ಸಾರಾಂಶ
ತಾತ್ಕಾಲಿಕ ವ್ಯಾಪಾರ ಮಳಿಗೆ । ಜಿಲ್ಲಾ ಕ್ರೀಡಾಂಗಣದ ರಸ್ತೆ, ರೇಲ್ವೆ ನಿಲ್ದಾಣದ ರಸ್ತೆ, ಬೀದಿಗಳು ವ್ಯಾಪಾರಿ ತಾಣಗಳಾಗಿ ಮಾರ್ಪಾಡು
ರಾಮನಗರ: ರೇಷ್ಮೆನಗರಿ ರಾಮನಗರದಲ್ಲಿ ಭಾವೈಕ್ಯತೆಯ ಪ್ರತೀಕವಾಗಿ ಆಚರಿಸುತ್ತಿರುವ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವ ಸುತ್ತಮುತ್ತಲ ಜಿಲ್ಲೆಗಳ ಜನರ ಗಮನ ಸೆಳೆಯುತ್ತಿದೆ.ಪ್ರತಿ ಆಷಾಢದಲ್ಲೂ ನಡೆಯುವ ಶ್ರೀ ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವದ ಬಳಿಕ ಒಂದು ವಾರದ ಅಂತರದಲ್ಲಿ ನಡೆಯುವ ಶ್ರೀ ಚಾಮುಂಡೇಶ್ವರಿ ಅಮ್ಮನವರು ಸೇರಿದಂತೆ 9 ಶಕ್ತಿ ದೇವತೆಗಳ ಕರಗ ಮಹೋತ್ಸವ ನಾಡಿನ ವಿಶೇಷತೆಗಳಲ್ಲಿ ಒಂದಾಗಿದೆ.
ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದಲ್ಲಿ ಹಿಂದೂ ಧರ್ಮೀಯರೊಂದಿಗೆ ಅನ್ಯ ಧರ್ಮೀಯರು ಪಾಲ್ಗೊಳ್ಳುವುದು ರೂಢಿ. ಹಿಂದೂಗಳು ಇಷ್ಟಾರ್ಥ ಸಿದ್ಧಿಸುವಂತೆ ದೇವರಿಗೆ ತಂಬಿಟ್ಟು ಆರತಿ ಬೆಳಗಿ ನಿವೇದಿಸಿಕೊಂಡರೆ, ಅನ್ಯ ಧರ್ಮೀಯರ ಮಹೋತ್ಸವಕ್ಕೆ ಬೆಂಬಲಿಸುತ್ತಿರುವುದು ಸಾಮಾಜಿಕವಾಗಿ ಎಲ್ಲ ಧರ್ಮೀಯರ ಪರಸ್ಪರ ಸಹೋದರತ್ವ ಮತ್ತು ಭಾವೈಕ್ಯತೆಯನ್ನು ಗಟ್ಟಿಗೊಳಿಸುತ್ತಿದೆ.5-6 ಕೋಟಿ ರು.ಗಳ ವಹಿವಾಟು:
ಜಿಲ್ಲಾ ಕ್ರೀಡಾಂಗಣದ ರಸ್ತೆ, ರೈಲ್ವೆ ನಿಲ್ದಾಣದ ರಸ್ತೆ, ಎಂ.ಜಿ.ರಸ್ತೆ, ಜೂನಿಯರ್ ಕಾಲೇಜು ರಸ್ತೆಗಳ ಬದಿಗಳು ತಾತ್ಕಾಲಿಕ ಮಳಿಗೆಗಳಿಂದ ವ್ಯಾಪಾರಿ ತಾಣಗಳಾಗಿ ಮಾರ್ಪಾಟ್ಟಿದೆ.ರಸ ಮಂಜರಿ ಕಾರ್ಯಕ್ರಮದಷ್ಟೇ ವಿಶೇಷವಾಗಿ ಮನೆ ಅಲಂಕಾರಿಕ ವಸ್ತುಗಳು, ಕೃತಕಾಭರಣ, ಮಕ್ಕಳ ಅಟಿಕೆಗಳು, ದಿನ ಬಳಕೆ ವಸ್ತುಗಳು. ಕರಕುಶಲ ವಸ್ತುಗಳು, ರೆಡಿಮೇಡ್ ಬಟ್ಟೆಗಳು, ಆಹಾರ ಮಳಿಗೆಗಳು, ಟ್ಯಾಟು, ಮೆಹಂದಿ ಕಲಾವಿದರು ಜನರನ್ನು ಆಕರ್ಷಿಸುತ್ತಿರುವುದು ವಿಶೇಷ. ರಾಜ್ಯದ ವಿವಿಧ ಜಿಲ್ಲೆಗಳಿಂದ ವ್ಯಾಪಾರಕ್ಕಾಗಿ ನೂರಾರು ಕುಟುಂಬಗಳು ಒಂದು ವಾರ ವ್ಯಾಪಾರ ವಹಿವಾಟ ನಡೆಸಲಿವೆ.
ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮನರಂಜನೆ ಮತ್ತು ಯುವ ಸಮೂಹವನ್ನು ಆಕರ್ಷಿಸುವ ಹಾಗೂ ಮೈನವಿರೇಳಿಸುವ ಆಟಿಕೆಗಳನ್ನು ಅಳವಡಿಸಲಾಗಿದೆ. ಬಗೆಬಗೆಯ ಆಹಾರ ಖಾದ್ಯಗಳ ಮಳಿಗೆಗಳು ಸ್ಥಾಪನೆಯಾಗಿವೆ. ಐಸ್‌ಕ್ರೀಂ, ಹಪ್ಪಳ, ಬಜ್ಜಿ-ಬೋಂಡ, ಚುರುಮುರಿ, ಗೋಬಿ ಮಂಚೂರಿ ಸ್ಟಾಲ್‌ಗಳಿಗೆ ಹೆಚ್ಚು ಬೇಡಿಕೆ.ಮಹಿಳಾ ಒಕ್ಕೂಟಗಳು ಉಪ್ಪಿನ ಕಾಯಿ, ಸಂಡಿಗೆ, ಹಪ್ಪಳ ಆಹಾರ ವಸ್ತುಗಳು, ಕರಕುಶಲ ವಸ್ತುಗಳು, ಖಾದಿ, ರೇಷ್ಮೆ ಬಟ್ಟೆಗಳಿಗೆ ಕರಗ ಮಹೋತ್ಸವ ಮಾರುಕಟ್ಟೆ ಸೃಷ್ಟಿಸಿದೆ. ಹೀಗೆ ರಸ್ತೆ ಬದಿ ವ್ಯಾಪಾರಕ್ಕೆ ಹಿಂದೂಗಳು ಮಾತ್ರವಲ್ಲ, ಎಲ್ಲ ಧರ್ಮೀಯರು ಮಳಿಗೆಗಳನ್ನು ಸ್ಥಾಪಿಸಿ ವಹಿವಾಟು ನಡೆಸುತ್ತಿರುವುದು ಕಣ್ಮನ ಸೆಳೆಯುತ್ತಿದೆ.
ಪ್ರತಿ ವರ್ಷ ಸುಮಾರು ಒಂದು ಲಕ್ಷ ಮಂದಿ ಕರಗ ಮಹೋತ್ಸವಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಮಹೋತ್ಸವದ ಒಂದು ವಾರ ಅವಧಿಯಲ್ಲಿ ಸುಮಾರು 5ರಿಂದ 6 ಕೋಟಿ ರುಪಾಯಿ ಮೊತ್ತದ ವಹಿವಾಟು ನಡೆಯುವ ಅಂದಾಜು ಇದೆ ಎನ್ನಲಾಗಿದೆ.ಬಹುತೇಕ ವ್ಯಾಪಾರಿಗಳು ಉತ್ತರ ಕರ್ನಾಟಕದವರೇ
ರಾಮನಗರದ ಜೂನಿಯರ್ ಕಾಲೇಜು ಮೈದಾನದ ಆವರಣದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಆಗಮಿಸುವ ರಸ್ತೆ ಬದಿ ವ್ಯಾಪಾರಿಗಳು ಬಹುತೇಕ ಉತ್ತರ ಕರ್ನಾಟಕದವರೇ ಆಗಿದ್ದಾರೆ. ಬೀದರ್, ಕಲಬುರಗಿ, ರಾಯಚೂರು ಸೇರಿದಂತೆ ಇತರೆ ಕಡೆಗಳಿಂದ ಆಗಮಿಸಿ ಮಳಿಗೆ ನಿರ್ಮಾಣ ಮಾಡಿ ವ್ಯಾಪಾರ ನಡೆಸುತ್ತಾರೆ. ಹಾಗಾಗಿ ಹಳೆಯ ಮೈಸೂರು ಪ್ರಾಂತ್ಯದ ವ್ಯಾಪಾರಿಗಳಿಗಿಂತ ಹೆಚ್ಚಾಗಿ ಉತ್ತರ ಕರ್ನಾಟಕದ ವರ್ತಕರೆ ತುಂಬಿರುತ್ತಾರೆ.