ಪೂರ್ವಜರಿಂದ ಬಂದ ಜಾಗ ಮಾರದೆ ಉಳಿಸಿಕೊಳ್ಳಿ: ಸುಜಾ ಕುಶಾಲಪ್ಪ

| Published : Oct 29 2023, 01:00 AM IST

ಸಾರಾಂಶ

ಪೂರ್ವಜರಿಂದ ಬಂದ ಜಾಗ ಮಾರದೆ ಉಳಿಸಿಕೊಳ್ಳಿ: ಸುಜಾ ಕುಶಾಲಪ್ಪ
ಕನ್ನಡಪ್ರಭ ವಾರ್ತೆ ಶ್ರೀಮಂಗಲ ಪೂರ್ವಜರು, ಹಿರಿಯರಿಂದ ಬಳುವಳಿಯಾಗಿ ಬಂದಿರುವ ಜಾಗಗಳನ್ನು ಹಣದ ಆಸೆಯಿಂದ ಕೊಡಗಿನಲ್ಲಿ ಮಾರಾಟ ಮಾಡುವುದು ಹೆಚ್ಚಾಗುತ್ತಿದೆ ಇದು ಅತ್ಯಂತ ಆತಂಕಕಾರಿ ಬೆಳವಣಿಗೆ. ಆಸ್ತಿ ಮಾರಾಟ ಮಾಡದೆ ಉಳಿಸಿಕೊಳ್ಳಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಕರೆ ನೀಡಿದರು ಟಿ.ಶೆಟ್ಟಿಗೇರಿಯ ಇಲ್ಲಿನ ಮೂಂದ್ ನಾಡ್ ಕೊಡವ ಸಮಾಜ ಆಶ್ರಯದಲ್ಲಿ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ, ಸಂಭ್ರಮ ಮಹಿಳಾ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಘ, ಕೊಡವ ತಕ್ಕ್ ಎಳ್ತ್ ಕಾರಡ ಕೂಟ ಇವರ ಆಶ್ರಯದಲ್ಲಿ ಟಿ- ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ 7ನೇ ವರ್ಷದ ಕಾವೇರಿ ಚಂಗ್ರಾಂದಿ ತೀರ್ಥ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು ಆಸ್ತಿ ಮಾರಾಟ ಮಾಡಿದ ಹಣ ಎಷ್ಟು ದಿನ ಉಳಿಯಬಹುದು ಎಂದು ಪ್ರಶ್ನಿಸಿದ ಅವರು, ಕೊಡಗಿನ ಅತ್ಯುತ್ತಮ ಗಾಳಿ, ನೀರಿನ ಪರಿಸರ ಚೈತನ್ಯ ವನ್ನು ನೀಡುತ್ತದೆ. ಇಂತಹ ಜಾಗಗಳನ್ನುಹಣಕ್ಕಾಗಿ ಮಾರಾಟ ಮಾಡಿ ಬೆಂಗಳೂರು, ಮೈಸೂರಿಗೆ ತೆರಳಿ ನೆಲೆಸುವಂತಾಗಿರುವುದು ದುರದೃಷ್ಟಕರ. ಕೃಷಿಯೊಂದಿಗೆ ವ್ಯಾಪಾರೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಪರ್ಯಾಯ ಆರ್ಥಿಕ ಆದಾಯಗಳಿಸಿ ಕೊಡಗಿನ ಆಸ್ತಿ ಉಳಿಸಿಕೊಳ್ಳಬೇಕು ಎಂದು ಹೇಳಿದರು. ಟಿ.ಶೆಟ್ಟಿಗೇರಿ ಕೊಡವ ಸಮಾಜ ಹಿರಿಯ-ಕಿರಿಯರನ್ನು ತೊಡಗಿಸಿಕೊಂಡು ಕಾವೇರಿ ಚಂಗ್ರಾಂದಿ ಹಬ್ಬವನ್ನು 10 ದಿನಗಳ ಕಾಲ ಸಾರ್ವತ್ರಿಕವಾಗಿ ಆಚರಿಸುವ ಮೂಲಕ ಕೊಡವ ಸಂಸ್ಕೃತಿಯ ವೈಭವವನ್ನು ಸಾರುತ್ತಿದೆ ಎಂದು ಶ್ಲಾಘಿಸಿದರು. ಪ್ರಾಸ್ತಾವಿಕ ಮಾತನಾಡಿದ ಕೊಡವ ಸಮಾಜ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ, ಹಬ್ಬಗಳನ್ನು ಸಾರ್ವತ್ರಿಕವಾಗಿ ಆಚರಿಸುವ ಮೂಲಕ ಕೊಡವ ಸಂಸ್ಕೃತಿ,ಪರಂಪರೆಯನ್ನು ಮುಂದಿನ ತಲೆಮಾರಿಗೆ ತಿಳಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಕಳೆದ 7 ವರ್ಷಗಳಿಂದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಕೊಡವ ಸಮಾಜ ಕ್ರೀಡಾ-ಸಾಂಸ್ಕೃತಿಕ ಸಮಿತಿ ಮಾಜಿ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ ಮಾತನಾಡಿದರು. ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡವ ಸಮಾಜ 1980 ರಲ್ಲಿ ಸ್ಥಾಪನೆಯಾಗಿ ಬೆಳೆದು ಬಂದ ಹಾದಿಯನ್ನು ವಿವರಿಸಿ ಇಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿ ಅನುದಾನ ಕೋರಿದರು. ಕಾರ್ಯಕ್ರಮದಲ್ಲಿ ಸುಜಾ ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕ ಗೌರಿ ಗಣೇಶೋತ್ಸವ ಸಮಿತಿ ಸದಸ್ಯ ಮಾಣೀರ ಗಗನ್,ದಾನಿ ಮುಕ್ಕಾಟೀರ ಕನ್ನು ಕರುಂಬಯ್ಯ ಹಾಜರಿದ್ದರು. ಕೊಡವ ಸಮಾಜ ನಿರ್ದೇಶಕಿಯರಾದ ಕರ್ನಂಡ ರೂಪ ದೇವಯ್ಯ ಪ್ರಾರ್ಥಿಸಿದರು. ಚಂಗುಲಂಡ ಆಶ್ವಿನಿ ಸತೀಶ್ ವಂದಿಸಿದರು. ಜನಮನ ಸೆಳೆದ ಮನರಂಜನೆ: ಚೆಟ್ಟಂಗಡ ಕುಟುಂಬದ ಮಹಿಳಾ ತಂಡದಿಂದ ಉಮ್ಮತಾಟ್, ಗೆಜ್ಜೆ ತಂಡ್ ನ್ಯತ್ಯ, ಸ್ವಾಗತ ನೃತ್ಯ,ಚೆಟ್ಟಂಗಡ ಲೇಖನ ಅಕ್ಕಮ್ಮ ರಿಂದ ಭರತನಾಟ್ಯ ಪ್ರದರ್ಶನ ,‘ತಿಂಗಕೊರ್ ಮೊಟ್ಟ್ ತಲಕಾವೇರಿ’ ತಂಡದಿಂದ ಕೋಲಾಟ್, ಕತ್ತಿಯಾಟ್, ಪರೆಯಕಳಿ ಪ್ರದರ್ಶನ, ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿನಿಯರ ತಂಡದಿಂದ ನ್ಯತ್ಯ ಜನಮನ ಸೆಳೆಯಿತು.