ಅ.೩ರಿಂದ ೧೩ರವರೆಗೆ ಚಂದ್ರವನ ನವರಾತ್ರಿ ಉತ್ಸವ

| Published : Oct 02 2024, 01:05 AM IST

ಸಾರಾಂಶ

ಕಾಯಕ ಸೇವಾ ಧುರೀಣ ಪ್ರಶಸ್ತಿಯನ್ನು ಮೈಸೂರು ಗುರುವಿದ್ಯಾವಿಕಾಸ ಕೇಂದ್ರದ ಅಧ್ಯಕ್ಷ ಡಾ.ಸೋಮೇಶ್ವರ ಸ್ವಾಮೀಜಿ, ನಾಡೋಜ ಡಾ.ಬಿ..ಟಿ.ರುದ್ರೇಶ್, ನಿವೃತ್ತ ಸಹಾಯಕ ಔಷಧ ನಿಯಂತ್ರಕ ಗೋಣಿ ಫಕ್ಕೀರಪ್ಪ, ಎಸಿಎಟಿಟಿ ಫೌಂಡೇಷನ್ ಚೇರ್ ಪರ್ಸನ್ ಡಾ.ಶಾಲಿನಿ, ವಕೀಲ ಎಂ.ಭೋಜರಾಜನ್, ಸಮಾಜಸೇವಕ ಪಿ.ಸಿ.ಗೋಪಾಲ್‌ರೆಡ್ಡಿ ಅವರಿಗೆ ನೀಡಿ ಗೌರವಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣದ ಹೊರ ವಲಯದಲ್ಲಿರುವ ಚಂದ್ರವನ ಆಶ್ರಮದಲ್ಲಿ ಅ.೩ರಿಂದ ೧೩ರವರೆಗೆ ಚಂದ್ರವನ ನವರಾತ್ರಿ ಉತ್ಸವ ಏರ್ಪಡಿಸಲಾಗಿದೆ. ಇದೇ ವೇಳೆ ಪದ್ಮಶ್ರೀ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಅವರಿಗೆ ಕಾವೇರಿ ಪ್ರಶಸ್ತಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಕಾಯಕ ಸೇವಾ ಧುರೀಣ ಗೌರವ, ಮಹಿಳೆಯರಿಗೆ ಮಡಿಲಕ್ಕಿ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಅ.೩ರಂದು ಬೆಳಗ್ಗೆ ೮.೩೦ಕ್ಕೆ ಷಟ್‌ಸ್ಥಲ ಧ್ವಜಾರೋಹಣವನ್ನು ಮೈದೂರು ಜಿಲ್ಲೆ ದಂಡಿಕೆರೆ ಶ್ರೀಮಹಂತಸ್ವಾಮಿ ಮಠದ ಶ್ರೀ ಬಸಲಿಂಗ ಸ್ವಾಮಿ ನೆರವೇರಿಸುವರು. ಮಧ್ಯಾಹ್ನ ೧೨ ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದ ದಿವ್ಯಸಾನ್ನಿಧ್ಯವನ್ನು ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ವಹಿಸುವರು. ಉದ್ಘಾಟನೆಯನ್ನು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ವಹಿಸುವರು. ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಕುಮಾರ, ತಹಸೀಲ್ದಾರ್ ಪುರುಷೋತ್ತಮ್ ಸತ್ತಿಗೇರಿ, ಬಿಜೆಪಿ ಮುಖಂಡ ಎನ್.ನಂಜುಂಡೇಶ್, ಕಾಂಗ್ರೆಸ್ ಮುಖಂಡ ವೆಂಕಟರಮಣೇಗೌಡ, ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಭಾಗವಹಿಸುವರು. ಅ.೪ರಂದು ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ.ಎಸ್.ಅಹಲ್ಯಾ ಅವರು ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸುವರು.

ಅ.೧೨ರಂದು ಸಂಜೆ ೫.೩೦ಕ್ಕೆ ವಿಜಯದಶಮಿ ಅಂಗವಾಗಿ ಶ್ರೀ ದುರ್ಗಾದೇವಿ ರಥೋತ್ಸವ, ೭ ಗಂಟೆಗೆ ಬನ್ನಿಪೂಜೆ ನಡೆಯಲಿದೆ. ರಥೋತ್ಸವದ ಉದ್ಘಾಟನೆಯನ್ನು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ನೆರವೇರಿಸುವರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಬನ್ನಿಪೂಜೆ ಕಾರ್ಯಕ್ರಮ ಉದ್ಘಾಟನೆ, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಗೋಪೂಜೆ, ಬೆಂಗಳೂರು ಆರ್‌ಟಿಓ ಅಧಿಕಾರಿ ಶಾಲಿನಿ ಬನ್ನಿಪೂಜೆ ಮಾಡುವರು. ರಾತ್ರಿ ೮ ಗಂಟೆಗೆ ಆಆಯಾಮ ಅಕಾಡೆಮಿ ವಿದ್ಯಾರ್ಥಿಗಳಿಂದ ಭರತನಾಟ್ಯ ನೃತ್ಯರೂಪಕ ನಡೆಯಲಿದೆ.

ಅ.೧೩ರಂದು ನವರಾತ್ರಿ ಧಾರ್ಮಿಕ ಸಮಾರೋಪ ಸಮಾರಂಭ, ಪ್ರಶಸ್ತಿ ಪ್ರದಾನ, ಮಡಿಲಕ್ಕಿ ಕಾರ್ಯಕ್ರಮದ ದಿವ್ಯ ನೇತೃತ್ವವನ್ನು ಗೌರಿ ಗದ್ದೆ ಸ್ವರ್ಣಪೀಠಿಕಾ ಪುರದ ವಿನಯ್ ಗುರೂಜಿ ವಹಿಸುವರು. ಉದ್ಘಾಟನೆಯನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸುವರು. ಅಧ್ಯಕ್ಷತೆಯನ್ನು ರಮೇಶ್ ಬಂಡಿಸಿದ್ದೇಗೌಡ ವಹಿಸುವರು. ರಾಷ್ಟ್ರಮಟ್ಟದ ಶ್ರೇಷ್ಠ ಕಾವೇರಿ ಪ್ರಶಸ್ತಿಯನ್ನು ಪದ್ಮಶ್ರೀ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಅವರಿಗೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರದಾನ ಮಾಡುವರು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದಿ ಆರೋಗ್ಯ ಆಶ್ರಮ ಆಯುರ್ವೇದ ಆಸ್ಪತ್ರೆ ವೆಬ್‌ಸೈಟ್ ಬಿಡುಗಡೆ ಮಾಡುವರು.

ಕಾಯಕಸೇವಾ ಧುರೀಣ ಪ್ರಶಸ್ತಿಯನ್ನು ಮೈಸೂರು ಗುರುವಿದ್ಯಾವಿಕಾಸ ಕೇಂದ್ರದ ಅಧ್ಯಕ್ಷ ಡಾ.ಸೋಮೇಶ್ವರ ಸ್ವಾಮೀಜಿ, ನಾಡೋಜ ಡಾ.ಬಿ.ಟಿ.ರುದ್ರೇಶ್, ನಿವೃತ್ತ ಸಹಾಯಕ ಔಷಧ ನಿಯಂತ್ರಕ ಗೋಣಿ ಫಕ್ಕೀರಪ್ಪ, ಎಸಿಎಟಿಟಿ ಫೌಂಡೇಷನ್ ಚೇರ್ ಪರ್ಸನ್ ಡಾ.ಶಾಲಿನಿ, ವಕೀಲ ಎಂ.ಭೋಜರಾಜನ್, ಸಮಾಜಸೇವಕ ಪಿ.ಸಿ.ಗೋಪಾಲ್‌ರೆಡ್ಡಿ ಅವರಿಗೆ ನೀಡಿ ಗೌರವಿಸಲಾಗುವುದು.