ಬುಲೆಟ್‌ ಮೂಲಕ ಹಲವು ದೇಶಗಳಲ್ಲಿ ಸಂಚರಿಸಿದ ಸುಮನ್ ತಂಡಕ್ಕೆ ಅದ್ಧೂರಿ ಸ್ವಾಗತ

| Published : Nov 09 2024, 01:16 AM IST

ಸಾರಾಂಶ

ಪಟ್ಟಣದ ಅರಳೇರಿ ರಸ್ತೆಯ ಉದ್ಯಮಿ ಎಸ್. ಕೆ. ನಾಗರಾಜ ಹಾಗೂ ಜಲಜ ದಂಪತಿ ಪುತ್ರ ಸುಮನ್ ಬಿಎಸ್ಸಿ ಪದವೀಧರನಾಗಿದ್ದು, ಆತನಿಗೆ ತನ್ನ ಬೈಕ್ ಮೂಲಕ ದೇಶ- ವಿದೇಶಗಳನ್ನು ಸುತ್ತುವ ಕನಸ್ಸಿತ್ತು.

ಕನ್ನಡಪ್ರಭ ವಾರ್ತೆ ಮಾಲೂರು

ಪಟ್ಟಣದ ಅರಳೇರಿ ರಸ್ತೆಯ ಬಿಎಸ್‌ಸಿ ಪದವೀಧರ ಸುಮನ್ ತಮ್ಮ ಬುಲೆಟ್ ಬೈಕ್ ಮೂಲಕ ವಿದೇಶಗಳನ್ನು ಸುತ್ತಿ ಬಂದ ಹಿನ್ನೆಲೆಯಲ್ಲಿ ಪಟ್ಟಣದ ಸಾಯಿಬಾಬಾ ದೇವಾಲಯ ಬಳಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಬೈಕ್ ನಲ್ಲೇ ಹಲವು ದೇಶಗಳನ್ನು ಸುತ್ತಲೂ ತನ್ನ ೨೦ ಮಂದಿ ಗೆಳೆಯರೊಂದಿಗೆ ಪ್ರಯಾಣ ಪ್ರಾರಂಭಿಸಿ ಕೊನೆಗೆ ೬ ಮಂದಿ ಮಾತ್ರ ೮೮ ದಿನಗಳ ಕಾಲ ೨೪ ದೇಶಗಳಲ್ಲಿ ೨೪ ಸಾವಿರ ಕಿಮೀ ದೂರ ಕ್ರಮಿಸುವ ಮೂಲಕ ತಾಯಿನಾಡಿಗೆ ಹಿಂದಿರುಗಿದ್ದಾರೆ. ಈ ತಂಡದಲ್ಲಿದ್ದ ಸುಮನ್ ಅವರಿಗೆ ಅವರ ಪೋಷಕರು ಹಿತೈಷಿಗಳು, ಸ್ನೇಹಿತರು, ಅಭಿಮಾನಿಗಳು ಅಭಿನಂದಿಸಿ ಅದ್ಧೂರಿ ಸ್ವಾಗತ ಕೋರಿದರು.

