ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಭಾರತೀಯ ಹಿಂದೂ ಸಂಸ್ಕೃತಿಯ ಪಾಲನೆಯಲ್ಲಿ ದಿ. ಚನ್ನಮ್ಮನವರು ಆದರ್ಶಪ್ರಾಯರಾಗಿದ್ದರು. ಅವರ ಮನೆಗೆ ಹೋಗುವ ಪ್ರತಿಯೊಬ್ಬರನ್ನು ಆತ್ಮೀಯವಾಗಿ ಮಾತನಾಡಿಸುವ ಜತೆಗೆ ಆತಿಥ್ಯ ನೀಡಿ, ಉಪಚರಿಸುತ್ತಿದ್ದರು. ಜತೆಗೆ ಮಹಿಳೆಯರಿಗೆ ಅರಿಶಿಣ ಕುಂಕುಮ, ತಾಂಬೂಲ ನೀಡಿ ಆಶೀರ್ವದಿಸಿ ಕಳುಹಿಸಿಕೊಡುತ್ತಿದ್ದ ಅವರ ಮಾತೃ ಹೃದಯ ಹಾಗೂ ಮಾತೃವಾತ್ಸಲ್ಯಕ್ಕೆ ನಮ್ಮ ಅನಂತಾನಂತ ವಂದನೆಗಳು ಎಂದು ತಾ.ಪಂ. ಮಾಜಿ ಅಧ್ಯಕ್ಷ ಗುಂಜೇವು ಮಲ್ಲಿಕಾರ್ಜುನ್ ಕಂಬನಿ ಮಿಡಿದರು.ಪಟ್ಟಣದ ಚನ್ನಾಂಬಿಕ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿ. ಚನ್ನಮ್ಮನವರ ಆತ್ಮಕ್ಕೆ ಶಾಂತಿ ಕೋರಿ, ಭಾವಪೂರ್ವ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಪನಮನ ಸಲ್ಲಿಸಿ, ಮಾತನಾಡಿದರು. ದಿ. ಚನ್ನಮ್ಮನವರ ಜೀವನದ ತತ್ವ, ಆದರ್ಶ ಹಾಗೂ ಸಂಸ್ಕೃತಿಯ ಪಾಲನೆಯನ್ನು ನಾವು ತಪ್ಪದೇ ಪಾಲಿಸಬೇಕಿದೆ ಎಂದರು. ಹಿರಿಯ ಸಾಹಿತಿ ನಾಗೇಶ್ ಕೌಂಡಿನ್ಯ ಮಾತನಾಡಿ, ಪತಿಯೇ ದೇವರೆಂದು ನಂಬಿರೋ ಪುರಾಣ ಕಥೆಗಳನ್ನು ಕೇಳ್ತೀವಿ, ಅದನ್ನ ಅಕ್ಷರಶಃ ನಿಜ ಮಾಡಿ ತೋರಿಸಿದ್ದು ಅಂತ ಅಂದ್ರೆ ಚನ್ನಮ್ಮನವರು. ದೇವೇಗೌಡರು ಅವರ ಜೀವನದಲ್ಲಿ ಹಂತ ಹಂತವಾಗಿ ಬೆಳೆದು, ಒಂದು ಉನ್ನತ ಮಟ್ಟಕ್ಕೆ ಸೇರಿದ್ದಾರೆ ಅಂತ ಅಂದ್ರೆ, ಸಾಧನೆ ಮಾಡಿದ್ದಾರೆ ಅಂತ ಅಂದ್ರೆ ಅದಕ್ಕೆ ಪ್ರೇರಕ ಶಕ್ತಿಯಾಗಿ ನಿಂತುಕೊಂಡಿದ್ದವರು ಚನ್ನಮ್ಮನವರು ಎಂದು ಸ್ಮರಿಸಿದರು.ಒಬ್ಬ ವ್ಯಕ್ತಿಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಾಗಲಿ ಅಥವಾ ಅವರ ಅಂತ್ಯ ಸಂಸ್ಕಾರದ ಕಾರ್ಯಕ್ರಮದಲ್ಲಾಗಲಿ ತಾನಾಗಿಯೇ ಯಾವುದೇ ಫಲಾಪೇಕ್ಷೆ ಇಲ್ಲದೆ, ಯಾವುದೇ ರಾಜಕೀಯ ಉದ್ದೇಶ ಇಲ್ಲದೆ, ಸ್ವಯಂ ಪ್ರೇರಿತನಾಗಿ, ನಿಶ್ಕಲ್ಮಷವಾದ ಹೃದಯದಿಂದ ಹೋಗಿ ಕಂಬನಿ ಮಿಡಿಯೋದು ನಮ್ಮನ್ನು ಕಾಯುವ ವೀರ ಯೋಧರಿಗೆ ಮತ್ತು ಮಾತೃಸ್ವರೂಪಿಣಿ, ಆದರ್ಶ ಗೃಹಣಿ ಹಾಗೂ ಪತಿಯೇ ದೈವವೆಂದು ಅವರ ಕಷ್ಟ ಸುಖದಲ್ಲಿ ಭಾಗಿಯಾಗಿ, ಅವರ ಏಳಿಗೆಗೆ ಬೆನ್ನಲುಬಾಗಿ ನಿಂತಿದ್ದ ಚನ್ನಮ್ಮನಂತಹ ಮಾತೃ ಹೃದಯ ಹೊಂದಿದ ವ್ಯಕ್ತಿಗಳಿಗೆ ಮಾತ್ರ ಹೃದಯ ಪೂರ್ವಕವಾಗಿ, ಭಾವನಾತ್ಮಕವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತಾರೆ ಎಂದರು. ಹುಟ್ಟಿದ ಮೇಲೆ ಸಾಯ್ತೀವಿ, ನಮ್ಮ ಸಾವು ಸಾರ್ಥಕ ಆಗಬೇಕು ಎಂದರೆ, ಚನ್ನಮ್ಮನವರ ತರ ನಾವು ಬಾಳಿ ಬದುಕಬೇಕು. ಪ್ರತಿಯೊಬ್ಬ ಸ್ತ್ರೀಯರು, ಗೃಹಿಣಿಯರು ಈ ಮಹಾತಾಯಿಯ ಒಂದು ಜೀವನ ಹೇಗೆ ಇತ್ತೋ, ಅವರು ಹೇಗೆ ಬದುಕಿದ್ರೋ, ತಮ್ಮ ಮನೆಗೆ ಬಂದಾಗ ಯಾವ ತರ ವಿಚಾರ ಮಾಡ್ತಿದ್ರೋ, ಅದೇ ರೀತಿ ಪಾಲಕನೆ ಮಾಡಬೇಕಿದೆ ಮತ್ತು ಇದು ಆದರ್ಶ ಗೃಹಿಣಿಯ ಮುಖ್ಯವಾದ ಕರ್ತವ್ಯವಾಗಿದೆ ಎಂದರು.ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ, ತಾಪಂ ಉಪಾಧ್ಯಕ್ಷ ಜವರೇಗೌಡ, ಕಸಾಪ ತಾ. ಅಧ್ಯಕ್ಷ ಪುಟ್ಟೇಗೌಡ, ಜಿಪಂ ಮಾಜಿ ಸದಸ್ಯ ಚಂದ್ರರಶೇಖರ್, ಹಿರಿಯ ಪತ್ರಕರ್ತ ಬಾರಾ ಸುಬ್ಬರಾಯ, ಜೈಪ್ರಕಾಶ್, ಅಕ್ರಾಂತ್ ರವಿ, ಇತರರು ಮಾತನಾಡಿದರು.