ಪ್ರತಿಷ್ಠಿತ ಮ್ಯಾಮ್ಕೋಸ್ ಸಂಸ್ಥೆಯಲ್ಲಿ ಬದಲಾವಣೆ ತರಬೇಕಿದೆ: ಮಧು ಬಂಗಾರಪ್ಪ

| Published : Feb 01 2025, 12:00 AM IST

ಪ್ರತಿಷ್ಠಿತ ಮ್ಯಾಮ್ಕೋಸ್ ಸಂಸ್ಥೆಯಲ್ಲಿ ಬದಲಾವಣೆ ತರಬೇಕಿದೆ: ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಶಿವಮೊಗ್ಗದ ಪ್ರತಿಷ್ಠಿತ ಮ್ಯಾಮ್ಕೋಸ್ ಸಂಸ್ಥೆಯಲ್ಲಿ ರಾಜಕಾರಣ ನುಸುಳಿದ್ದು ಇದರಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ರಾಜ್ಯದಲ್ಲಿ 13.500 ಶಿಕ್ಷಕರ ನೇಮಕಾತಿ । ರಾಜ್ಯದಲ್ಲಿ 2500 ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಶಿವಮೊಗ್ಗದ ಪ್ರತಿಷ್ಠಿತ ಮ್ಯಾಮ್ಕೋಸ್ ಸಂಸ್ಥೆಯಲ್ಲಿ ರಾಜಕಾರಣ ನುಸುಳಿದ್ದು ಇದರಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಶುಕ್ರವಾರ ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಹಕಾರ ಸಂಸ್ಥೆಗಳು ರೈತರಿಗೆ ಹತ್ತಿರವಾಗಬೇಕೇ ವಿನಃ ಯಾವುದೇ ರಾಜಕೀಯ ಪಕ್ಷಕ್ಕೆ ಹತ್ತಿರವಾಗಿರಬಾರದು. ಕಾಂಗ್ರೆಸ್ ಪಕ್ಷದ ವರಿಷ್ಠರ ಆದೇಶದಂತೆ ಮ್ಯಾಮ್ಕೋಸ್ ಆಡಳಿತ ಮಂಡಳಿ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಂಡಿದೆ. ರಾಷ್ಟ್ರೀಯ ಸಹಕಾರ ಪ್ರತಿಷ್ಠಾನದ ನೇತೃತ್ವದಲ್ಲಿ ಈಗಾಗಲೇ 19 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಫೆ. 4 ರಂದು ಚುನಾವಣೆ ನಡೆಯಲಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ಚೆನ್ನಗಿರಿ, ಹೊನ್ನಾಳಿ ತಾಲೂಕಿನಲ್ಲಿ ಮ್ಯಾಮ್ಕೋಸ್ ಸದಸ್ಯರಿದ್ದಾರೆ. ಚಿಕ್ಕಮಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ಮಾರ್ಗದರ್ಶನದಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ ಗೌಡ ಸಂಘಟನೆ ಮಾಡುತ್ತಿದ್ದಾರೆ. ಇದೊಂದು ವಿಭಿನ್ನ ಚುನಾವಣೆ ಯಾಗಿದ್ದು ಎಲ್ಲರಿಗೂ ಮತದಾನದ ಹಕ್ಕಿಲ್ಲ. ಮ್ಯಾಮ್ಕೋಸ್ ಸಂಸ್ಥೆಯ ಅರ್ಹ ಮತದಾರರಿಗೆ ಮಾತ್ರ ಮತದಾನದ ಹಕ್ಕು ಇದೆ. ಎರಡು ಜಿಲ್ಲೆಗಳ ಶಾಸಕರು ಬೆಂಬಲ ನೀಡಲಿದ್ದಾರೆ. ರಾಷ್ಟ್ರೀಯ ಸಹಕಾರ ಪ್ರತಿಷ್ಠಾನದಡಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಕಾಂಗ್ರೆಸ್ ಬೆಂಬಲ ನೀಡಲಿದೆ. ಮ್ಯಾಮ್ಕೋಸ್ ಸಂಸ್ಥೆ ಸದಸ್ಯರು ರಾಷ್ಟ್ರೀಯ ಸಹಕಾರ ಪ್ರತಿಷ್ಠಾನದ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

13,500 ಶಿಕ್ಷಕರ ನೇಮಕ: ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಕೊರತೆ ಇದ್ದು 13,500 ಶಿಕ್ಷಕರನ್ನು ನೇಮಿಸಿದ್ದೇನೆ ಎಂದು ಮಧು ಬಂಗಾರಪ್ಪ ತಿಳಿಸಿದರು. ನಾನು ಶಿಕ್ಷಣ ಸಚಿವನಾಗಿ ಅಧಿಕಾರ ವಹಿಸಿಕೊಂಡು 1 ವರ್ಷ 9 ತಿಂಗಳು ಕಳೆದಿದೆ. ಶಿಕ್ಷಣ ಇಲಾಖೆ ರಾಜ್ಯದ ದೊಡ್ಡ ಇಲಾಖೆಯಾಗಿದೆ. ಹಲವಾರು ಸಮಸ್ಯೆ ಇದೆ. ಹಿಂದೆ ಶಾಲೆಗಳು ಪ್ರಾರಂಭವಾಗಿ 2 -3 ತಿಂಗಳ ನಂತರ ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿತ್ತು. ಈಗ ಶಾಲೆ ಪ್ರಾರಂಭದಲ್ಲೆ ಅತಿಥಿ ಶಿಕ್ಷಕರನ್ನು ನೇಮಿಸಿ, ಪಠ್ಯ ಪುಸ್ತಕ, ಯೂನಿಪಾರಂ, ಶೂಗಳನ್ನು ನೀಡಿದ್ದೇವೆ ಎಂದರು.

ಉದ್ಯಮಿ ಅಜೀಂ ಪ್ರೇಂ ಜಿ ಅವರು ಶಾಲೆ ಮಕ್ಕಳ ಪೌಷ್ಟಿಕಾಂಶದ ಕೊರತೆ ನೀಗಿಸಲು ಮೊಟ್ಟೆ ಒದಗಿಸಲು ₹1591 ಕೋಟಿ ನೀಡಿದ್ದಾರೆ. ಮಕ್ಕಳ ಮೇಲಿನ ಪ್ರೀತಿ ಹಾಗೂ ವಿಶ್ವಾಸದಿಂದ ಅಜೀಂ ಪ್ರೇಂಜಿ ಈ ಕೊಡುಗೆ ನೀಡಿದ್ದಾರೆ. ಹಿಂದೆ ವಾರದಲ್ಲಿ 2 ದಿನ ನೀಡಲಾಗುತ್ತಿದ್ದ ಮೊಟ್ಟೆಯನ್ನು ಈಗ 7 ದಿನವೂ ನೀಡುವ ಜೊತೆಗೆ ರಾಗಿ ಮಾಲ್ಟು, ಹಾಲು ನೀಡುತ್ತೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಕ್ಕಳಿಗೆ ಬಹಳ ಅನುಕೂಲವಾಗಿದೆ. ಮೊಟ್ಟೆ ಖರೀದಿಯಲ್ಲಿ ಸಣ್ಣ ಮೊತ್ತದ ವ್ಯತ್ಯಾಸವಾಗಿದೆ. ಕೆಲವು ಬಾರಿ ನಾವು ನೀಡುವ ಹಣಕ್ಕಿಂತ ಕಡಿಮೆ ದರದಲ್ಲಿ ಮೊಟ್ಟೆ ಸಿಗುತ್ತದೆ. ಕೆಲವು ಬಾರಿ ಏರಿಕೆಯಾಗಿದೆ. ಇದು ಸಣ್ಣ ಸಮಸ್ಯೆ ಎಂದರು.

