ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಮುಗ್ಧ ದೇಶವಾಸಿಗಳ ಸ್ವಾಭಿಮಾನಕ್ಕೆ ಬ್ರಿಟೀಷರಿಂದ ಧಕ್ಕೆ ಬಂದಾಗ ವೀರವನಿತೆ ರಾಣಿ ಚನ್ನಮ್ಮ ತಮ್ಮ ಕುಟುಂಬದತ್ತ ಚಿತ್ತ ನೀಡದೆ, ದೇಶವಾಸಿಗಳ ಪರವಾಗಿ ಹೋರಾಟ ಮಾಡಿ ಪ್ರಾಣ ಬಲಿದಾನ ಮಾಡುವ ಮೂಲಕ ಕಿತ್ತೂರು ಸಂಸ್ಥಾನದ ಹೆಸರನ್ನು ವಿಶ್ವದ ಭೂಪಟದಲ್ಲಿ ಅಜರಾಮರವಾಗುವಂತೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಈರಣ್ಣ ಕಡಾಡಿ ಹೇಳಿದರು.ರನ್ನ ಬೆಳಗಲಿ ಪಟ್ಟಣದ ಮಹಾಲಿಂಗೇಶ್ವರ ಸಭಾಮಂಟಪದಲ್ಲಿ ನಡೆದ ಕಿತ್ತೂರು ಚನ್ನಮ್ಮ 200ನೇ ವಿಜಯೋತ್ಸವ ಹಾಗೂ 246ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಚನ್ನಮ್ಮಳ ವೀರಗಾಥೆ ಗುಣಗಾನ ಮಾಡಿ, ಕಿತ್ತೂರು ಸಂಸ್ಥಾನದ ಮುಂದಾಳತ್ವ ವಹಿಸಿ ಚನ್ನಮ್ಮ ಬ್ರಿಟೀಷ ಕಲೆಕ್ಟರ್ ಥ್ಯಾಕರೆ ಬಲಿ ತೆಗೆದುಕೊಂಡು ದೇಶದ ಮೊದಲ ಸ್ವಾತಂತ್ರ್ಯದ ಕಹಳೆ ಮೊಳಗಿಸಿ, 1824ರ ಇತಿಹಾಸ ಪುಟ ತೆರೆದರು. ಇವರ ಗೌರವಾರ್ಥ ಪಂಚಮಸಾಲಿ ಸಮುದಾಯ ರಾಜ್ಯ ಸರ್ಕಾರದ ಮುಂದೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚನ್ನಮ್ಮ ಹೆಸರು, ಎದುರುಗಡೆ ಮೂರ್ತಿ ಪ್ರತಿಷ್ಠಾಪನೆ, ಸವಿನೆನಪಿಗಾಗಿ ಅಂಚೆ ಚೀಟಿ ಬಿಡುಗಡೆ ಮತ್ತು ಸಂಸತ್ ಭವನದ ಮುಂದೆ ಚೆನ್ನಮ್ಮ ಮೂರ್ತಿಗೆ ಪ್ರತಿ ವರ್ಷ ಮಾಲಾರ್ಪಣೆ ಮಾಡುವ ಕುರಿತು ನಾಲ್ಕು ಬೇಡಿಕೆ ಇಟ್ಟಿದ್ದು ಅವುಗಳನ್ನು ಈಡೇರಿಸುವ ಭರವಸೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡಿವೆ ಎಂದರು.
