ಸಾರಾಂಶ
ಮಲೆನಾಡ್ ಸ್ಟಾರ್ಟ್ ಅಪ್ ಸಮಿಟ್ । ಕೇಂದ್ರದಿಂದ 109 ಬೀಜಗಳ ತಳಿ ಆವಿಷ್ಕಾರ
ಕನ್ನಡಪ್ರಭ ವಾರ್ತೆ ಶಿವಮೊಗ್ಗಭಾರತದ ಆರ್ಥಿಕ ವ್ಯವಸ್ಥೆ ಕೃಷಿಯ ಮೇಲೆ ಅವಲಂಬಿತವಾಗಿದ್ದು, ಪ್ರಧಾನ ಮಂತ್ರಿಗಳ ದೂರದೃಷ್ಟಿಯ ಯೋಜನೆಯಿಂದ ಕೃಷಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಯಾಗುತ್ತಿದೆ. ಇದು ಕೃಷಿಕರಿಗೆ ವರದಾನವಾಗಲಿದೆ ಎಂದು ಕೇಂದ್ರ ಕೃಷಿ, ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಹೇಳಿದರು.
ನಗರದ ಫೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಶನಿವಾರ ಅನ್ವೇಷಣ್ ಇನೋವೇಷನ್ಸ್ ಅಂಡ್ ಎಂಟ್ರೆಪ್ರೆಂಯೂರಿಯಾಲ್ ಪೋರಂ ವತಿಯಿಂದ ನಡೆದ ಮಲೆನಾಡ್ ಸ್ಟಾರ್ಟ್ ಅಪ್ ಸಮಿಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ನಾವು ಜನಸೇವಕರು ರೈತರ ಸೇವೆ ಮಾಡುವ ಭಾಗ್ಯ ನನಗೆ ಕೊಟ್ಟಿದ್ದು, ರೈತರ ಸೇವೆಯನ್ನು ದೇವರ ಪೂಜೆ ಎಂದುಕೊಂಡಿದ್ದೇನೆ. ದೇಶದಲ್ಲೇ ಮೊದಲ ಬಾರಿಗೆ ಕೃಷಿ ಬಜೆಟ್‌ನ್ನು ಮಂಡಿಸಿದ ಬಿ.ಎಸ್.ಯಡಿಯೂರಪ್ಪನವರು ನಮಗೆಲ್ಲ ಮಾರ್ಗದರ್ಶಕರು ಎಂದರು.
ದೇಶದಲ್ಲಿ ಭಾರತದ ಅರ್ಥವ್ಯವಸ್ಥೆಗೆ ಶೇ.90ರಷ್ಟು ಕೃಷಿಕರಿಂದ ಯೋಗದಾನವಿದೆ. ಈ ಬಾರಿ ಕೃಷಿ ಉತ್ಪಾದನೆಯ ಪ್ರಮಾಣ, 3.5 ರಿಂದ ಶೇ.4ಕ್ಕೆ ಏರಿಕೆಯಾಗಿದೆ. ಉತ್ಪಾನೆಯಲ್ಲಿ ಹೆಚ್ಚಳ ಅತ್ಯಾಧುನಿಕ ಹೊಸ ಸಂಶೋಧನೆಗಳು ಉತ್ತಮ ಬೀಜಗಳ ಉತ್ಪಾದನೆ ಮತ್ತು ವಿತರಣೆ ಮಾಡಬೇಕು ಎಂದು ಕೇಂದ್ರ ಕೃಷಿ ಇಲಾಖೆ ದೃಢನಿಶ್ಚಯ ಮಾಡಿದೆ. 109 ಉತ್ತಮ ಬೀಜಗಳ ತಳಿಗಳನ್ನು ಕಂಡು ಹಿಡಿದಿದ್ದೇವೆ. ಕೃಷಿಯಲ್ಲಿ ತಾಂತ್ರಿಕ ಕ್ರಾಂತಿಯಾಗಬೇಕಾಗಿದೆ ಎಂದರು.ಕೃಷಿ ಉತ್ಪಾದನೆಯ ವೆಚ್ಚವನ್ನು ಹೇಗೆ ಕಡಿಮೆ ಮಾಡಬೇಕು ಎಂಬುವುದರ ಬಗ್ಗೆ ಚಿಂತನೆ ನಡೆಸಲಾಗಿದೆ. ರಸಗೊಬ್ಬರಕ್ಕೆ ರೈತರಿಗೆ 2 ಲಕ್ಷ ಕೋಟಿ ರು. ಸಬ್ಸಿಡಿಯಾಗಿ ನೀಡಿದ್ದೇವೆ. ಕರ್ನಾಟಕದಲ್ಲಿ ಬಿಎ್‌ವೈ ಸರ್ಕಾರ ಇರುವಾಗ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ 6 ಸಾವಿರ ರು. ಮತ್ತು ರಾಜ್ಯದ 4 ಸಾವಿರ ರು. ಸೇರಿ ರೈತರಿಗೆ 10 ಸಾವಿರ ರು. ನೀಡುತ್ತಿತ್ತು. ಈಗಿನ ಸರ್ಕಾರ ಅದನ್ನು ನಿಲ್ಲಿಸಿದೆ. ರಾಜ್ಯಕ್ಕೆ ನೀಡಿದ ಕೋಟ್ಯಾಂತರ ರು. ಕೃಷಿ ಅನುದಾನವನ್ನು ಖರ್ಚು ಮಾಡದೇ ಉಳಿಸಿಕೊಂಡಿದೆ. ಈ ಬಗ್ಗೆ ನಾನು ಇಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತ್ವರಿತವಾಗಿ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.
ಎಫ್‌ಪಿಒಗಳಿಂದ ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ಸ್ಟಾಟ್‌ಅಪ್ ಕ್ರಾಂತಿಯಾಗಿದ್ದು, ಕರ್ನಾಟಕದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಎಫ್‌ಪಿಒಗಳು ಪ್ರಾರಂಭವಾಗಿದ್ದು, ಶಿವಮೊಗ್ಗದಿಂದಲೇ 60 ಕೋಟಿಯ ವ್ಯವಹಾರವಾಗಿದ್ದು, ಶೀಘ್ರದಲ್ಲೇ 100 ಕೋಟಿ ದಾಟಲಿರುವುದು ಸಂತೋಷ ತಂದಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈ ಸಂಖ್ಯೆ ದಾಟಬೇಕು ಎಂಬುವುದೇ ಪ್ರಧಾನಿಯವರ ಉದ್ದೇಶವಾಗಿದ್ದು, ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದರು.ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸ್ಟಾಟ್‌ಅಪ್ ಪ್ರಯೋಗದಿಂದ ಹೆಚ್ಚಿನ ಅನುದಾನ ಸ್ವಯಂಉದ್ಯೋಗಿಗಳಿಗೆ ಹರಿದು ಬರಲಿದೆ. 9ನೇ ವರ್ಷಕ್ಕೆ ಸ್ಟಾಟ್‌ಅಪ್ ಯೋಜನೆ ಕಾಲೂರಿದ್ದು, ದೇಶದಲ್ಲಿ 1.60 ಲಕ್ಷ ಹೊಸ ಸ್ಟಾಟ್‌ಅಪ್ ಕಂಪನಿಗಳು ಕಾರ್ಯಾಚರಿಸುತ್ತಿದೆ. ನಮ್ಮ ಶಿವಮೊಗ್ಗದ ಹಲವಾರು ಕಂಪನಿಗಳು ಉತ್ತಮ ಸಾಧನೆ ಮಾಡಿದೆ ಎಂದರು.
ಗಿಡ ನೆಟ್ಟು ಸ್ಟಾಟ್‌ಅಪ್ ಮಲೆನಾಡ್ ಸ್ಟಾರ್ಟ್ ಅಪ್ ಸಮಿಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ವಿವಿಧ ಮಳಿಗೆಗಳನ್ನು ವೀಕ್ಷಿಸಿದರು.ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದ ಪೂರ್‍ಯನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಮಾಜಿ ಶಾಸಕರಾದ ಎಸ್.ರುದ್ರೇಗೌಡ, ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಟಿ.ಡಿ. ಮೇಘರಾಜ್, ಅನ್ವೇಷಣ್ ಪ್ರಮುಖರಾದ ಸುಭಾಶ್, ಸಿ.ಎಂ.ಪಾಟೀಲ್, ಭದ್ರೀಶ್, ನಾಗರಾಜ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಸ್ಟಾಟ್‌ಅಪ್ ಸಮಿತಿಯ ಸದಸ್ಯರು ಇದ್ದರು.