ಪಟ್ಟಣದ ಅರಳೇರಿ ರಸ್ತೆಯ ಉದ್ಯಮಿ ಎಸ್. ಕೆ. ನಾಗರಾಜ ಹಾಗೂ ಜಲಜ ದಂಪತಿ ಪುತ್ರ ಸುಮನ್ ಬಿಎಸ್ಸಿ ಪದವೀಧರನಾಗಿದ್ದು, ಆತನಿಗೆ ತನ್ನ ಬೈಕ್ ಮೂಲಕ ದೇಶ- ವಿದೇಶಗಳನ್ನು ಸುತ್ತುವ ಕನಸ್ಸಿತ್ತು. ತಮ್ಮ ಕನಸ್ಸಿನ ಪ್ರವಾಸದ ಈಡೇರಿಕೆಗಾಗಿ ೨೦ ಮಂದಿ ಸ್ನೇಹಿತರೊಂದಿಗೆ ಆಗಸ್ಟ್ ೧೧ರಂದು ಬೆಂಗಳೂರಿನಿಂದ ಬೈಕ್ ರೈಡ್ ಪ್ರಾರಂಭಿಸಿ ನೇಪಾಳ - ಟಿಬೆಟ್ , ಚೀನಾ - ಕಝಕಿಸ್ತಾನ್- ಕಿರ್ಗಿಸ್ತಾನ, ಉಜ್ಬೇಕಿಸ್ತಾನ್, ರಷ್ಯಾ, ಎಸ್ಟೋನಿಯಾ - ಲಾಟ್ವಿಯಾ , ಲಿಥುವೇನಿಯಾ, ಪೋಲೆಂಡ್, ಚೆಕ್ ಗಣರಾಜ್ಯ, ಆಸ್ಟ್ರಿಯಾ, ಹಂಗೇರಿ, ಕ್ರೊಯೇಷಿಯಾ, ಸ್ಲೊವೇನಿಯಾ, ವ್ಯಾಟಿಕನ್ ಸಿಟಿ, ಇಟಲಿ, ಸ್ವಿಟ್ಜರ್ಲೆಂಡ್ , ಜರ್ಮನಿ , ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಫ್ರಾನ್ಸ್ , ಯುನೈಟೆಡ್ ಕಿಂಗ್‌ಡಮ್ ಸೇರಿ ೨೪ ದೇಶಗಳನ್ನು ಸುತ್ತಿ ಬಂದಿದ್ದಾರೆ. ಪ್ರವಾಸ ಆರಂಭಿಸಿದಾಗ ೨೦ ಸ್ನೇಹಿತರಿದ್ದ ಈ ತಂಡದಲ್ಲಿ ಮುಂದೆ ಕೇವಲ ೬ ಜನರು ಮಾತ್ರ ೮೮ ದಿನಗಳ ಕಾಲ ೨೪ ಸಾವಿರ ಕಿಮೀ ದೂರವನ್ನು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಸಾಧನೆ ಗೈದ ಯುವಕ ಸುಮನ್‌ ಹಾಗೂ ಯುವಕರ ಪಡೆಯನ್ನು ಅವರ ತವರಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ ಅಭಿನಂದಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ್ ಸುಮನ್‌ರನ್ನು ಅಭಿನಂದಿಸಿ ಮಾತನಾಡಿ, ಸುಮನ್ ಅವರು ಬೈಕ್ ರೈಡ್ ಮಾಡಬೇಕೆಂಬ ಆಸಕ್ತಿ, ತಂದೆ- ತಾಯಿಯವರ ಆಶೀರ್ವಾದ ಹಾಗೂ ಸ್ನೇಹಿತರ ಪ್ರೋತ್ಸಾಹದಿಂದ ಹಲವು ದೇಶಗಳನ್ನು ಸುತ್ತುವ ಮೂಲಕ ಸಾಹಸ ಮೆರೆದಿದ್ದಾರೆ. ಇದೊಂದು ಅದ್ವಿತೀಯ ಸಾಧನೆಯಾಗಿದ್ದು, ಬೈಕ್ ರೈಡ್ ಮಾಡುವ ಯುವಕರಿಗೆ ಮಾದರಿಯಾಗಿದ್ದಾರೆ. ಮಾಲೂರು ಪಟ್ಟಣದ ಜನತೆಯ ಪರವಾಗಿ ಸುಮನ್ ಮತ್ತು ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸುಮನ್‌, ಜೀವನದಲ್ಲಿ ಛಲ, ಆಸಕ್ತಿ, ಗುರಿ ಅಳವಡಿಸಿಕೊಂಡು ಸತತ ಪರಿಶ್ರಮ ಪಟ್ಟರೆ ಏನನ್ನಾದರೂ ಸಾಧಿಸಬಹುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೈಕ್ ರೈಡ್ ಮಾಡುವ ಆಸಕ್ತಿ,ಛಲ, ಗುರಿಯೊಂದಿಗೆ ದೇಶ, ವಿದೇಶಗಳಲ್ಲಿ ಬೈಕ್‌ನಲ್ಲಿ ಸಂಚರಿಸಿ ಬಂದಿದ್ದೇನೆ. ಅಲ್ಲಿನ ಸಂಪ್ರದಾಯ, ವಿಚಾರ, ಉಡುಗೆ- ತೊಡುಗೆ, ಸಂಪ್ರದಾಯಗಳು ವಿಶೇಷ ಅನುಭವ ನೀಡಿವೆ ಎಂದ ಸುಮನ್‌, ತಮ್ಮ ಈ ಸಾಧನೆಗೆ ಪೋಷಕರು ಹಾಗೂ ಸ್ನೇಹಿತರೇ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಜಿ ಮಧುಸೂಧನ್ ,ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ. ರಾಜಪ್ಪ, ಧರ್ಮರಾಯಸ್ವಾಮಿ, ದೇವಾಲಯ ಸಮಿತಿಯ ಆಂಜಿನಪ್ಪ, ನಾರಾಯಣಸ್ವಾಮಿ, ಪುರಸಭೆ ಮಾಜಿ ಸದಸ್ಯ ಸೋಮಣ್ಣ, ಮುಖಂಡ ಮುನಿಕೃಷ್ಣ ಇನ್ನಿತರರು ಹಾಜರಿದ್ದರು.