ಸಾರಾಂಶ
ರಾಜ್ಯಾದ್ಯಂತ ಡೆಂಘೀ ವ್ಯಾಪಕವಾಗಿ ಹರಡುತ್ತಿದ್ದು ಚನ್ನಗಿರಿ ಪಟ್ಟಣದಲ್ಲಿ ಈ ಕಾಯಿಲೆಗಳನ್ನು ಹತೋಟಿಯಲ್ಲಿಡುವ ಉದ್ದೇಶದಿಂದ ಪುರಸಭೆಯಿಂದ 23 ವಾರ್ಡ್‌ಗಳಲ್ಲಿ ಸ್ವಚ್ಛತಾ ಅಭಿಯಾನ ಪ್ರಾರಂಭಿಸಲಾಗಿದ್ದು, ಪಟ್ಟಣದ ಬಡಾವಣೆವೊಂದರಲ್ಲಿ ಚರಂಡಿ ಕಸ ತೆಗೆಯುವ ಕಾರ್ಯದಲ್ಲಿ ಪೌರ ಕಾರ್ಮಿಕರು ನಿರತರಾಗಿರುವುದು.
ಚನ್ನಗಿರಿ: ರಾಜ್ಯಾದ್ಯಂತ ಡೆಂಘೀ ವ್ಯಾಪಕವಾಗಿ ಹರಡುತ್ತಿದ್ದು ಚನ್ನಗಿರಿ ಪಟ್ಟಣದಲ್ಲಿ ಈ ಕಾಯಿಲೆ ಹತೋಟಿಯಲ್ಲಿಡುವ ಉದ್ದೇಶದಿಂದ ಪುರಸಭೆಯಿಂದ 23 ವಾರ್ಡ್‌ಗಳಲ್ಲಿ ಸ್ವಚ್ಛತಾ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ಮಾಹಿತಿ ನೀಡಿದ್ದಾರೆ.
ಪ್ರಸ್ತುತವಾಗಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಪಟ್ಟಣದ ವ್ಯಾಪ್ತಿ ಚರಂಡಿ, ಖಾಲಿ ನಿವೇಶನಗಳ ಸ್ವಚ್ಛತೆ ಸೇರಿ ಎಲ್ಲಿಯೋ ನೀರು ಸಂಗ್ರಹವಾಗದಂತೆ ನೋಡಿಕೊಳ್ಳ ಲಾಗುತ್ತಿದೆ. ಪ್ರತಿದಿನ ಎಲ್ಲಾ ವಾರ್ಡ್‌ಗಳಲ್ಲಿ ಬ್ಲೀಚಿಂಗ್ ಮತ್ತು ಕ್ರಿಮಿನಾಷಕ ಸಿಂಪಡಣೆ ಮಾಡಲಾಗುತ್ತಿದೆ.ಖಾಸಗಿ ಖಾಲಿ ನಿವೇಶನಗಳಲ್ಲಿ ಗಿಡ-ಗಂಟಿ ಬೆಳೆದಿದ್ದು ತೆರವಿಗೆ ನಿವೇಶನಗಳ ಮಾಲೀಕರುಗಳಿಗೆ ಈಗಾಗಲೇ ನೋಟಿಸ್ ನೀಡಿದೆ. ಕೆಲ ಮಾಲೀಕರು ತಮ್ಮ ನಿವೇಶನ ಸ್ವಚ್ಛಗೊಳಿಸಿದ್ದಾರೆ. ಇನ್ನೂ ಕೆಲವರು ನಿವೇಶನಗಳನ್ನು ಸ್ವಚ್ಛಗೊಳಿಸದೆ ಇದ್ದು, ಪುರಸಭೆ ಸಿಬ್ಬಂದಿಯಿಂದ ಸ್ವಚ್ಛಗೊಳಿಸಿ ಅದಕ್ಕೆ ತಗುಲುವ ವೆಚ್ಚವನ್ನು ಆ ಮಾಲೀಕರಿಂದಲೇ ಬರಿಸುವ ಯೋಜನೆ ಸಿದ್ದಪಡಿಸಲಾಗಿದೆ.
ಸಾರ್ವಜನಿಕರು ಸಹಾ ತಮ್ಮ ಮನೆ ಸುತ್ತ ಮುತ್ತಲಿನಲ್ಲಿ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಪುರಸಭೆಯಿಂದ ಪ್ರತಿದಿನ ಮನೆ ಕಸ ಸಂಗ್ರಹಿಸಲು ತೆರಳುವ ಗಾಡಿಗಳಲ್ಲಿ ಧ್ವನಿವರ್ಧಕದ ಮೂಲಕ ವ್ಯಾಪಕವಾಗಿ ಪ್ರಚಾರ ನಡೆಸಲಾಗುತ್ತಿದೆ ಎಂದರು.