ಸಾಹಿತ್ಯ ರುಚಿಯಿಂದ ಬದಲಾವಣೆ ಸಾಧ್ಯ: ಹೇಮಯ್ಯಸ್ವಾಮಿ

| Published : Mar 19 2025, 12:33 AM IST

ಸಾರಾಂಶ

ಸಾಹಿತ್ಯ ಅಭಿರುಚಿಯಿಂದ ಬದಲಾವಣೆ ಸಾಧ್ಯ.

ಕಂಪ್ಲಿಯಲ್ಲಿ ಜಿ. ಪ್ರಕಾಶರ ಕಾವ್ಯ ಕಂಪನ ಕವನ ಸಂಕಲನ ಲೋಕಾರ್ಪಣೆಕನ್ನಡಪ್ರಭ ವಾರ್ತೆ ಕಂಪ್ಲಿ

ಸಾಹಿತ್ಯ ಅಭಿರುಚಿಯಿಂದ ಬದಲಾವಣೆ ಸಾಧ್ಯ ಎಂದು ಇಲ್ಲಿನ ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ ಹೇಳಿದರು.

ಪಟ್ಟಣದ ಗಂಗಾ ಸಂಕೀರ್ಣದಲ್ಲಿ ಕಸಾಪ ತಾಲೂಕು ಮಟ್ಟದ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಕಂಪ್ಲಿ ಕೋಟೆಯ ಲೇಖಕ ಜಿ. ಪ್ರಕಾಶ್ ಅವರ ಕಾವ್ಯ ಕಂಪನ ಕವನ ಸಂಕಲನವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಕವಿ ಬದುಕಿನಲ್ಲಿ ತಾನು ಕಂಡುಂಡ ಸತ್ಯಗಳನ್ನು, ಸಮಾಜದ ಸಮಸ್ಯೆ, ಓರೆ-ಕೋರೆಗಳನ್ನು, ಹದವಾದ ಅನುಭವಗಳನ್ನು ಹತ್ತಿರದಿಂದ ಕಂಡು ಕವಿತೆಯ ಸಾಲಿನಲ್ಲಿ ಹಿಡಿದಿಡುವುದು ಕವಿಯ ಹಿರಿಮೆಗೆ ಸಾಕ್ಷಿಯಾಗಿದೆ. ಲೇಖಕ ಜಿ. ಪ್ರಕಾಶ ಕ್ರಿಯಾಶೀಲ ಕವಿಯಾಗಿದ್ದಾರೆ ಎಂದರು.

ಕಸಾಪ ಗೌರವ ಕಾರ್ಯದರ್ಶಿ ಬಂಗಿ ದೊಡ್ಡ ಮಂಜುನಾಥ ಕೃತಿ ಪರಿಚಯಿಸಿ ಮಾತನಾಡಿ, ಕವಿ ಪ್ರಕಾಶ ಅವರ ಕಾವ್ಯ ಕಂಪನದ ಕವಿತೆಗಳು ಪ್ರಾಸ, ಛಂದಸ್ಸು ಮೊದಲಾದ ನಿಯಮಗಳಿಂದ ಅತೀತವಾಗಿ, ಯಾವುದೇ ಬಂಧಗಳಿಗೆ ಸಿಲುಕದೆ ನಿರಾಭರಣ ಅಲಂಕೃತವಾಗಿ ಓದುಗರಿಗೆ ಸುಲಭವಾಗಿ ಜೀರ್ಣವಾಗುವಂತಿವೆ. ವೈಯಕ್ತಿಕ ಮತ್ತು ಸಮುದಾಯದ ಎಲ್ಲ ಸಮಸ್ಯೆಗಳಿಗೂ ಪರಿಹಾರಗಳಿವೆ. ಸಂಕಲನದಲ್ಲಿ ಕವಿತೆ, ನೀಳ್ಗವಿತೆ, ಚುಟುಕು, ಆಧುನಿಕ ವಚನಗಳಿದ್ದು, ಸಮಾಜ ಸುಧಾರಣೆಗೆ ಚಿಕಿತ್ಸಾ ರೂಪದಲ್ಲಿವೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಂ.ಪಿ. ಬಾಲಾಜಿ ಮಾತನಾಡಿ, ಕೊರೋನಾ ದಿನಗಳಲ್ಲಿ ಸಾಹಿತ್ಯವೇ ಹಲವರ ಸೃಜನಶೀಲ ವ್ಯಕ್ತಿತ್ವ ಹೆಚ್ಚಿಸಲು ಕಾರಣವಾಗಿತ್ತು. ಸಾಮಾಜಿಕ ಜಾಲತಾಣದ ಸಾಹಿತ್ಯ ಭಾವರಹಿತವಾಗಿದೆ. ಮಕ್ಕಳು ಮೊಬೈಲ್ ಮಂಪರಿನಲ್ಲಿದ್ದು, ಸಂವೇದನಾಶೀಲತೆ ಕಳೆದುಕೊಂಡಿದ್ದಾರೆ. ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತಂದು ಸಾಹಿತ್ಯದ ಅಭಿರುಚಿ ಪ್ರೇರೇಪಿಸಬೇಕಿದೆ ಎಂದರು.

ಕರವೇ ತಾಲೂಕು ಅಧ್ಯಕ್ಷ ಬಿ. ರಮೇಶ್ ಮಾತನಾಡಿ, ಲೇಖಕರ ಕವಿತೆಗಳು ಭ್ರಷ್ಟತೆಯನ್ನು ಅಣಕಿಸಿ ಸುಧಾರಣೆಗೆ ಪರಿಹಾರಗಳನ್ನು ಬೋಧಿಸಿದೆ. ಲೇಖಕರ ಚಿಂತನೆಗಳು ಸಮಾಜ ಸುಧಾರಣೆಗೆ ಪ್ರಮುಖವಾಗಿವೆ ಎಂದರು.

ಕಸಾಪ ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಜಿ. ಪ್ರಕಾಶ್, ಎಸ್. ರಾಮಪ್ಪ, ಎಸ್. ಶಾಮಸುಂದರರಾವ್, ಎಲಿಗಾರ ವೆಂಕಟರೆಡ್ಡಿ, ವೀರಮ್ಮ ನಾಗರಾಜ, ಚಂದ್ರಯ್ಯ ಸೊಪ್ಪಿಮಠ, ಎಸ್.ಡಿ. ಬಸವರಾಜ, ಡಾ. ಸುನೀಲ್, ಬಡಿಗೇರ ಜಿಲಾನ್‌ಸಾಬ್, ಮುದುಕಪ್ಪ ನೆಲಜೇರಿ, ಸಂತೋಷ್ ಸೋಗಿ, ಎಸ್. ವಿಜಯಲಕ್ಷ್ಮಿ, ಬೂದಗುಂಪಿ ಹುಸೇನಸಾಬ್ ಇತರರಿದ್ದರು.