ಕನ್ನಡಪ್ರಭ ವಾರ್ತೆ, ಬೆಂಗಳೂರು
ಜಡತ್ವದಿಂದ ಕೂಡಿರುವ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆಯಾಗಲು ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ವೈಚಾರಿಕತೆ, ವೈಜ್ಞಾನಿಕತೆ ಹಾಗೂ ಮಾನವೀಯತೆ ಗುಣಗಳು ನಮ್ಮಲ್ಲಿ ಇಲ್ಲದಿದ್ದರೆ ಅದು ಜೀವನದ ಶಿಕ್ಷಣವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬುಧವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ವಿಧಾನಸೌಧದ ಬ್ಯಾಕ್ವಿಂಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ಸಾಮರಸ್ಯದ ನೆಲೆಗಳ 41 ಕೃತಿಗಳ’ ಲೋಕಾರ್ಪಣೆ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ಸಾಮರಸ್ಯ ನೆಲೆ ಯೋಜನೆಯಡಿ ನೂರು ಪುಸ್ತಕಗಳನ್ನು ಹೊರತರಲು ಉದ್ದೇಶಿಸಿದ್ದು, ಸದ್ಯ 41 ಪುಸ್ತಕಗಳನ್ನು ಹೊರ ತರಲಾಗಿದೆ. ಉಳಿದ 59 ಪುಸ್ತಕಗಳು ಸಹ ಶೀಘ್ರ ಬಿಡುಗಡೆಯಾಗಲಿವೆ. ನಮ್ಮ ದೇಶದಲ್ಲಿ ಅನೇಕ ಭಾಷೆ ಧರ್ಮ ಸಂಸ್ಕೃತಿಗಳು ಇದ್ದು, ರಾಜ್ಯದಲ್ಲಿಯೂ ವೈವಿಧ್ಯತೆ ಇದೆ. ಇದರಲ್ಲಿಯೇ ಏಕತೆಯನ್ನು ನಾವು ಸಾಧಿಸಿದ್ದೇವೆ ಎಂದರು.ಬಸವ, ಬಾಬಾ ಸಾಹೇಬ್ ಅಂಬೇಡ್ಕರ್, ಬುದ್ಧನಿಂದ ಹಿಡಿದು ಅನೇಕರು ಸಮಾಜ ಸುಧಾರಣೆ ಮಾಡಲು ಪ್ರಯತ್ನಿಸಿದ್ದಾರೆ. ಸಂವಿಧಾನ ಜಾರಿಯಾದ ನಂತರ ಸಮಾಜದ ಸುಧಾರಣೆಯಲ್ಲಿ ವೇಗ ಹೆಚ್ಚಿದೆ. ಆದರೂ ಸಾಮಾಜಿಕ ವ್ಯವಸ್ಥೆ ನೂರಕ್ಕೆ ನೂರು ಬದಲಾವಣೆಯಾಗಿಲ್ಲ. ಬಸವಣ್ಣ ಹೇಳಿದ ಇವ ನಮ್ಮವ ಎನ್ನುವ ಭಾವನೆ ಎಲ್ಲರಲ್ಲಿ ಬರಬೇಕು. ಜಾತಿ ವ್ಯವಸ್ಥೆಯನ್ನು ಗಟ್ಟಿ ಮಾಡಲೆಂದೇ ಮನುವಾದ ಎಂಬ ವರ್ಗವಿದೆ. ಕರ್ಮ ಸಿದ್ಧಾಂತವನ್ನು ವಿದ್ಯಾವಂತರು ನಂಬುವುದು ನಮ್ಮ ಸಮಾಜದ ದೊಡ್ಡ ದುರಂತ ಎಂದರು.
ಬಸವಣ್ಣಗೆ ದೇವರ ಬಗ್ಗೆ ನಂಬಿಕೆ ಇರಲಿಲ್ಲ:
ದೇವರು ದೇವಸ್ಥಾನಗಳ ಬಗ್ಗೆ ಬಸವಣ್ಣನವರಿಗೆ ನಂಬಿಕೆ ಇರಲಿಲ್ಲ. ಕುವೆಂಪುರವರು ಗುಡಿ, ಚರ್ಚ್ ಮಸೀದಿಗಳನ್ನು ಬಿಟ್ಟು ಹೊರ ಬರಲು ಕರೆ ನೀಡಿದರು. ಮನುಷ್ಯತ್ವವಿಲ್ಲದೆ ಪೂಜೆ ಮಾಡಿದರೆ ಫಲ ದೊರಕುವುದಿಲ್ಲ. ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಮನುಷ್ಯರು ಪರಸ್ಪರರನ್ನು ಪ್ರೀತಿಸಬೇಕು ಎಂದರು. ದ್ವೇಷ ಬಿತ್ತುವವರ ಬಗ್ಗೆ ಜನತೆ ಜಾಗೃತರಾಗಿರಬೇಕು. ಇದು ರಾಜಕಾರಣಕ್ಕಾಗಿ ಮಾಡುವ ಕೆಲಸ. ಶೋಷಣೆ ಮಾಡಲು ಜಾತಿ ವ್ಯವಸ್ಥೆ ಅಗತ್ಯ ಎಂದು ಭಾವಿಸುವವರು ಸಮಾಜದಲ್ಲಿ ಇದ್ದಾರೆ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಶಾಸಕ ರಿಜ್ವಾನ್ ಅರ್ಷದ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿ ಮಲೆ, ವಿಧಾನ ಪರಿಷತ್ತು ಸದಸ್ಯ ಭೋಜೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಇತರರು ಇದ್ದರು.