ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಕುಶಾವರ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಚಂದ್ರಕಲಾ ಜಯರಾಂ ಹಾಗೂ ಉಪಾಧ್ಯಕ್ಷರಾಗಿ ಹೇಮರಾಜ್ ಅವಿರೋಧ ಆಯ್ಕೆಯಾಗಿದ್ದಾರೆ.ತಾಲೂಕಿನ ಕುಶಾವರ ಗ್ರಾಮ ಪಂಚಾಯ್ತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಗುಣ ಅವರ ವಿರುದ್ಧ ಎಲ್ಲಾ ಸದಸ್ಯರು ಅವಿಶ್ವಾಸ ನಿರ್ಣಯ ತಂದ ಹಿನ್ನೆಲೆಯಲ್ಲಿ ಚುನಾವಣೆ ನಿರ್ಣಯವಾಗಿತ್ತು. ೯ ಜನ ಸದಸ್ಯರ ಬಲ ಹೊಂದಿರುವ ಈ ಗ್ರಾಪಂನಲ್ಲಿ ಸಾಮಾನ್ಯ ಕ್ಷೇತ್ರದಿಂದ ಚಂದ್ರಕಲಾ ಒಬ್ಬರೆ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರನ್ನು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನಾಗಿ ಹೇಮರಾಜ್ ಅವರನ್ನು ಚುನಾವಣಾಧಿಕಾರಿ ತಾಪಂ ಇಒ ವಸಂತ್ ಕುಮಾರ್ ಘೋಷಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾಪಂ ಸದಸ್ಯ ನಂದೀಶ್, ೨ ಬಾರಿ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಸಾಮಾನ್ಯ ಕ್ಷೇತ್ರಕ್ಕೆ ಗುಣ ಅವರು ಅಧ್ಯಕ್ಷರಾಗಿದ್ದು ಮಾತಿಗೆ ತಪ್ಪಿದ ಕಾರಣ ಹಾಗೂ ಗ್ರಾಪಂಯಲ್ಲಿ ಕೆಲಸ ಮಾಡದ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯ ತರಲಾಗಿತ್ತು. ಅದರಂತೆ ಚುನಾವಣೆ ನಡೆದು ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಇವರು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಸದಸ್ಯರ ಜೊತೆ ಉತ್ತಮ ಬಾಂಧವ್ಯದೊಂದಿಗೆ ಕೆಲಸ ಮಾಡಲಿ ಎಂದರು.ಗ್ರಾಮದ ಮುಖಂಡರಾದ ಚೇತನ್ ಕುಮಾರ್ ಮಾತನಾಡಿ, ಚುನಾವಣೆಯಲ್ಲೂ ಸಹ ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಅವರು ಗ್ರಾಮದ ಜ್ವಲಂತ ಸಮಸ್ಯೆ ಅರಿಯುವ ಮೂಲಕ ಅವರ ಕೆಲಸವನ್ನು ಮಾಡಿಕೊಡಬೇಕು. ಅಲ್ಲದೆ ಯಾವುದೇ ಅಧಿಕಾರದಲ್ಲಿ ತಾರತಮ್ಯ ಮಾಡದೆ ಬಂದಂತ ಹಣವನ್ನು ಅಭಿವೃದ್ಧಿಗೆ ಬಳಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಪಡೆಯಬೇಕು ಎಂದರು.
ಗ್ರಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಮಾತನಾಡಿ, ನಮ್ಮ ಮೇಲೆ ನಂಬಿಕೆ ಇಟ್ಟು ಆಶೀರ್ವದಿಸಿದ ಎಲ್ಲಾ ಸದಸ್ಯರಿಗೆ ಹಾಗೂ ಎಲ್ಲಾ ಮತದಾರರಿಗೆ ಧನ್ಯವಾದ ಅರ್ಪಿಸುತ್ತೇವೆ. ನಮ್ಮ ಗ್ರಾಮಕ್ಕೆ ಬೇಕಾದ ಕುಡಿಯುವ ನೀರು, ರಸ್ತೆ, ಶೌಚಾಲಯ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಎಲ್ಲಾ ಸದಸ್ಯರ ಜೊತೆ ತಾರತಮ್ಯ ಇಲ್ಲದೆ ಕೆಲಸ ಮಾಡುತ್ತೇವೆ ಎಂದರು. ಈ ವೇಳೆ ಗ್ರಾಮಸ್ಥರು ಪಟಾಕಿ ಸಿಡಿಸಿ ಸಿಹಿ ಹಂಚಿದರು.ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಮಂಜುನಾಥ್, ಸುನೀತ, ವೇದ, ಕೋಮಲಾ, ಗುಣ, ಪಿಡಿಒ ನಾಗಭೂಷಣ್, ದಿವಾಕರ್, ಯಶವಂತ್ ಕೌಶಿಕ್, ಮೋಹನ್ ಉಮೇಶ್, ಗಜೇಂದ್ರ, ಲೋಕೇಶ್, ದಿನೇಶ್, ಯೋಗೇಶ್ ಸೋಮಶೇಖರ್ ಸೇರಿದಂತೆ ಇತರರು ಹಾಜರಿದ್ದರು.