ಸಾರಾಂಶ
ಬೆಂಗಳೂರು : ಜನನ ಪ್ರಮಾಣಪತ್ರದಲ್ಲಿ ಒಮ್ಮೆ ನಮೂದಿಸಿದ ಹೆಸರನ್ನು ಮತ್ತೆ ಬದಲಾಯಿಸಲು ಅವಕಾಶವಾಗುವಂತೆ ಜನನ-ಮರಣಗಳ ನೋಂದಣಿ ಕಾಯ್ದೆ-1969ಕ್ಕೆ ಅಗತ್ಯ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ತಮ್ಮ ಮಗ ಅಧ್ರಿತ್ ಭಟ್ ಹೆಸರನ್ನು ಶ್ರೀಜಿತ್ ಭಟ್ ಎಂಬುದಾಗಿ ಬದಲಾಯಿಸಿ ಜನನ ಪ್ರಮಾಣಪತ್ರ ನೀಡಲು ಕೋರಿದ್ದ ಮನವಿ ತಿರಸ್ಕರಿಸಿದ ಉಡುಪಿ ನಗರಸಭೆಯ ಜನನ ಮತ್ತು ಮರಣಗಳ ನೋಂದಣಾಧಿಕಾರಿಯ ಕ್ರಮ ಪ್ರಶ್ನಿಸಿ ದೀಪಾ ಭಟ್ ಎಂಬುವರು ಮಗನ ಮೂಲಕ ಸಲ್ಲಿಸಿದ್ದ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್. ಸಂಜಯ್‌ಗೌಡ ಅವರ ನ್ಯಾಯಪೀಠ ಈ ಆದೇಶ ನೀಡಿದೆ.
ದೀಪಿಕಾ ಅವರು ಮೊದಲಿಗೆ ತಮ್ಮ ಮಗನಿಗೆ ಅಧ್ರಿತ್ ಭಟ್ ಎಂದು ಹೆಸರಿಟ್ಟಿದ್ದರು. ಜನನ ಪ್ರಮಾಣಪತ್ರದಲ್ಲಿ ಅದೇ ಹೆಸರನ್ನು ನಮೂದಿಸಲಾಗಿತ್ತು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆ ಹೆಸರು ಸೂಕ್ತವಲ್ಲ ಎಂದು ತಿಳಿದ ಕಾರಣ ಶ್ರೀಜಿತ್ ಭಟ್ ಎಂಬುದಾಗಿ ಬದಲಿಸಲು ನಿರ್ಧರಿಸಿದ್ದರು. ಇದರಿಂದ ಜನನ ಪ್ರಮಾಣಪತ್ರದಲ್ಲಿ ಹೆಸರು ಬದಲಾವಣೆ ಮಾಡಿಕೊಡಲು ಕೋರಿ ನಗರಸಭೆಯ ಜನನ ಮತ್ತು ಮರಣಗಳ ನೋಂದಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದರು.
ಆದರೆ, ಆ ಮನವಿಯನ್ನು 2023ರ ಜ.4ರಂದು ತಿರಸ್ಕರಿಸಿದ್ದ ನೋಂದಣಾಧಿಕಾರಿ, ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ- 1969ರಲ್ಲಿ ಜನನ ಪ್ರಮಾಣಪತ್ರದಲ್ಲಿ ನಮೂದಿಸಿರುವ ಹೆಸರು ಬದಲಿಸಲು ಅವಕಾಶವಿಲ್ಲ ಎಂದು ತಿಳಿಸಿ ಹಿಂಬರಹ ನೀಡಿದ್ದರು. ಆ ಹಿಂಬರಹವನ್ನು ರದ್ದುಪಡಿಸಬೇಕು. ತಮ್ಮ ಮಗನ ಜನನ ಪ್ರಮಾಣಪತ್ರದಲ್ಲಿನ ಹೆಸರನ್ನು ಶ್ರೀಜಿತ್ ಭಟ್ ಎಂಬುದಾಗಿ ಬದಲಿಸಿ ಜನನ ಪ್ರಮಾಣಪತ್ರ ವಿತರಿಸಲು ಉಡುಪಿ ನಗರಸಭೆ ಜನನ ಮತ್ತು ಮರಣಗಳ ನೋಂದಣಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿ ದೀಪಿಕಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನಮ್ಮ ದೇಶದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಒಮ್ಮೆ ನಾಮಕರಣ ಮಾಡಿದ ಹೆಸರನ್ನು ಬದಲಾಯಿಸಲು ನಿರ್ಧರಿಸಿರುವುದು ಸಾಮಾನ್ಯ. ಆದರೆ, ದಾಖಲೆಗಳು ಒಂದು ಬಾರಿ ಜನನ ಪ್ರಮಾಣಪತ್ರದಲ್ಲಿ ಹೆಸರು ನಮೂದಿಸಿದರೆ, ನಂತರ ಅದನ್ನು ಬದಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ.
ಈ ಬಗ್ಗೆ ಶಾಸನಸಭೆ ಗಮನ ಹರಿಸಬೇಕಿದೆ. ನಾಗರಿಕರು ತಾವು ಬಯಸಿದ ಸಂದರ್ಭದಲ್ಲಿ ತಮ್ಮ ಹೆಸರು ಬದಲಾವಣೆ ಮಾಡಿಕೊಳ್ಳಲು ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುವ ರೀತಿಯಲ್ಲಿ ಕಾಯ್ದೆಗೆ ತಿದ್ದುಪಡಿ ತರಬೇಕು. ಜೊತೆಗೆ, ಹೆಸರು ಬದಲಾಯಿಸಿಕೊಳ್ಳುವವರ ದಾಖಲೆಯಲ್ಲಿ ಏಕಕಾಲಕ್ಕೆ ಬದಲಾವಣೆಗೆ ಅವಕಾಶ ನೀಡುವಂತಹ ಕಾರ್ಯವಿಧಾನ ರೂಪಿಸಬೇಕು. ಆ ನಿಟ್ಟಿನಲ್ಲಿ ಜನನ-ಮರಣಗಳ ನೋಂದಣಿ ಕಾಯ್ದೆ-1969ಕ್ಕೆ ಅಗತ್ಯ ತಿದ್ದುಪಡಿ ತರಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.