ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ಚಂದಗಾಲು ಶಿವಣ್ಣರಿಂದ ಉಪವಾಸ ಸತ್ಯಾಗ್ರಹ

| Published : Apr 03 2024, 01:35 AM IST

ಕೆಆರ್‌ಎಸ್‌ನಿಂದ ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ಚಂದಗಾಲು ಶಿವಣ್ಣರಿಂದ ಉಪವಾಸ ಸತ್ಯಾಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ ಕೊಳ್ಳದ ಜಲಾಶಯಗಳಿಂದ ನಿರಂತರ ತಮಿಳುನಾಡಿಗೆ ನೀರು ಬಿಟ್ಟು ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಈಗ ನಾಲೆ ಮತ್ತು ಕೆರೆಕಟ್ಟೆಗಳಿಗೆ ನೀರು ಹರಿಸಿ ಎಂದರೆ ನೀರು ಇಲ್ಲ ಎಂದು ಸಬೂಬು ಹೇಳಲಾಗುತ್ತಿದೆ. ಆಳುವ ಸರಕಾರದ ಧೋರಣೆಯಿಂದ ಕರ್ನಾಟಕದ ನೀರು ತಮಿಳುನಾಡಿನ ಹಕ್ಕಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಾನುವಾರುಗಳಿಗೆ ಕುಡಿಯಲು ಹಾಗೂ ಜೀವಸಂಕುಲದ ಉಳಿವಿಗಾಗಿ ಕೆಆರ್ ಎಸ್ ಅಣೆಕಟ್ಟೆಯಿಂದ ಕೆರೆಕಟ್ಟೆಗಳಿಗೆ ನೀರು ಹರಿಸಲು ಆಗ್ರಹಿಸಿ ಜಿಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ಚಂದಗಾಲು ಶಿವಣ್ಣ ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸಿದ ಅವರು, ಕೃಷ್ಣರಾಜಸಾಗರ ಜಲಾಶಯದಿಂದ ಕೆರೆಕಟ್ಟೆಗಳಿಗೆ ನೀರು ಹರಿಸಿ ಜೀವಸಂಕುಲ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಚಂದಗಾಲು ಶಿವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಮಳೆ ಅಭಾವ ಮತ್ತು ಭೀಕರ ಬರಗಾಲದಿಂದ ನೀರಿನ ಕೊರತೆ ಎದುರಾಗಿದೆ. ಕೆರೆಕಟ್ಟೆಗಳೆಲ್ಲ ನೀರಿಲ್ಲದೆ ಒಣಗಿವೆ. ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಹ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಮ್ಮ ನೀರು ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದ್ದರು. ಈಗ ಅವರೇ ಜಲಸಂಪನ್ಮೂಲ ಸಚಿವರಾಗಿದ್ದಾರೆ. ಆದರೂ ನಾಲೆ ಮತ್ತು ಕೆರೆಕಟ್ಟೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಮೌನವಹಿಸಿದ್ದಾರೆ ಎಂದರು.

ನೀರಿನ ಹಾಹಾಕಾರ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಿಂದ ಜಾನುವಾರು ಮತ್ತು ಪಕ್ಷಿ ಸಂಕುಲ ಕುಡಿಯಲು ನೀರಿಲ್ಲದೆ ಸಾವನ್ನಪ್ಪುವ ಪರಿಸ್ಥಿತಿ ಎದುರಾಗಿದೆ. ದಿನೇ ದಿನೇ ಪರಿಸ್ಥಿತಿ ಕೈ ಮೀರುತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೀರಿನ ಹಾಹಾಕಾರ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾವೇರಿ ಕೊಳ್ಳದ ಜಲಾಶಯಗಳಿಂದ ನಿರಂತರ ತಮಿಳುನಾಡಿಗೆ ನೀರು ಬಿಟ್ಟು ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಈಗ ನಾಲೆ ಮತ್ತು ಕೆರೆಕಟ್ಟೆಗಳಿಗೆ ನೀರು ಹರಿಸಿ ಎಂದರೆ ನೀರು ಇಲ್ಲ ಎಂದು ಸಬೂಬು ಹೇಳಲಾಗುತ್ತಿದೆ. ಆಳುವ ಸರಕಾರದ ಧೋರಣೆಯಿಂದ ಕರ್ನಾಟಕದ ನೀರು ತಮಿಳುನಾಡಿನ ಹಕ್ಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಲಾಶಯದಿಂದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಜೀವಸಂಕುಲಗಳನ್ನು ಉಳಿಸಬೇಕು. ಇಲ್ಲದಿದ್ದರೆ ಮತ ಕೇಳಲು ಮನೆ ಬಳಿ ಹೋದರೆ ಜನತೆ ಬಾಗಿಲು ಹಾಕಿಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಚಂದಗಾಲು ಶಿವಣ್ಣ ಉಪವಾಸ ಸತ್ಯಾಗ್ರಹಕ್ಕೆ ಮುಖಂಡರಾದ ಸಿ.ಟಿ ಮಂಜುನಾಥ್, ಕೇಶವ್, ನಿತ್ಯಾನಂದ, ಸಿದ್ದರಾಜುಗೌಡ, ಶಂಕರ್, ಪ್ರಸನ್ನ, ವಿನೋಭ ಹಂಚಹಳ್ಳಿ, ಹೊಸಹಳ್ಳಿ ಶಿವು, ನೆರಳು ಕೃಷ್ಣ ಹಲವರು ಬೆಂಬಲ ಸೂಚಿಸಿ ಪಾಲ್ಗೊಂಡರು. ಬರದಿಂದ ತತ್ತರಿಸಿರುವ ಜನರಿಗೆ ಸೂಕ್ತ ಪರಿಹಾರ ರೂಪಿಸಿ: ಎನ್ .ಎಲ್ .ಭರತ್ ರಾಜ್

