ಚನ್ನಗಿರಿ ಗಲಭೆ ಪ್ರಕರಣ ಹೆಚ್ಚಿನ ತನಿಖೆ: ಡಾ.ಪರಮೇಶ್ವರ

| Published : May 31 2024, 02:15 AM IST

ಚನ್ನಗಿರಿ ಗಲಭೆ ಪ್ರಕರಣ ಹೆಚ್ಚಿನ ತನಿಖೆ: ಡಾ.ಪರಮೇಶ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ಘಟನೆ ಕುರಿತಂತೆ ಮಾಹಿತಿ ಪಡೆಯಲು ಖುದ್ದಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಪೊಲೀಸ್ ಠಾಣೆಗೆ ನುಗ್ಗಿ ಧ್ವಂಸ ಮಾಡಿದ್ದು ಒಂದು ಪ್ರಕರಣವಾದರೆ, ಮಟ್ಕಾ ಆಡಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ ಪ್ರಕರಣ ಸಹ ಒಂದಾಗಿದೆ. ಎರಡೂ ಪ್ರಕರಣಗಳನ್ನು ಹೆಚ್ಚಿನ ತನಿಖೆಗೆ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಚನ್ನಗಿರಿ ಪಟ್ಟಣದಲ್ಲಿ ಹೇಳಿದ್ದಾರೆ.

- ಪಾಕ್ ಪರ ಘೋಷಣೆ ಕೂಗಿದ್ದರೆ ಕ್ರಮ, ಅಪಪ್ರಚಾರ ಮಾಡಿದ್ರೂ ಕ್ರಮ: ಚನ್ನಗಿರಿಯಲ್ಲಿ ಗೃಹ ಸಚಿವ ಹೇಳಿಕೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಚನ್ನಗಿರಿ ಘಟನೆ ಕುರಿತಂತೆ ಮಾಹಿತಿ ಪಡೆಯಲು ಖುದ್ದಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಪೊಲೀಸ್ ಠಾಣೆಗೆ ನುಗ್ಗಿ ಧ್ವಂಸ ಮಾಡಿದ್ದು ಒಂದು ಪ್ರಕರಣವಾದರೆ, ಮಟ್ಕಾ ಆಡಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ ಪ್ರಕರಣ ಸಹ ಒಂದಾಗಿದೆ. ಎರಡೂ ಪ್ರಕರಣಗಳನ್ನು ಹೆಚ್ಚಿನ ತನಿಖೆಗೆ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

ಚನ್ನಗಿರಿ ಪೊಲೀಸ್ ಠಾಣೆಗೆ ಶುಕ್ರವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ತನಿಖೆ ಮತ್ತು ಎಫ್ಎಸ್ಎಲ್ ವರದಿ ಬಂದಾಗಲಷ್ಟೇ ಸತ್ಯಾಂಶ ಗೊತ್ತಾಗಲಿದೆ. ಈವರೆಗೆ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿ, ಇಲಾಖೆ ಸ್ವತ್ತು ಧ್ವಂಸ ಸೇರಿದ ಪ್ರಕರಣಗಳಲ್ಲಿ ಒಟ್ಟು 30 ಜನರನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದರು.

ಇಂತಹ ಪ್ರಕರಣ ನಡೆದಾಗ ಅಮಾನತು ಸಹಜವಾಗಿ ಆಗುತ್ತದೆ. ಘಟನೆ ಬಗ್ಗೆ ತನಿಖೆಯಾಗಿ, ಅಂತಹ ಅಧಿಕಾರಿಗಳ ತಪ್ಪಿಲ್ಲವೆಂದರೆ ಮತ್ತೆ ಸೇವೆಯಲ್ಲಿ ಮುಂದುವರಿಯುತ್ತಾರೆ. ಕಲ್ಲು ತೂರಾಟ ಯಾವ ಕಾರಣಕ್ಕೆ ನಡೆದಿದೆ ಎಂಬುದನ್ನು ಕಲ್ಲು ತೂರಿದವರನ್ನೇ ನೀವು ಕೇಳಬೇಕು. ಕಲ್ಲು ತೂರಾಟ ಮಾಡಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿ ಸೆರೆಯಾದವರನ್ನು ಹಿಡಿದು, ಶಿಕ್ಷೆ ಕೊಡಿಸುತ್ತೇವೆ ಎಂದು ಹೇಳಿದರು.

ಮೊನ್ನೆ ಚನ್ನಗಿರಿ ಗಲಾಟೆ ವೇಳೆ ಪಾಕಿಸ್ಥಾನ ಜಿಂದಾಬಾದ್ ಎಂಬುದಾಗಿ ಘೋಷಣೆ ಕೂಗಿ, ಕಲ್ಲು ತೂರಾಟ ನಡೆಸಿರುವುದು ಪ್ರಕರಣದಲ್ಲಿ ಕಂಡು ಬಂದಿಲ್ಲ. ಹಾಗೇನಾದರೂ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಒಂದು ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗದೇ ಇದ್ದರೂ, ಕೂಗಿದ್ದಾರೆಂದು ಪ್ರಚಾರ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಪ್ರತಿಕ್ರಿಯಿಸಿದರು.

