ಮೂಲ್ಕಿ: ರಾಜಕೀಯ, ತಮ್ಮ ವೈಯುಕ್ತಿಕ ಸಾಮರ್ಥ್ಯದ ಜೊತೆಗೆ ಧಾರ್ಮಿಕ ನಂಬಿಕೆಯ ಶಕ್ತಿಯ ಬಲದಿಂದ ಉಪ ಮುಖ್ಯಮಂತ್ರಿಯಾಗಿರುವ ಡಾ. ಜಿ. ಪರಮೇಶ್ವರ್ ಅವರು ಉನ್ನತ ಸ್ಥಾನಮಾನದಲ್ಲಿದ್ದರೂ ಸರಳ ಜೀವನ ಹಾಗೂ ನಿಷ್ಠೆ, ಪ್ರಾಮಾಣಿಕತೆಯ ವ್ಯಕ್ತಿತ್ವದಿಂದ ಶ್ರೀಮಂತರಾಗಿದ್ದಾರೆ ಎಂದು ಆಧ್ಯಾತ್ಮಿಕ ವಿಶ್ವ ಗುರುಗಳಾದ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರನ್ನು ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಅಭಿಮಾನಿಗಳ ಪರವಾಗಿ ವಿಶೇಷವಾಗಿ ಸನ್ಮಾನಿಸಿ ಆಶೀರ್ವಚನ ನೀಡಿದರು.ಸನ್ಮಾನಕ್ಕೆ ಪ್ರತಿಕ್ರಿಯಿಸಿ ಡಾ. ಜಿ. ಪರಮೇಶ್ವರ್ ಮಾತನಾಡಿ, ಜೀವನದಲ್ಲಿ ಎಷ್ಟೇ ದೊಡ್ಡ ಸ್ಥಾನಮಾನ ಸಿಕ್ಕರೂ ಸಹ ನಮ್ಮ ಕಾರ್ಯಪ್ರವೃತ್ತಿಯಲ್ಲಿ ಬದಲಾವಣೆಯಿಲ್ಲ, ನಮ್ಮ ಜವಬ್ದಾರಿಯನ್ನು ಅರಿತು ನಮ್ಮ ಕೆಲಸವನ್ನು ಜನರ ಪರವಾಗಿ ಮಾಡುವುದೇ ನಮ್ಮ ಮೊದಲ ಆದ್ಯತೆ ಎಂದರು.
ಡಾ. ಪರಮೇಶ್ವರ್ ಹಾಗೂ ಕನ್ನಿಕಾ ಪರಮೇಶ್ವರ್ ಅವರಿಗೆ ಪ್ರಭಾವಳಿ ಸಹಿತ ತಿರುಪತಿ ದೇವರ ವಿಗ್ರಹದ ಜೊತೆಗೆ ವಿಶೇಷ ಪ್ರಸಾದವನ್ನು ಸ್ವಾಮೀಜಿ ನೀಡಿ ಆಶೀರ್ವದಿಸಿದರು. ಸೇವಾಶ್ರಮದ ನಿರ್ದೇಶಕಿ ರಜನಿ ಸಿ. ಭಟ್, ಆಶ್ರಮದ ಸೇವಾ ಚಟುವಟಿಕೆಯ ಮುಖ್ಯಸ್ಥ ರಾಹುಲ್ ಸಿ. ಭಟ್, ಕಾನೂನು ಸಲಹೆಗಾರರಾದ ರೋಶಿನಿ ರಾಘವ್ ಸೂರ್ಯ, ಆಶ್ರಮದ ಗೌರವ ಸಲಹೆಗಾರರಾದ ರಾಘವ ಸೂರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಸೇವಾ ಕಾರ್ಯಕ್ರಮದ ಸಂಯೋಜಕ ನರೇಂದ್ರ ಕೆರೆಕಾಡು ಸ್ವಾಗತಿಸಿದರು, ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.