವರ್ಮಾ ಸೇರಿದಂತೆ ಶಿರಸಿ ಉಪವಿಭಾಗದ ಪಿಎಸ್‌ಐಗಳು, ಸಿಪಿಐಗಳು ಇದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಶಿರಸಿ ಉಪವಿಭಾಗದ ಸಮವಸ್ತ್ರಧಾರಿ ಪೊಲೀಸ್ ಸಿಬ್ಬಂದಿಗಳಿಂದ ಆಕರ್ಷಕ ಪರೇಡ್ ನಡೆಯಿತು. ಪರೇಡ್ ಕಮಾಂಡರ್ ಆಗಿ ಗ್ರಾಮೀಣ ಠಾಣೆಯ ಪಿಎಸ್ಐ ಪ್ರತಾಪ್ ಭಾಗಿಯಾಗಿದ್ದರು. ಇದೇ ವೇಳೆ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಯನ್ನು ಗೌರವಿಸಲಾಯಿತು.