ಕಾಯಕ ತತ್ವಕ್ಕೆ ಶಕ್ತಿ ನೀಡಿದ ನುಲಿಯ ಚಂದಯ್ಯ-ರಾಘವೇಂದ್ರರಾವ್‌

| Published : Aug 10 2025, 01:33 AM IST

ಸಾರಾಂಶ

ಹನ್ನೆರಡನೆಯ ಶತಮಾನದಲ್ಲಿ ಬಾಳಿ ಬದುಕಿದ ನುಲಿಯ ಚಂದಯ್ಯ ಅವರು ಕಾಯಕ ನಿಷ್ಠೆಯಿಂದಲೇ ಪ್ರಸಿದ್ಧಿ ಪಡೆದರು. ನುಲಿಯ ಚಂದಯ್ಯನವರು ವಚನಕಾರರಾಗಿ ಕನ್ನಡಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದು ತಹಸೀಲ್ದಾರ್ ಕೆ. ರಾಘವೇಂದ್ರರಾವ್ ತಿಳಿಸಿದರು.

ಶಿರಹಟ್ಟಿ: ಹನ್ನೆರಡನೆಯ ಶತಮಾನದಲ್ಲಿ ಬಾಳಿ ಬದುಕಿದ ನುಲಿಯ ಚಂದಯ್ಯ ಅವರು ಕಾಯಕ ನಿಷ್ಠೆಯಿಂದಲೇ ಪ್ರಸಿದ್ಧಿ ಪಡೆದರು. ನುಲಿಯ ಚಂದಯ್ಯನವರು ವಚನಕಾರರಾಗಿ ಕನ್ನಡಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದು ತಹಸೀಲ್ದಾರ್ ಕೆ. ರಾಘವೇಂದ್ರರಾವ್ ತಿಳಿಸಿದರು.ಶನಿವಾರ ತಹಸೀಲ್ದಾರ್‌ ಕಾರ್ಯಾಲಯದ ಸಭಾ ಭವನದಲ್ಲಿ ಏರ್ಪಡಿಸಿದ್ದ ನುಲಿಯ ಚಂದಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ನುಲಿಯ ಚಂದಯ್ಯ ಅವರು ನಿತ್ಯ ಹುಲ್ಲನ್ನು ಕೊಯ್ದು ತಂದು ಹಗ್ಗ ತಯಾರಿಸಿ ಮಾರಾಟ ಮಾಡಿ ಬಂದಿದ್ದ ಹಣದಲ್ಲಿ ತಮ್ಮ ಜೀವನ ನಡೆಸುವುದರ ಜತೆಗೆ ದಾಸೋಹ ಮಾಡುತ್ತಿದ್ದರು. ದಾಶನಿಗಳು ಶ್ರೀಮಂತರೇ ಇರಬೇಕಂತಿಲ್ಲ. ದಾನ ಮಾಡುವ ಗುಣವಿರಬೇಕು ಎನ್ನುವುದನ್ನು ತೋರಿಸಿಕೊಟ್ಟು ಕಾಯಕದ ಮಹತ್ವ ಸಾರಿದರು ಎಂದರು.ಕಾಯಕವೇ ಶ್ರೇಷ್ಠವೆಂದು ಕಾಯಕ ಪರಂಪರೆಗೆ ಶಕ್ತಿ ನೀಡಿದ ನುಲಿಯ ಚಂದಯ್ಯನವರ ವಚನಗಳನ್ನು ಪ್ರತಿ ಮನೆಗೆ ತಲುಪಿಸುವ ಕಾರ್ಯವಾಗಬೇಕಿದೆ. ಚಂದಯ್ಯನವರ ಚಿಂತನೆಗಳು ಸಮಾಜದಲ್ಲಿ ಮುಂದೆ ಸಾಗಬೇಕು. ಇವರ ಸಾಧನೆಯು ನಮ್ಮೆಲ್ಲರಿಗೆ ಮಾದರಿಯಾಗಿದ್ದು, ಅವರ ವಚನಗಳ ಸಾರ ಅರಿತು ಬದುಕು ನಡೆಸಬೇಕಿದೆ ಎಂದು ತಿಳಿಸಿದರು.ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಅಂದು ಎಲ್ಲರಿಗೂ ಕೊಡುವ ಮನಸ್ಸು ಇತ್ತು. ಕೇಳುವವರು ಇರಲಿಲ್ಲ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೊಡುವುದಕ್ಕಿಂತ ಬೇಡುವ ಮನಸ್ಥಿತಿಗಳೇ ಹೆಚ್ಚಾಗಿವೆ. ಕಾಯಕ ಸಿದ್ಧಾಂತದ ಮೂಲಕ ಬದುಕು ರೂಪಿಸಿಕೊಳ್ಳಬೇಕಾಗಿದೆ. ಪ್ರತಿಯೊಂದಕ್ಕೂ ಕೈಚಾಚುವ ಮನಸ್ಥಿತಿ ಕಡಿಮೆಯಾಗಬೇಕಿದೆ ಎಂದು ಹೇಳಿದರು. ಬಸವಾದಿ ಶರಣರಾದ ನುಲಿಯ ಚಂದಯ್ಯ ತಮ್ಮ ಕಾಯಕದಿಂದ ಹೆಸರಾದವರು. ದುಡಿದು ತಿನ್ನಬೇಕು ಎನ್ನುತ್ತಿದ್ದ ಇವರು ತಮ್ಮ ದುಡಿಮೆಯ ಹಣದಿಂದ ಜಂಗಮ ದಾಸೋಹ ಮಾಡುತ್ತಿದ್ದರು. ಇಂತಹ ಮಹಾನುಭಾವರ ಸಂದೇಶಗಳನ್ನು ನಾವೆಲ್ಲ ಎಲ್ಲೆಡೆ ಪ್ರಚಾರ ಮಾಡಬೇಕು ಎಂದರು. ಕಲ್ಯಾಣ ನಾಡಿನ ಶ್ರೇಷ್ಠ ಶರಣ, ಅನುಭಾವಿ ವಚನಕಾರ ನುಲಿಯ ಚಂದಯ್ಯನವರು ಕಾಯಕ ನಿಷ್ಠೆ ಶಿವನಿಗೆ ಅರ್ಪಿತವಾಗುತ್ತದೆ ಎಂದು ಅಚಲವಾಗಿ ನಂಬಿ ಅದರಂತೆ ನಡೆದರು. ಪೂಜೆ, ಪುನಸ್ಕಾರಗಳಿಗಿಂತ ಕಾಯಕ ನಿಷ್ಠೆಯೇ ಮೇಲು ಎಂದು ಸಾರಿದರು. ಅಂತಹ ಮಹಾನ್ ಶರಣರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.೧೨ನೇ ಶತಮಾನದಲ್ಲೇ ಕಾಯಕದ ಮಹತ್ವವನ್ನು ಸಾರಿದ ಶಿವಶರಣ ನುಲಿಯ ಚಂದಯ್ಯ ಅವರ ತತ್ವಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕತೆ ಎನಿಸುತ್ತಿದೆ. ಬಸವಣ್ಣನವರ ಸಮಕಾಲೀನ ನುಲಿಯ ಚಂದಯ್ಯನವರು ಕಾಯಕದ ಮೂಲಕವೇ ಉನ್ನತಿ ಕಂಡವರು. ಇವರ ಕಾಯಕ ನಿಷ್ಠೆ ಹಾಗೂ ಪ್ರಾಮಾಣಿಕತೆ ಬಸವಣ್ಣನವರಿಗೆ ಪ್ರಿಯವಾಗಿದ್ದು, ಇವರು ರಚಿಸಿರುವ ಸುಮಾರು ೪೮ ವಚನಗಳು ಕಾಯಕದ ಶ್ರೇಷ್ಠತೆಯನ್ನು ಸಾರುತ್ತದೆ. ಆದ್ದರಿಂದ ಇವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದರು.ಲಿಂಗಪೂಜೆಗಿಂತ ಕಾಯಕದ ಪೂಜೆಗೆ ಮಹತ್ವ ನೀಡಿದ ನುಲಿಯ ಚಂದಯ್ಯ ಅವರು ವಚನಗಳನ್ನು ರಚಿಸುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಕಾಯಕಕ್ಕೆ ಒತ್ತು ನೀಡುವ ಮೂಲಕ ಕೊರಚ, ಕೊರವ ಸಮುದಾಯದ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕಾಯಕದಲ್ಲಿಯೇ ದೇವರನ್ನು ಕಂಡ ಮಹಾಶರಣರು ಎಂದು ತಿಳಿಸಿದರು.ತಹಸೀಲ್ದಾರ್ ಕಾರ್ಯಾಲಯದ ವಿನೋದ ಪಾಟೀಲ ಸೇರಿದಂತೆ ಸಿಬ್ಬಂದಿ ಜಯಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.