ಸಾರಾಂಶ
ಸೊರಬ: ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಿ ಜಾತ್ರಾ ಮಹೋತ್ಸವ ಮಾ.೧೫ ರಿಂದ ಆರಂಭವಾಗಲಿದೆ. ಈ ಹಿನ್ನೆಲೆ ಪರಿವಾರ ದೇವರನ್ನು ಕರೆ ಮಾಡುವ ಪದ್ಧತಿ ಸಕಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಜರುಗಿತು. ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ದೇವಾಲಯದ ಗುಡ್ಡದ ಮೇಲಿರುವ ಪರಿವಾರ ದೇವರಾದ ಶ್ರೀ ಕೋಟೆ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಸಂಪ್ರದಾಯದಂತೆ ಜಾತ್ರೆಗೆ ಕರೆ ನೀಡುವ ಪದ್ಧತಿ ನಡೆಯಿತು. ಅನಂತರ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ಗ್ರಾಮದ ಮಂಗಳಾರತಿ ಕಟ್ಟೆ, ಹರೀಶಿ ರಸ್ತೆ, ಮುಖ್ಯರಸ್ತೆ ಮಾರ್ಗವಾಗಿ ಶ್ರೀದೇವಿ ದೇಗುಲದವರೆಗೆ ವಿವಿಧ ವಾದ್ಯ ಮೇಳಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಅರ್ಚಕರಾದ ಅರವಿಂದ್ ಭಟ್ ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್. ಶಿವಪ್ರಸಾದ್ ಮಾತನಾಡಿ, ಜಾತ್ರಾ ಮಹೋತ್ಸವ ಹಿನ್ನೆಲೆ ಧಾರ್ಮಿಕ ಕಾರ್ಯಗಳು ಚಾಲನೆಗೊಂಡಿವೆ. ಶ್ರೀದೇವಿಯ ಪರಿವಾರ ದೇವರುಗಳಿಗೆ ಜಾತ್ರೆಗೆ ಕರೆ ನೀಡುವ ಪದ್ಧತಿಗಳನ್ನು ನಡೆಸಲಾಗುತ್ತಿದೆ. ಪರಿವಾರ ದೇವರಾದ ಶ್ರೀ ಬನಶಂಕರಿ ದೇವಾಲಯಕ್ಕೆ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ತೆರಳಲಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ದೇವಸ್ಥಾನ ಸಿಬ್ಬಂದಿ ಭಕ್ತರು ಉಪಸ್ಥಿತರಿದ್ದರು.
- - - -೧೪ಕೆಪಿಸೊರಬ೦೨:ಸೊರಬ ತಾಲೂಕಿನ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶ್ರೀ ದೇವಿಯ ಪಲ್ಲಕ್ಕಿ ಉತ್ಸವದ ಮೂಲಕ ತೆರಳಿ ಪರಿವಾರ ದೇವರಾದ ಶ್ರೀ ಕೋಟೆ ದುರ್ಗಮ್ಮದೇವಿಗೆ ಕರೆ ನೀಡುವ ಸಂಪ್ರದಾಯ ಜರುಗಿತು.