ಪರೀಕ್ಷಾ ಭಯ: ಡೆತ್‌ ನೋಟ್‌ ಬರೆದಿಟ್ಟು ಯುವಕ ಆತ್ಮಹತ್ಯೆ

| Published : Mar 15 2024, 01:17 AM IST

ಸಾರಾಂಶ

ದೊಡ್ಡಬಳ್ಳಾಪುರ: ಐಎಎಸ್ ಅಧಿಕಾರಿಯಾಗುವ ಕನಸಿನೊಂದಿಗೆ ತಯಾರಿ ನಡೆಸುತ್ತಿದ್ದ ಯುವಕನೋರ್ವ ಪರೀಕ್ಷೆ ಸಿದ್ದತೆಗೆ ಅಗತ್ಯ ಅಧ್ಯಯನದ ಕೊರತೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಮಜರಾಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ದೊಡ್ಡಬಳ್ಳಾಪುರ: ಐಎಎಸ್ ಅಧಿಕಾರಿಯಾಗುವ ಕನಸಿನೊಂದಿಗೆ ತಯಾರಿ ನಡೆಸುತ್ತಿದ್ದ ಯುವಕನೋರ್ವ ಪರೀಕ್ಷೆ ಸಿದ್ದತೆಗೆ ಅಗತ್ಯ ಅಧ್ಯಯನದ ಕೊರತೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಮಜರಾಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯುವಕ ಜಗದೀಶ್‌(28) ಮೃತ ದುರ್ದೈವಿ. ತಾಲೂಕಿನ ಹೊಸಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಮಜರಾಹೊಸಹಳ್ಳಿ ಗ್ರಾಮದಲ್ಲಿ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಡೆತ್‌ನೋಟ್‌ ಬರೆದಿಟ್ಟು ನೇಣಿಗೆ ಶರಣು:

ಕೇಂದ್ರ ಸಾರ್ವಜನಿಕ ಸೇವಾ ಪರೀಕ್ಷೆ-ಯುಪಿಎಸ್‌ಸಿ ಪರೀಕ್ಷೆಗೆ ಓದಲಾಗುತ್ತಿಲ್ಲವೆಂದು ಡೆತ್ ನೋಟ್ ಬರೆದಿಟ್ಟು ಆತ ನೇಣಿಗೆ ಶರಣಾಗಿದ್ದಾನೆ. ಡೆತ್ ನೋಟ್ ನಲ್ಲಿ ನನ್ನ ಸ್ವ ಇಚ್ಚೆಯ ಆತ್ಮಹತ್ಯೆ ಪತ್ರ ಎಂದು ಬರೆದಿರುವ ಜಗದೀಶ್, ಮಾನಸಿಕ ತೊಂದರೆಯಿಂದ ಬಳಲುತ್ತಿದ್ದೇನೆ. ನನಗೆ ಪರೀಕ್ಷೆಗೆ ತಯಾರಿ ನಡೆಸಲು ತೊಂದರೆಯಾಗುತ್ತಿದೆ. ನನಗೆ ವಿದ್ಯಾಭ್ಯಾಸ ಮಾಡಲು ಹಾಗೂ ಪರೀಕ್ಷೆಗೆ ಸಿದ್ಧತೆ ನಡೆಸಲು ತುಂಬಾ ಇಷ್ಟವಿದೆ. ಆದರೆ ಕೆಲ ದಿನಗಳಿಂದ ಓದಲು ಸಾಧ್ಯವಾಗುತ್ತಿಲ್ಲ‌. ಓದಲು ಏಕಾಗ್ರತೆ ಇಲ್ಲ. ಮನಸ್ಸು ಬೇಡವಾದ ಕೆಟ್ಟ ಆಲೋಚನೆಗಳಿಂದ ಮಾನಸಿಕವಾಗಿ ಅಸ್ವಸ್ಥನಾಗಿದ್ದೇನೆ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾನೆ ಎನ್ನಲಾಗಿದೆ.

ಮಾ.12ರಂದು ಪೋಷಕರು ಊರಿಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬುಧವಾರ ರಾತ್ರಿ ಜಗದೀಶ್ ಅವರ ತಾಯಿ ಮರಳಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಕುರಿತಂತೆ ಹೊಸಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

14ಕೆಡಿಬಿಪಿ6- ಮೃತ ಯುವಕ ಜಗದೀಶ್.