ಸಾರಾಂಶ
- ಸುಸಜ್ಜಿತ ಆಸ್ಪತ್ರೆ, ಪೆಟ್ರೋಲ್ ಬಂಕ್‌ಗಳ ನಿರ್ಮಾಣಕ್ಕೆ ಸದಸ್ಯರು ಸಹಕರಿಸಲು ಮನವಿ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ (ತುಮ್ಕೋಸ್) ಸಂಸ್ಥೆಯ ವಿಶೇಷ ಸಾಮಾನ್ಯ ಸಭೆ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ಪಟ್ಟಣದ ಶ್ರೀ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ನಡೆಯಿತು. ಸಂಸ್ಥೆಗೆ ಆದಾಯ ತರುವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಚರ್ಚೆ ನಡೆಸಿ, ಹಲವು ತೀರ್ಮಾನಗಳನ್ನು ಕೈಗೊಳ್ಳಲಾಯಿತು.ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ಮಾತನಾಡಿ, ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಸಂದರ್ಭ ನಮ್ಮ ತಂಡದ ವತಿಯಿಂದ ಸಂಸ್ಥೆ ಸದಸ್ಯರಿಗೆ ಹಲವಾರು ಭರವಸೆಗಳನ್ನು ನೀಡಿದ್ದೆವು. ನಮ್ಮ ದೂರದೃಷ್ಠಿ ಆಲೋಚನೆಗಳನ್ನು ಗಮನಿಸಿದ ಸಂಸ್ಥೆ ಸದಸ್ಯರು ನಮ್ಮ ತಂಡಕ್ಕೆ ಅಭೂತಪೂರ್ವ ಜಯವನ್ನು ತಂದುಕೊಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಾಗುವುದು ಎಂದರು.
ಈ ಸಂಸ್ಥೆ ಜನತಾ ಸಂಸ್ಥೆಯಾಗಿದೆ. ಸಂಸ್ಥೆಯ ಎಲ್ಲ ಅಭಿವೃದ್ದಿ ಕೆಲಸಗಳ ಬಗ್ಗೆ ಸದಸ್ಯರ ಒಪ್ಪಿಗೆ ತೆಗೆದುಕೊಳ್ಳಲು ಈ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದೆ. ಸಂಘದ ಸದಸ್ಯರಿಗೆ ಕಡಿಮೆ ವೆಚ್ಚದಲ್ಲಿ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಆಡಳಿತ ಮಂಡಳಿ ಸದಸ್ಯರು ತೀರ್ಮಾನಿಸಿದ್ದೇವೆ. ಅದಕ್ಕೆ ಸದಸ್ಯರು ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರಿದರು.ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯ ಬಸ್ ನಿಲ್ದಾಣ ಬಳಿ ಸಂಸ್ಥೆ ಹೆಸರಿಯಲ್ಲಿ 2.5 ಎಕರೆ ಜಮೀನು ಇದೆ. ಇಲ್ಲಿ ಆಸ್ಪತ್ರೆ ನಿರ್ಮಿಸಬೇಕೋ ಅಥವಾ ಬೇರೆ ಕಡೆ ಜಾಗ ಖರೀದಿಸಿ, ಅಲ್ಲಿ ಆಸ್ಪತ್ರೆ ನಿರ್ಮಿಸಬೇಕೋ ಎಂಬ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸಂಸ್ಥೆ ವತಿಯಿಂದ ಈಗಾಗಲೇ ಪೆಟ್ರೋಲ್ ಬಂಕ್ ಪ್ರಾರಂಭಿಸಿದ್ದೇವೆ. ಇದರಿಂದ ಸಂಸ್ಥೆಗೆ ಪ್ರತಿವರ್ಷ ₹50 ಲಕ್ಷ ಆದಾಯ ಬರುತ್ತಿದೆ. ಇನ್ನು 6ರಿಂದ 7 ಪೆಟ್ರೋಲ್ ಬಂಕ್‌ಗಳನ್ನು ಸಂಸ್ಥೆ ಕಾರ್ಯ ವ್ಯಾಪ್ತಿಯಲ್ಲಿ ಬರುವ ಆಯ್ದ ಸ್ಥಳಗಳಲ್ಲಿ ಸ್ಥಾಪಿಸಿದರೆ ಸಂಸ್ಥೆಗೆ ವಾರ್ಷಿಕ ₹3ರಿಂದ ₹4 ಕೋಟಿ ಆದಾಯ ಬರಲಿದೆ ಎಂದರು.ಪ್ರಸ್ತುತ ಚನ್ನಗಿರಿ ಪಟ್ಟಣದಲ್ಲಿ ಸಂಸ್ಥೆ ವತಿಯಿಂದ ಸೂಪರ್ ಮಾರ್ಕೆಟ್ ಪ್ರಾರಂಭಿಸಲಾಗಿದೆ. ಇದನ್ನು ಉನ್ನತ ದರ್ಜೆಗೆ ಏರಿಸಿ ಎಲ್ಲ ವಸ್ತುಗಳು ಒಂದೇ ಸೂರಿನಡಿ ಬಟ್ಟೆ, ದಿನಸಿ, ಗೃಹ ಉಪಯೋಗಿ ವಸ್ತುಗಳು ಸೇರಿದಂತೆ ಇನ್ನಿತರೆ ಎಲ್ಲ ರೀತಿಯ ವಸ್ತುಗಳು ದೊರೆಯುವಂತೆ ಮಾಡಲಾಗುವುದು ಎಂದು ತಿಳಿಸಿದರು.
