ಆದರ್ಶ ವ್ಯಕ್ತಿತ್ವ ಕಟ್ಟಿಕೊಳ್ಳಲು ಪ್ರೇರಣೆ ನುಲಿಯ ಚಂದಯ್ಯ: ಡಾ. ಮಹಾಂತ ಸ್ವಾಮೀಜಿ

| Published : Sep 11 2025, 01:00 AM IST

ಆದರ್ಶ ವ್ಯಕ್ತಿತ್ವ ಕಟ್ಟಿಕೊಳ್ಳಲು ಪ್ರೇರಣೆ ನುಲಿಯ ಚಂದಯ್ಯ: ಡಾ. ಮಹಾಂತ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

೧೨ನೇ ಶತಮಾನದ ಶರಣರ ಕಾಲಘಟ್ಟದಲ್ಲಿ ಕಾಯಕದ ಮೂಲಕ ತಳ ಸಮುದಾಯವೂ ಕೂಡ ಆದರ್ಶದ ವ್ಯಕ್ತಿತ್ವ ಕಟ್ಟಿಕೊಳ್ಳಲು ಪ್ರೇರಣೆ ನೀಡಿದ ನೂಲಿ ಚಂದಯ್ಯ ಅವರು ಮಹಾನ್ ಶರಣರಾಗಿದ್ದರು ಎಂದು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸೊರಬ

೧೨ನೇ ಶತಮಾನದ ಶರಣರ ಕಾಲಘಟ್ಟದಲ್ಲಿ ಕಾಯಕದ ಮೂಲಕ ತಳ ಸಮುದಾಯವೂ ಕೂಡ ಆದರ್ಶದ ವ್ಯಕ್ತಿತ್ವ ಕಟ್ಟಿಕೊಳ್ಳಲು ಪ್ರೇರಣೆ ನೀಡಿದ ನೂಲಿ ಚಂದಯ್ಯ ಅವರು ಮಹಾನ್ ಶರಣರಾಗಿದ್ದರು ಎಂದು ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಸಂತ ಸೆಬಾಸ್ಟಿಯನ್ ಚರ್ಚ್ ಸಭಾಂಗಣದಲ್ಲಿ ತಾಲೂಕು ಕೊರಮ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನೂಲಿ ಚಂದಯ್ಯ ಅವರ ೯೧೮ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನದಿಯಲ್ಲಿ ಪುಂಡಿ ನಾರು ತೊಳೆಯುವಾಗ ಕಟ್ಟಿಕೊಂಡ ಲಿಂಗ ಕೆಳಗೆ ಬಿದ್ದುಹೋಗಿತ್ತು. ಅದನ್ನು ಗಮನಿಸದೆ ಪುಂಡಿ ನಾರು ಸ್ವಚ್ಛ ಮಾಡುವಲ್ಲಿ ಮಗ್ನರಾಗಿರುವುದು ಅವರ ಕಾಯಕ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರಾಮಾಣಿಕವಾಗಿ ಬದುಕಿ ಕಾಯಕ ಶ್ರದ್ಧೆ ಮತ್ತು ಶ್ರೇಷ್ಠತೆಯ ಉದ್ದೇಶ ಹೊಂದಿದ್ದ ಶಿವಶರಣರು ಆಸೆ, ರೋಷವನ್ನು ತ್ಯಜಿಸಿ ಸರಳವಾಗಿ ಬದುಕಿದ್ದರು. ಸಮ ಸಮಾಜವನ್ನು ಸ್ಥಾಪಿಸಲು ಅನುಭವ ಮಂಟಪ ಸ್ಥಾಪಿಸಿದ್ದರು ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಸಣ್ಣಪುಟ್ಟ ಸಮುದಾಯದ ಜನರನ್ನು ಪ್ರೀತಿಸಿ ತಮ್ಮ ಅಧಿಕಾರಾವಧಿಯಲ್ಲಿ ಸಹಾಯ ಮಾಡಿದ್ದಾರೆ. ಇಂತಹ ಮಹಾನ್ ನಾಯಕರು ಜೊತೆಗೂಡಿ ಹಿಂದುಳಿದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಿದಾಗ ಮಾತ್ರ ಅವರ ಆತ್ಮಬಲ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸಂಪ್ರದಾಯ ಮತ್ತು ಸಂಸ್ಕಾರವನ್ನು ಬೆಳೆಸಿದಾಗ ನೆಮ್ಮದಿ ದೊರೆಯುತ್ತದೆ ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷೆ ಜಿ. ಪಲ್ಲವಿ ಮಾತನಾಡಿ, ಸಮಾನತೆಯ ಶಿಕ್ಷಣ ಮಹಿಳೆಯರಿಗೂ ದೊರೆಯುವ ನಿಟ್ಟಿನಲ್ಲಿ ಸಾಧು, ಸಂತರು ಅಂದೇ ಪ್ರತಿಪಾದಿಸಿದ್ದಾರೆ. ಸಮಾಜಮುಖಿಯಾಗಿ ಗುರುತಿಸಿಕೊಳ್ಳಲು ಶಿಕ್ಷಣವನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕಿದೆ. ನಾಗರಿಕ ಬದುಕಿನಲ್ಲಿ ಸಾಮಾಜಿಕ ಜವಾಬ್ದಾರಿ ಬರಬೇಕಾದರೆ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಅಂತಹ ಸಂದೇಶ ಮೂಡಿಸಬೇಕು ಎಂದರು.

ಎನ್‌ಆರ್‌ಪುರ ತಾಲೂಕು ಮುತ್ತಿನಕೊಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಟೂಕಪ್ಪ, ನೂಲಿ ಚಂದಯ್ಯ ಅವರ ಕುರಿತಾದ ಉಪನ್ಯಾಸ ನೀಡಿದರು. ತಾಲೂಕು ಕೊರಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.

ನಂದಿ ಸುಕ್ಷೇತ್ರದ ನೂಲಿ ಚಂದಯ್ಯ ಪೀಠದ ಜಗದ್ಗುರು ವೃಷಭೇಂದ್ರ ಚಂದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಜ್ಯ ಕುಳುವ ಮಹಾಸಂಘದ ಅಧ್ಯಕ್ಷ ಶಿವಾನಂದ ಭಜಂತ್ರಿ, ಪ್ರಧಾನ ಕಾರ್ಯದರ್ಶಿ ಆನಂದಕುಮಾರ, ಏಕಲವ್ಯ, ಜಿಲ್ಲಾ ಕೊರಮ ಕ್ಷೇಮಾಭಿವೃದ್ದಿ ಅಧ್ಯಕ್ಷ ಪಕ್ಕೀರಪ್ಪ ಭಜಂತ್ರಿ, ಕಾರ್ಯದರ್ಶಿ ರವೀಂದ್ರಕುಮಾರ್, ತಾಲೂಕು ಕಾರ್ಯದರ್ಶಿ ಹನುಮೇಶ, ಶಿವಾನಂದಪ್ಪ, ಹನುಮಂತ, ಕೆರೆಸ್ವಾಮಿ, ಪರಮೇಶ್ವರಪ್ಪ, ಮೈಲಾರಪ್ಪ, ನಾಗರಾಜ ಕುಪ್ಪಗಡ್ಡೆ, ಚಂದ್ರಶೇಖರ, ಸಂಜೀವ, ಸುರೇಶ, ನಾಗರಾಜ, ಜಯಮ್ಮ ಕೋಡಿಹಳ್ಳಿ ಮೊದಲಾದವರು ಹಾಜರಿದ್ದರು.