ಈ ಸಾಲಿನಲ್ಲಿ ಸಿಇಟಿ ಹಾಗೂ ನೀಟ್ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅನುಕೂಲವಾಗುವಂತೆ 25 ಸಾವಿರ ಮಕ್ಕಳಿಗೆ ಕೆಪಿಎಸ್ ನಲ್ಲಿ ಟ್ಯೂಷನ್ ವ್ಯವಸ್ಥೆ ಮಾಡಲಾಗಿದೆ ಎಂದರು.

2500 ಕೆಪಿಎಸ್: ರಾಜ್ಯದಲ್ಲಿ 2500 ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಿದ್ದು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಸುಸಜ್ಜಿತ ಕಟ್ಟಡ ಕಟ್ಟುತ್ತಿದ್ದೇವೆ. ಈ ವರ್ಷ 450 ರಿಂದ 500 ಹೊಸ ಕರ್ನಾಟಕ ಪಬ್ಲಿಕ್ ಸ್ಕೂಲ್ ನೀಡುತ್ತೇವೆ. ರಾಜ್ಯದಲ್ಲಿ ಈ ವರ್ಷ 1008 ಕೆಪಿಎಸ್ ಶಾಲೆಗಳಿಗೆ ಎಲ್.ಕೆ.ಜಿ ಹಾಗೂ ಯುಕೆಜಿ ಮಂಜೂರು ಮಾಡಿದ್ದೇವೆ ಎಂದರು.

ಸರ್ಕಾರದ ಎಲ್ಲಾ 5 ಗ್ಯಾರಂಟಿಗಳು ಮನೆ, ಮನೆಗೆ ತಲುಪಿದೆ. ಉಚಿತವಾಗಿ ವಿದ್ಯುತ್, ಮಹಿಳೆಯರಿಗೆ ₹2 ಸಾವಿರ ನೀಡಿದ್ದೇವೆ. 33 ವರ್ಷದ ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಉಚಿತ ವಿದ್ಯುತ್ ನೀಡಲು ಪ್ರಾರಂಭಿಸಿದ್ದರು. ಈಗಲೂ ಅದು ಮುಂದುವರಿದೆ. ಇದು ವರೆಗೂ ರೈತರಿಗೆ ಲಕ್ಷಾಂತರ ರು. ವಿದ್ಯುತ್ ಪಂಪ್ ಸೆಟ್ ಬಿಲ್ಲು ಉಳಿತಾಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಶಾಸಕ ಟಿ.ಡಿ.ರಾಜೇಗೌಡ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜನಾಥ ಗೌಡ, ಕೆಪಿಸಿಸಿ ವಕ್ತಾರ ರಮೇಶ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್ ಬೈಲು ನಟರಾಜ, ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾಭಾನು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ನಗರ ಕಾಂಗ್ರೆಸ್ ಅಧ್ಯಕ್ಷ ಉಪೇಂದ್ರ ಮತ್ತಿತರರು ಇದ್ದರು.

ನಂತರ ಕಾಂಗ್ರೆಸ್ ಕಚೇರಿಯಲ್ಲಿ ಮ್ಯಾಮ್ಕೋಸ್ ಚುನಾವಣೆ ಕುರಿತಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಚಿವ ಮಧು ಬಂಗಾರಪ್ಪ ಚರ್ಚೆ ನಡೆಸಿದರು. ಕಾಂಗ್ರೆಸ್ ನಿಂದ ಮಧು ಬಂಗಾರಪ್ಪ ಅವರಿಗೆ ಸ್ವಾಗತ ಕೋರಿ ಬೃಹತ್ ಗಾತ್ರದ ಹಾರ ಹಾಕಲಾಯಿತು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ತಾಲೂಕಿನ ಆಗಮಿಸಿದಾಗ ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕ ಸಂಘದ ಅಧ್ಯಕ್ಷ ನಂಜುಂಡಪ್ಪ ಹಾಗೂ ಸಂಘದ ಪದಾಧಿಕಾರಿಗಳು ಶಿಕ್ಷಕ ಸಚಿವ ಮಧು ಬಂಗಾರಪ್ಪ ಅವರಿಗೆ ಹಾರ ಹಾಕಿ, ತಮ್ಮ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಿದರು.