ಕನ್ನಡಪ್ರಭ ವಾರ್ತೆ ಮೇಲುಕೋಟೆ
ರಾಮಾನುಜರ ಕರ್ಮಭೂಮಿ ಮೇಲುಕೋಟೆಯಲ್ಲಿ ತಿರುನಕ್ಷತ್ರಮಹೋತ್ಸವದ ಅಂಗವಾಗಿ ರಾಮಾನುಜರಿಗೆ ಬುಧವಾರ ಸೂರ್ಯಪ್ರಭಾ ವಾಹನ ಗುರುವಾರ ಚಂದ್ರಪ್ರಭಾವಾಹನೋತ್ಸವ ನಡೆಯಿತು.ದೇಶದ ಎಲ್ಲಾ ಶ್ರೀವೈಷ್ಣವ ದೇವಾಲಯಗಳಲ್ಲಿ ರಾಮಾನುಜರ ಉತ್ಸವಗಳು ನಡೆದರೂ ಸಹ ಅವರ ಕರ್ಮಭೂಮಿಯಾದ ಮೇಲುಕೋಟೆ ಕಳೆದ ಏ.13ರಿಂದ ಆರಂಭವಾಗಿರುವ 10 ದಿನಗಳ ಕಾರ್ಯಕ್ರಮ ಏ.22ರಂದು ರಾಮಾನುಜಾಚಾರ್ಯರ ತಿರುನಕ್ಷತ್ರ ಮಹೋತ್ಸವದೊಂದಿಗೆ ಸಂಪನ್ನವಾಗಲಿದೆ.
ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಪೇಶುಮ್ ರಾಮಾನುಜರಿಗೆ ಶನಿವಾರ ಬೆಳಗ್ಗೆ ತಮಿಳುನಾಡಿನ ಶ್ರೀಪೆರಂಬದೂರಿನ ರಾಮಾನುಜರ ಸನ್ನಿಧಿಯ ಮಾಲೆ ಮರ್ಯಾದೆಗಳು ಸಮರ್ಪಣೆಯಾಗಲಿದೆ. ರಾತ್ರಿ ಗೋವಿಂದರಾಜಮುಡಿ ಕಿರೀಟಧಾರಣ ಮಹೋತ್ಸವ ವೈಭವದಿಂದ ನಡೆಯಲಿದೆ.ಚೆಲುವನಾರಾಯಣಸ್ವಾಮಿಗೆ ಕಳೆದ 15 ದಿನಗಳಿಂದ ನಡೆಯುತ್ತಿರುವ ಕೊಡೈತಿರುನಾಳ್ ಉತ್ಸವ ಅಮಾವಾಸ್ಯೆ ದಿನವಾದ ಏ.17ರ ಶುಕ್ರವಾರ ಮುಕ್ತಾಯವಾಗಲಿದೆ. ರಾತ್ರಿ ವೈಮಾಳಿಗೆ ಕೊಡೈತಿರುನಾಳ್ ನಡೆಯಲಿದೆ. ಚೆಲುವನಾರಾಯಣಸ್ವಾಮಿ ದೇವಾಲಯದ ವೈಮಾಳಿಗೆ ಅಂದರೆ ಮಹಡಿಯಮೇಲೆ ಉತ್ಸವ ನಡೆಯಲಿದೆ. ಆದಿಶೇಷನಲ್ಲಿ ಕುಳಿತ ಶೈಲಿಯಲ್ಲಿ ಚೆಲುವನಾರಾಯಣಸ್ವಾಮಿ ದರ್ಶನ ನೀಡಲಿದ್ದು, ಸರ್ಪನಡಿಗೆಯಲ್ಲಿ ಪಡಿಯೇತ್ತ ನಡೆಯುವುದು ಉತ್ಸವದ ವಿಶೇಷವಾಗಿದೆ. ರಾಮಾನುಜಾಚಾರ್ಯರಿಗೆ ಐದನೇ ಉತ್ಸವದ ಅಂಗವಾಗಿ ರಾತ್ರಿ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿಯ ಉತ್ಸವ ಸಹ ನೆರವೇರಲಿದೆ.
ಒಂದೇ ದಿನ ಮಹಾರಥೋತ್ಸವ:
ಏ.21ರ ತಿರುನಕ್ಷತ್ರಮಹೋತ್ಸವದ ವೇಳೆ ರಾಮಾನುಜಾಚಾರ್ಯರಿಗೆ ಅವತಾರ ಸ್ಥಳ ತಮಿಳುನಾಡಿನ ಶ್ರೀಪೆರಂಬದೂರು ಮತ್ತು ಕರ್ನಾಟಕದ ಕರ್ಮಭೂಮಿ ಮೇಲುಕೋಟೆಯಲ್ಲಿ ಒಂದೇ ದಿನ ಮಹಾರಥೋತ್ಸವ ಅಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ಗುರುವಾರ ಶ್ರೀಪೆರಂಬೂದರಿನ ಆದಿಕೇಶವಪೆರುಮಾಳ್ ಸನ್ನಿಧಿಯ ರಾಮಾನುಜರಿಗೆ ವ್ಯಾಳಿಯ ವಾಹನೋತ್ಸವ ನೆರವೇರಿತು.
ಅವತಾರ ಸ್ಥಳ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಆಚಾರ್ಯರ 1009 ನೇ ಜಯಂತ್ಯತ್ಸವದ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿವೆ.