ಐದಾರು ದಿನಗಳಲ್ಲಿ ಬದಲಾವಣೆ ಗಾಳಿ ಖಚಿತ

| Published : Nov 24 2025, 01:30 AM IST

ಸಾರಾಂಶ

ಇನ್ನು ಐದಾರು ದಿನಗಳಲ್ಲಿ ಏನೆಲ್ಲಾ ಬೆಳವಣಿಗೆಗಳು ಆಗುತ್ತವೆ ಎಂಬುದನ್ನು ನೀವೇ ಕಾದು ನೋಡಿ ಎಂದು ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅಚ್ಚರಿಯ ಹೇಳಿಕೆ ನೀಡಿದ್ದಾರೆ

ಕನ್ನಡಪ್ರಭ ವಾರ್ತೆ ತುರುವೇಕೆರೆ

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚದುರಂಗದಾಟವನ್ನು ಬಿಜೆಪಿಯ ನಾಯಕರು ಅತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇನ್ನು ಐದಾರು ದಿನಗಳಲ್ಲಿ ಏನೆಲ್ಲಾ ಬೆಳವಣಿಗೆಗಳು ಆಗುತ್ತವೆ ಎಂಬುದನ್ನು ನೀವೇ ಕಾದು ನೋಡಿ ಎಂದು ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಪಟ್ಟಣದಲ್ಲಿರುವ ವೀರಶೈವ ಮುಖಂಡ ಎಸ್.ಎಂ.ಕುಮಾರಸ್ವಾಮಿಯವರ ಮನೆಯಲ್ಲಿ ಸಚಿವರಿಗೆ ನೀಡಿದ ಔತಣ ಕೂಟದಲ್ಲಿ ಭಾಗವಹಿಸಿದ್ದ ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಿದ್ದರು. ಮುಖ್ಯಮಂತ್ರಿಗಾದಿಗಾಗಿ ನಡೆಯುತ್ತಿರುವ ಮೇಲಾಟ ನಾಚಿಕೆ ತರಿಸಿದೆ. ಇವೆಲ್ಲವನ್ನೂ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ, ಜೆಡಿಎಸ್ ನ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಸೇರಿದಂತೆ ಹಲವರು ಬಹಳ ಕುತೂಹಲದಿಂದ ನೋಡುತ್ತಿದ್ದಾರೆ. ಇನ್ನು ಐದಾರು ದಿನಗಳಲ್ಲಿ ಏನೇನು ನಡೆಯುತ್ತೆ ಎಂಬುದನ್ನು ನೀವೇ ಕಾದು ನೋಡಿ ಎಂದು ಅವರು ಹೇಳಿದರು. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಸತ್ತು ಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತ್ಯಂತ ನೀಚ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೈತಿಕತೆ ಎಂಬುದೇ ಇಲ್ಲ. ಆತ ಇಷ್ಟೊಂದು ಕೊಳಕು ಮನುಷ್ಯ ಅಂತ ಗೊತ್ತಿರಲಿಲ್ಲ. ಅಧಿಕಾರಕ್ಕಾಗಿ ಏನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡುತ್ತಿದ್ದಾರೆ. ಅಧಿಕಾರಕ್ಕಾಗಿ ಅಂಟಿ ಕೂತಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ 40 ಪರ್ಸೆಂಟ್ ಸರ್ಕಾರ ಅಂತ ಆರೋಪಿಸಿದ್ದರು. ಆದರೆ ಈಗಿನ ಸಿದ್ದರಾಮಯ್ಯನವರ ಸರ್ಕಾರ 50 ರಿಂದ 60 ಪರ್ಸೆಂಟ್ ಕಮೀಷನ್ ಸರ್ಕಾರವಾಗಿದೆ. ಇದನ್ನೆಲ್ಲಾ ಗಮನಿಸಿರುವ ಬಿಜೆಪಿಯ ನಾಯಕರು ಇನ್ನು ಐದಾರು ಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡುತ್ತಾರೆ ಕಾದು ನೋಡಿ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಏನೋ ಬದಲಾವಣೆಯ ಗಾಳಿ ಬೀಸಲಿದೆ ಎಂಬುದನ್ನು ಸೂಚ್ಯವಾಗಿ ಹೇಳಿದರು.

ಇಲ್ಲಿಯ ಹಾಲಿ ಶಾಸಕ ಎಂ.ಟಿ.ಕೃಷ್ಣಪ್ಪನವರು ನಾಲ್ಕು ಬಾರಿ ಶಾಸಕರಾಗಿದ್ದಾರೆ. ಉತ್ತಮ ಕೆಲಸಗಾರ. ಈ ಹೊತ್ತಿಗಾಗಲೇ ಅವರು ಸಚಿವರಾಗಬೇಕಿತ್ತು. ದುರಾದೃಷ್ಠ ಇನ್ನೂ ದೊರೆತಿಲ್ಲ. ಒಳ್ಳೆಯ ಕಾಲ ಬರುತ್ತೆ ಆಗ ಅವರು ಸಚಿವರಾಗುತ್ತಾರೆಂದು ಸಚಿವ ವಿ.ಸೋಮಣ್ಣ ಭವಿಷ್ಯ ನುಡಿದರು. ಸಚಿವರಾದ ನಂತರ ಮೊದಲ ಬಾರಿಗೆ ಎಸ್.ಎಂ.ಕುಮಾರಸ್ವಾಮಿರವರ ಮನೆಗೆ ಆಗಮಿಸಿದ ವಿ.ಸೋಮಣ್ಣನವರನ್ನು ಅವರ ಕುಟುಂಬದ ಸದಸ್ಯರು ಗೌರವಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ಮುಖಂಡರಾದ ಎಂ.ಡಿ.ಮೂರ್ತಿ, ಲಯನ್ಸ್ ರಂಗನಾಥ್, ವಕೀಲ ಪಿ.ಎಚ್.ಧನಪಾಲ್, ವೆಂಕಟೇಶ್ ಕೃಷ್ಣಪ್ಪ, ದುಂಡ ಸುರೇಶ್, ಕಳ್ಳನಕೆರೆ ಶಿವಾನಂದ್, ಮಾಚೇನಹಳ್ಳಿ ಲೋಕೇಶ್, ಜೆಡಿಎಸ್ ವಕ್ತಾರ ವೆಂಕಟಾಪುರ ಯೋಗೀಶ್, ಲೋಕಮ್ಮನಹಳ್ಳಿ ಶಂಕರಣ್ಣ, ಮಾವಿನಹಳ್ಳಿ ಶಿವಕುಮಾರ್, ತೊರೆಮಾವಿನಹಳ್ಳಿ ರಾಮಕೃಷ್ಣ, ಅರಳೀಕೆರೆ ಲೋಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.