ಇಡೀ ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಆಗಿಲ್ಲ. ಎಲ್ಲ ಕಡೆಗಳಲ್ಲೂ ಸಿಬ್ಬಂದಿ ಕೊರತೆ ಇದೆ. ಈಗ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಮುಂದೆ ಎಲ್ಲವೂ ಸರಿಯಾಗಲಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಶಿವಗಂಗಾ ವಿ.ಬಸವರಾಜ, ಎಡಿಜಿಪಿ ಆರ್.ಹಿತೇಂದ್ರ, ಪೂರ್ವ ವಲಯ ಐಜಿಪಿ ಡಾ.ತ್ಯಾಗರಾಜನ್, ಎಸ್‌ಪಿ ಉಮಾ ಪ್ರಶಾಂತ ಇತರರು ಇದ್ದರು.

- - -

ಬಾಕ್ಸ್‌-1 * ಪಬ್ಲಿಕ್ ರಿಜಿಸ್ಟರ್ ನಿರ್ವಹಣೆ ಇಲ್ಲ: ಪರಂ ಗರಂ ಕನ್ನಡಪ್ರಭ ವಾರ್ತೆ, ದಾವಣಗೆರೆ ಚನ್ನಗಿರಿ ಪೊಲೀಸ್‌ ಠಾಣೆ ಮೇಲಿನ ದಾಳಿ ಹಿನ್ನೆಲೆಯಲ್ಲಿ ಶುಕ್ರವಾರ ಅಲ್ಲಿಗೆ ಭೇಟಿ ನೀಡಿದ್ದ ಗೃಹ ಸಚಿವ ಡಾ. ಜಿ.ಪರಮೇಶ್ವರ ಘಟನೆ ಬಗ್ಗೆ ಅಧಿಕಾರಿ, ಸಿಬ್ಬಂದಿಯಿಂದ ಮಾಹಿತಿ ಪಡೆದು, ಠಾಣೆಯಲ್ಲಿ ಪಬ್ಲಿಕ್‌ ರಿಜಿಸ್ಟರ್ ನಿರ್ವಹಣೆ ಮಾಡದ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಗೃಹ ಸಚಿವ ಡಾ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಶಿವಗಂಗಾ ವಿ.ಬಸವರಾಜ, ಎಡಿಜಿಪಿ ಆರ್.ಹಿತೇಂದ್ರ, ಪೂರ್ವ ವಲಯ ಐಜಿಪಿ ಡಾ.ತ್ಯಾಗರಾಜನ್, ಎಸ್‌ಪಿ ಉಮಾ ಪ್ರಶಾಂತ್‌ ರ ಜೊತೆಗೆ ಚನ್ನಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಘಟನೆ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಿದರು.

ಇದೇ ವೇಳೆ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಡಾ. ಪರಮೇಶ್ವರ, ಠಾಣೆಯಲ್ಲಿ ಪಬ್ಲಿಕ್ ರಿಜಿಸ್ಟರ್ ನಿರ್ವಹಣೆ ಎಲ್ಲಿ ಮಾಡಿದ್ದೀರಿ, ತೋರಿಸಿ. ಅಂದಿನ ಘಟನೆಯ ಸಿಸಿ ಕ್ಯಾಮೆರಾ ಫೂಟೇಜ್‌ಗಳನ್ನು ತೋರಿಸುವಂತೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

ಅನಂತರ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಯೂ ವ್ಯವಸ್ಥೆಯನ್ನು ನಿರ್ವಹಣೆ ಮಾಡುವ ಬಗ್ಗೆ ಅಧಿಕಾರಿ, ಸಿಬ್ಬಂದಿಗೆ ತರಬೇತಿ ಕೊಡಿ ಎಂಬುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ ನಂತರ ಡಾ.ಪರಮೇಶ್ವರ, ಜಿಲ್ಲಾ ಸಚಿವರು, ಅಧಿಕಾರಿಗಳೊಂದಿಗೆ ಸುಮಾರು ಹೊತ್ತು ಪ್ರತ್ಯೇಕವಾಗಿ ಸಭೆ ನಡೆಸಿದರು.

- - -

ಬಾಕ್ಸ್‌-2 ಪ್ರಜ್ವಲ್ ಮಾಹಿತಿ ನೀವೇ ನೀಡ್ತಿದ್ದೀರಿ! ಸಂಸದ ಪ್ರಜ್ವಲ್ ರೇವಣ್ಣ ಎಲ್ಲಿ ಕೂತಿದ್ದಾನೆ, ಎಷ್ಟು ಕೆಜಿ ಬ್ಯಾಗ್ ಇದೆಯೆಂದೆಲ್ಲಾ ನೀವೇ ತೋರಿಸುತ್ತಿದ್ದೀರಿ. ಎಷ್ಟು ಅಗಲ, ಎಷ್ಟು ಉದ್ದ ಬ್ಯಾಗ್ ಇದೆಯೆಂದೂ ನೀವೇ ತೋರಿಸುತ್ತಿರುವಿರಿ. ಸಿಎಂ ಸಭೆ ಮಾಡುತ್ತಿದ್ದಾರೆ. ನಾನು ಶಿವಮೊಗ್ಗಕ್ಕೆ ಹೋಗಿದ್ದ ಕಾರಣ ಮುಖ್ಯಮಂತ್ರಿಗಳೇ ಸಭೆ ಮಾಡುತ್ತಿದ್ದಾರೆ

- ಡಾ.ಜಿ.ಪರಮೇಶ್ವರ, ಗೃಹ ಸಚಿವ

- - - -30ಕೆಸಿಎನ್‌ಜಿ4:

ಚನ್ನಗಿರಿ ಠಾಣೆ ಗಲಭೆ ಹಿನ್ನೆಲೆ ಗುರುವಾರ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಬಸವರಾಜು ವಿ.ಶಿವಗಂಗಾ ಇತರ ಮುಖಂಡರು ಇದ್ದರು.