ತುಮ್ಕೋಸ್ ಸಂಸ್ಥೆಯು ₹13 ಕೋಟಿಗಳ ಆದಾಯದಲ್ಲಿದೆ. ಮುಂದಿನ 5 ವರ್ಷಗಳಲ್ಲಿ ವಾರ್ಷಿಕವಾಗಿ ಕನಿಷ್ಠ ₹25 ಕೋಟಿ ಆದಾಯ ಬರುವಂತೆ ಮಾಡುವುದು ಆಡಳಿತ ಮಂಡಳಿ ಉದ್ದೇಶವಾಗಿದೆ. ಕಳೆದ ಅವಧಿಯಲ್ಲಿ ಇದ್ದ ಆಡಳಿತ ಮಂಡಳಿಯವರು ರೈತರಿಗೆ ಸಾಲ ನೀಡಲು ಖಾಸಗಿ ಬ್ಯಾಂಕಿನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಹಣ ರೈತರ ಕೈ ಸೇರಲು ಎರಡು-ಮೂರು ದಿನಗಳು ಬೇಕಾಗುತ್ತಿತ್ತು. ಸಂಸ್ಥೆಯ ಆಡಳಿತ ನಮ್ಮ ಕೈ ಸೇರಿದ ತಕ್ಷಣ ಸಣ್ಣ ರೈತರಿಗೆ ₹50 ಸಾವಿರದವರೆಗೆ ಸುಲಭವಾಗಿ ಸಾಲ ದೊರೆಯುವಂತೆ ಮಾಡಲಾಗಿದೆ ಎಂದರು.ಸಭೆ ಪ್ರಾರಂಭದಲ್ಲಿ ಪೆಹಲ್ಗಾಂನಲ್ಲಿ ಹತ್ಯೆಯಾದ ಪ್ರವಾಸಿಗರಿಗೆ ಮತ್ತು ಭಾರತ-ಪಾಕಿಸ್ತಾನ ಯುದ್ದದಲ್ಲಿ ಹುತಾತ್ಮರಾದ ಭಾರತ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಯುಪಿಎಸ್‌ಸಿ ಪರೀಕ್ಷೆಯಲ್ಲಿ 615ನೇ ರ್ಯಾಂಕ್ ಪಡೆದ ತಾಲೂಕಿನ ಡಾ.ದಯಾನಂದ ಸಾಗರ್ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಎಂ.ಎನ್. ಗಂಗಾಧರಪ್ಪ, ಜಿ.ಬಿ.ವಿಜಯ್ ಕುಮಾರ್, ಟಿ.ವಿ.ರಾಜು, ಎಚ್.ಎಸ್. ಮಂಜುನಾಥ್, ಎಂ.ಮಂಜುನಾಥ್, ಕೆ.ಎನ್. ಪ್ರಭುಲಿಂಗಪ್ಪ, ಜಿ.ಆರ್. ಶಿವಕುಮಾರ್, ಜಿ.ಎಸ್. ಬಸವರಾಜ್, ಎಂ.ಈ. ಮೀನಾಕ್ಷ್ಮಿ, ಎಲ್.ವಿ. ಶೋಭಾ, ಬಿ.ಚನ್ನಬಸಪ್ಪ, ಕೆ.ಜಿ. ಓಂಕಾರಮೂರ್ತಿ, ಲೋಕೇಶ್ವರ, ಎಸ್.ರಘು, ವ್ಯವಸ್ಥಾಪಕ ನಿರ್ದೇಶಕ ಎನ್.ಪಿ.ಮಧು ಉಪಸ್ಥಿತರಿದ್ದರು.- - -
-12ಕೆಸಿಎನ್‌ಜಿ2.ಜೆಪಿಜಿ:ಚನ್ನಗಿರಿ ತುಮ್ಕೋಸ್ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಮಾತನಾಡಿದರು.