ಸಾರಾಂಶ
ಧ್ಯಾನ ಪ್ರತಿಯೊಬ್ಬರ ಬದುಕಿನಲ್ಲಿ ಬದಲಾವಣೆ ಮೂಡಿಸುತ್ತದೆ.
ಶ್ರೀಸಾಯಿ ಓಂಕಾರೇಶ್ವರ ಸಂಜೀವಿನಿ ಪಿರಮಿಡ್ ಧ್ಯಾನ ಕೇಂದ್ರದಲ್ಲಿ ೮ನೇ ವಾರ್ಷಿಕೋತ್ಸವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕಾರಟಗಿಧ್ಯಾನ ಪ್ರತಿಯೊಬ್ಬರ ಬದುಕಿನಲ್ಲಿ ಬದಲಾವಣೆ ಮೂಡಿಸುತ್ತದೆ. ವೃತ್ತಿ, ಬದುಕಿನ ಏರಿಳಿತಗಳಲ್ಲಿನ ಸವಾಲುಗಳನ್ನು ಸುಲಭವಾಗಿ ಎದುರಿಸುವ ಶಕ್ತಿ ಧ್ಯಾನದಿಂದ ಮಾತ್ರ ಬರುತ್ತದೆ ಎಂದು ಧ್ಯಾನ ಸಾಧಕಿ ವಡ್ಡರಹಟ್ಟಿಯ ನೆಕ್ಕಂಟಿ ಲೀಲಾರಾಣಿ ಸೂರಿಬಾಬು ಹೇಳಿದರು.
ಇಲ್ಲಿನ ಹೊರವಲಯದ ದೇವಿಕ್ಯಾಂಪಿನ ಶ್ರೀಸಾಯಿ ಓಂಕಾರೇಶ್ವರ ಸಂಜೀವಿನಿ ಪಿರಮಿಡ್ ಧ್ಯಾನ ಕೇಂದ್ರದಲ್ಲಿ ೮ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು. ವೃತ್ತಿಯಲ್ಲಿನ ಏರಿಳಿತಗಳನ್ನು, ಸವಾಲುಗಳನ್ನು ಸುಲಭವಾಗಿ ಎದುರಿಸುವ ತಾಳ್ಮೆಯನ್ನು, ನಿಧಾನತೆಯನ್ನು ನೀಡುವ ಅಗಾಧವಾದ, ಅಗೋಚರ ಶಕ್ತಿ ಧ್ಯಾನಕ್ಕಿದೆ. ವಿದ್ಯಾರ್ಥಿಗಳು ಏಕಾಗ್ರತೆಗಾಗಿ, ಆತ್ಮಸ್ಥೈರ್ಯಕ್ಕಾಗಿ ಧ್ಯಾನವನ್ನು ಅಳವಡಿಸಿಕೊಳ್ಳಬೇಕು. ಅದೇ ರೀತಿಯಲ್ಲಿ ವೃತ್ತಿಯಲ್ಲಿ ಏಕಾಗ್ರತೆ ಹಾಗೂ ಆತ್ಮಸ್ಥೈರ್ಯಕ್ಕಾಗಿ ಧ್ಯಾನವನ್ನು ಕಲಿಯಬೇಕು ಎಂದರು.ಧ್ಯಾನ ಒಂದು ಪರಮಾನಂದಕರವಾದ ಅನುಭವ. ಇದು ನಮ್ಮನ್ನು ಎಲ್ಲ ನೋವು, ಸಂಕಟಗಳಿಂದ ದೂರ ಮಾಡುತ್ತದೆ ಎಂದು ಉದ್ಯಮಿ ವಿಶ್ವನಾಥ ಜವಳಿ ಹೇಳಿದರು. ಧ್ಯಾನದ ಅನುಭವ ಸೂಕ್ಷ್ಮ, ಉತ್ಕೃಷ್ಟ. ಧ್ಯಾನದಿಂದ ನಮ್ಮ ಕಾರ್ಯ ದಕ್ಷತೆ, ನೈಪುಣ್ಯ ಉತ್ತುಂಗ ಮಟ್ಟಕ್ಕೇರುತ್ತವೆ ಎಂದು ತಮ್ಮ ಅನುಭವನ್ನು ಹಂಚಿಕೊಂಡರು.
ಪುರಸಭೆ ಸದಸ್ಯೆ ಹಾಗೂ ಪಿರಮಿಡ್ ಧ್ಯಾನ ಕೇಂದ್ರದ ಮುಖ್ಯಸ್ಥೆ ಜಿ. ಅರುಣಾದೇವಿ ಮಾತನಾಡಿ, ಧ್ಯಾನವನ್ನು ಅಳವಡಿಸಿಕೊಳ್ಳುವುದರಿಂದ ಸವಾಲುಗಳನ್ನು ಅತ್ಯಂತ ಯಶಸ್ವಿಯಾಗಿ ಎದುರಿಸಬಹುದಾಗಿದೆ. ಧ್ಯಾನದ ಮೂಲಕ ಬದುಕಿನಲ್ಲಿ ಶಾಂತಿ, ನೆಮ್ಮದಿ, ಸ್ಥಿರತೆ ಹಾಗೂ ಏಕಾಗ್ರತೆ ಮೂಡುತ್ತವೆ. ದೈನಂದಿನ ಬದುಕಿನಲ್ಲಿ ಚೈತನ್ಯ ಮೂಡುತ್ತದೆ ಎಂದರು.೮ನೇ ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ ಸಾಮೂಹಿಕ ಧ್ಯಾನ, ಸತ್ಸಂಗ ಸಭೆ ನಡೆಸಲಾಯಿತು. ಧ್ಯಾನ ಕೇಂದ್ರ ಹಿರಿಯರಾದ ಸಿ.ಎಚ್. ಸುಬ್ಬಾರಾವ್, ವಿಶ್ವನಾಥ ಜವಳಿ ಮತ್ತು ನೆಕ್ಕಂಟಿ ಲೀಲಾರಾಣಿ ಅವರನ್ನು ಗೌರವಿಸಲಾಯಿತು.
ಶ್ರೀಧರ್‌ಗೌಡ ಗೋನಾಳ, ಮಲ್ಲಿಕಾರ್ಜುನ, ಶಿಕ್ಷಕ ಬೆನಕಟ್ಟಿ ದ್ಯಾಮಣ್ಣ, ನಿರ್ಮಲಾ ಸಾಲಿಗುಂದಿ, ಉಮಾ ಚಿನಿವಾಲ್, ಮೇರಿ, ರಾಜಲಕ್ಷ್ಮಿ, ನಾಗಮಣಿ, ಶ್ರೀಧರ, ಮುರಳಿ, ರವಿಶಂಕರ್, ಗಂಗಣ್ಣ, ರಮೇಶ್, ಪದ್ಮಾವತಿ, ಶರಣಮ್ಮ ಇದ್ದರು.