ಕನ್ನಡಪ್ರಭ ವಾರ್ತೆ ಮಂಡ್ಯಬರದಿಂದ ತತ್ತರಿಸಿರುವ ಜನರಿಗೆ ಸೂಕ್ತ ಪರಿಹಾರ ರೂಪಿಸುವಂತೆ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್. ಭರತ್‌ರಾಜ್ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂದೂ ಕಂಡರಿಯದ ಬರ ತಲೆದೋರಿದೆ. ಬರದಿಂದ ಜನತೆ ತತ್ತರಿಸಿದ್ದಾರೆ. ನಮ್ಮನ್ನಾಳುವ ಸರ್ಕಾರಗಳು ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿದರು.ಜಿಲ್ಲೆಯಲ್ಲಿ ಕಬ್ಬು, ರೇಷ್ಮೆ, ಭತ್ತ, ರಾಗಿ, ಜೋಳ ಇತರೆ ಬೆಳೆಗಳು ನೀರಿಲ್ಲದೆ ಒಣಗಿವೆ. ಭೂಮಿಗೆ ಬಿತ್ತನೆ ಹಾಕಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಖರ್ಚು ಮಾಡಿದ ಹಣವೂ ಬಂದಿಲ್ಲ. ಸರ್ಕಾರಗಳು ಸೂಕ್ತ ಪರಿಹಾರ ರೂಪಿಸಿಲ್ಲ. ತಕ್ಷಣ ಕನಿಷ್ಠ ಎಕರೆಗೆ 25 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರೈತರು ಸಾಲ ಮಾಡಿ ಕೊಳವೆಬಾವಿ ಕೊರೆಸಿ ನೀರು ಬರದೆ ಮತ್ತೆ ಸಾಲದ ಸುಳಿಗೆ ಸಿಲುಕಿದ್ದಾರೆ. ಕೂಲಿ ಮಾಡಿ ಜೀವನ ನಡೆಸಲು ಕೂಲಿ ಸಹ ಸಿಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಾರ್ಷಿಕ 150 ದಿನ ಕೆಲಸ ಕೊಡಬೇಕೆಂಬ ನಿಯಮವಿದ್ದರೂ, ಅದು ಜಾರಿಯಾಗುತ್ತಿಲ್ಲ ಎಂದು ಕಿಡಿಕಾರಿದರು.ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಕೆರೆ-ಕಟ್ಟೆಗಳು ಬತ್ತಿಹೋಗಿವೆ. ಕೆಆರ್‌ಎಸ್‌ನಿಂದ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿ ಜಾನುವಾರುಗಳಿಗೆ ಹಾಗೂ ಕಾಡು ಪ್ರಾಣಿಗಳಿಗಾದರೂ ರಕ್ಷಿಸಲು ಮುಂದಾಗಬೇಕು. ಪಂಚಾಯ್ತಿ ಮಟ್ಟದಲ್ಲಿ ಮೇವು ಸಂಗ್ರಹಿಸಿ ಹಂಚಬೇಕು ಎಂದು ಒತ್ತಾಯಿಸಿದರು.

ಹಸು-ಎಮ್ಮೆಗಳು ಬಿಸಿಲಿನ ಝಳಕ್ಕೆ ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಲಿಂಗರಾಜಮೂರ್ತಿ, ಟಿ.ಎಸ್. ಸಿದ್ದೇಗೌಡ, ಗುರುಸ್ವಾಮಿ, ಸತೀಶ್, ರಾಮಣ್ಣ ಇದ್ದರು.