ಧನ್ವೀರ್ ನಟನೆಯ ಹಯಗ್ರೀವ ಸಿನಿಮಾದ ಮೂಹರ್ತ

| Published : Feb 03 2024, 01:45 AM IST

ಸಾರಾಂಶ

ಪುರಾಣದ ಕಲ್ಪನೆಯಲ್ಲಿ ನಡೆಯುವ ಕ್ರೈಂ ಅನ್ನು ಪ್ರಧಾನವಾಗಿಸಿಕೊಂಡು ಸೃಷ್ಟಿಯ ವಿರುದ್ಧ ಮನುಷ್ಯ ಎದುರು ನಿಂತರೇ ಏನಾಗಬಹುದು ಎಂಬುದನ್ನು ಕೇಂದ್ರೀಕರಿಸಿ ಕಥೆ ಹೆಣೆಯಲಾಗಿದೆ. ರಂಗಾಯಣ ರಘು, ರವಿಶಂಕರ್, ತಾರಾ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಬೆಂಗಳೂರಿನಲ್ಲಿ ಸಂಪೂರ್ಣ ಚಿತ್ರೀಕರಣ ನಡೆಯಲಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಶಾಸಕ ಸಮೃದ್ಧಿ ಮಂಜುನಾಥ್ ನಿರ್ಮಾಣದಲ್ಲಿ ನಟ ಧನ್ವೀರ್ ನಟಿಸುತ್ತಿರುವ ಹಯಗ್ರೀವ ಸಿನಿಮಾದ ಮೂಹರ್ತವು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆದಿದ್ದು, ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಹಯಗ್ರೀವ ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆ ಮಾಡಲಾಗಿದೆ.

ಈ ಸಂಬಂಧ ನಿರ್ಮಾಪಕರಾದ ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ನಿರ್ದೇಶಕ ರಘು ಅವರ ಬೆಲ್ ಕಿರುಚಿತ್ರ ವೀಕ್ಷಿಸಿದ ನನಗೆ ತುಂಬಾ ಇಷ್ಟವಾಯಿತು. ಹೀಗಾಗಿ, ರಘು ಅವರಿಂದ ನಟ ಧನ್ವೀರ್ ಇಟ್ಟುಕೊಂಡು ಕಥೆ ಬರೆಸಿ ಇದೀಗ ಹಯಗ್ರೀವ್ ಮಾಸ್ ಟೈಟಲ್ ಮೂಲಕ ಕಮರ್ಷಿಯಲ್ ಸಿನಿಮಾವನ್ನು ತರಲು ಮುಂದಾಗಿದ್ದೇವೆ. ಕನ್ನಡ ಸಿನಿ ಇತಿಹಾಸದಲ್ಲಿ ಇಂತಹ ಕಥೆ ಬಂದಿಲ್ಲ. ಫೆ.8 ರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿಸಿದರು.

ಚಿತ್ರದ ನಿರ್ದೇಶಕ ರಘು ಮಾತನಾಡಿ, ಪುರಾಣದ ಕಲ್ಪನೆಯಲ್ಲಿ ನಡೆಯುವ ಕ್ರೈಂ ಅನ್ನು ಪ್ರಧಾನವಾಗಿಸಿಕೊಂಡು ಸೃಷ್ಟಿಯ ವಿರುದ್ಧ ಮನುಷ್ಯ ಎದುರು ನಿಂತರೇ ಏನಾಗಬಹುದು ಎಂಬುದನ್ನು ಕೇಂದ್ರೀಕರಿಸಿ ಕಥೆ ಹೆಣೆಯಲಾಗಿದೆ. ರಂಗಾಯಣ ರಘು, ರವಿಶಂಕರ್, ತಾರಾ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಬೆಂಗಳೂರಿನಲ್ಲಿ ಸಂಪೂರ್ಣ ಚಿತ್ರೀಕರಣ ನಡೆಯಲಿದೆ ಎಂದು ಹೇಳಿದರು.

ನಟ ಧನ್ವೀರ್ ಮಾತನಾಡಿ, ಇದು ನನ್ನ 5ನೇ ಸಿನಿಮಾ. ಸಿನಿಮಾ ಕಥೆ ಅದ್ಭುತವಾಗಿದೆ. ಅದರಂತೆ ಪರದೆಯ ಮೇಲೆ ತರುತ್ತೇವೆ. ಸಿನಿಮಾದ ಪಾತ್ರಕ್ಕಾಗಿ ದೇಹವನ್ನು ದಂಡಿಸಿ ಸಿಕ್ಸ್ ಪ್ಯಾಕ್ ಗಾಗಿ ಕಸರತ್ತು ನಡೆಸಲಾಗುತ್ತಿದೆ ಎಂದರು.

ನಟಿ ಸಂಜನಾ ಆನಂದ ಮಾತನಾಡಿ, ತುಂಬ ಶಕ್ತಿಶಾಲಿ ಟೈಟಲ್ ಮೂಲಕ ಸಿನಿಮಾ ನಿರ್ಮಿಸಲಾಗಿದೆ. ಮೊದಲ ಬಾರಿಗೆ ಧನ್ವೀರ್ ಅವರೊಂದಿಗೆ ನಟಿಸುತ್ತಿದ್ದೇವೆ ಎಂದರು.

ನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್‌ ಷರೀಫ್‌, ಚಿತ್ರ ತಂಡದ ಯೋಗಾನಂದ, ಕಾರ್ತಿಕ್, ಚಂದನ್ ಗೌಡ, ಶೈಲೇಶ್, ಮಹೇಶ್, ಉಮೇಶ್, ಅರ್ಜುನ್ ಮೊದಲಾದವರು ಇದ್ದರು.