ಕೂಡಲಸಂಗಮ ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಪಂಚಮಸಾಲಿ ಸಮುದಾಯದಲ್ಲಿ ಬಹಳಷ್ಟು ಪರಿವಾರಗಳು ಕಡು ಬಡತನದಲ್ಲಿ ಜೀವನ ಸಾಗಿಸುತ್ತಿವೆ. ಅಂತಹವರ ಏಳಿಗೆಗಾಗಿ 2ಎ ಮೀಸಲಾತಿ ಅಗತ್ಯವಿದೆ. ಈಗಾಗಲೇ ದಶಕದಿಂದಿಚೆ ಎಲ್ಲ ಪಕ್ಷಗಳ ಸರ್ಕಾರಗಳಿಗೆ 2ಎ ಬೇಡಿಕೆ ಮಂಡಿಸಿದ್ದೇವೆ. ಆದರೆ ಇಲ್ಲಿಯವರೆಗೂ ಯಾವುದೇ ಸರ್ಕಾರ ನಮ್ಮ ಸಮುದಾಯದ ಕಡೆಗೆ ಗಮನಹರಿಸಿಲ್ಲ. ಆದ್ದರಿಂದ ಡಿಸೆಂಬರ್‌ನಲ್ಲಿ ಬೆಳಗಾವಿ ಚಳಿಗಾಲ ಅಧಿವೇಶನ ನಡೆಯುವ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಜನರು ಟ್ರ್ಯಾಕ್ಟರ್ ಮೂಲಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕು ಎಂದು ಕರೆ ನೀಡಿದರು.ಕಕಮರಿಯ ಗುರುಲಿಂಗ ಜಂಗಮ ಶ್ರೀಗಳು ಆಶೀರ್ವಚನ ನೀಡಿ, ತ್ಯಾಗ ಬಲಿದಾನ ನೀಡಿದ ಮತ್ತು ಮಹಾತ್ಮರ ಜಯಂತಿ, ಉತ್ಸವಗಳು, ಜಾತಿ, ಮತ ಪಂಥಗಳಿಗೆ ಮೀಸಲಾಗದೆ ಸಾರ್ವತ್ರಿಕವಾಗಬೇಕು ಎಂದರು. ತೇರದಾಳ ಕಾಂಗ್ರೆಸ್ ಯುವ ಧುರೀಣ ಸಿದ್ದು ಕೊಣ್ಣೂರ ಮಾತನಾಡಿ, ಚನ್ನಮ್ಮ ಎಲ್ಲ ಸಮುದಾಯಗಳೊಂದಿಗೆ ಸಹಾನುಭೂತಿ ಉಳ್ಳವರಾಗಿದ್ದರು. ಆ ಮಾರ್ಗ ಅನುಸರಿಸಿ, ಇತರರಿಗೆ ಮಾದರಿಯಾಗಬೇಕು. ಜಿಲ್ಲೆಯಲ್ಲಿ ಮೃತ್ಯುಂಜಯ ಮಹಾಸ್ವಾಮೀಜಿ ನೇತೃತ್ವದಲ್ಲಿ ರಾಣಿ ಚನ್ನಮ್ಮಳ ಹೆಸರಿನಲ್ಲಿ ಕಾಲೇಜು ಆರಂಭಿಸಲು ಕೇಳಿಕೊಂಡಿದ್ದು, ಮೊದಲಿಗರಾಗಿ ₹10 ಲಕ್ಷ ದೇಣಿಗೆ ಘೋಷಿಸಿದರು. ಶ್ರೀಗಳು 2ಎ ಮೀಸಲಾತಿಗಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಇನ್ನಷ್ಟು ಅವರ ಕೈ ಬಲಪಡಿಸಲು ಸಮುದಾಯ ಸಹಕರಿಸಬೇಕು ಎಂದರು.
ಸಮಾಜದ ಜಿಲ್ಲಾಧ್ಯಕ್ಷ ಪ್ರಾಸ್ತಾವಿಕ ಮಾತನಾಡಿ, ಚನ್ನಮ್ಮ ಉತ್ಸವ ಆಚರಿಸುವ ಉದ್ದೇಶ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲರೂ ನಡೆದು ಜೀವನ ಪಾವನಗೊಳಿಸಿಕೊಳ್ಳಬೇಕೆಂದರು. ಹಿರಿಯ ಮುಖಂಡ ಪಂಡಿತ ಪೂಜಾರ ಮಾತನಾಡಿದರು.ಪ್ರಮುಖ ಜನಾ ಆಕರ್ಷಣೀಯ ಅಶ್ವರೋಹಿ ಚನ್ನಮ್ಮ ಮತ್ತು ಅವಳ ಕೋಟೆ ರೂಪಕ ರನ್ನ ಬೆಳಗಲಿ ಪ್ರಮುಖ ಬೀದಿಗಳಲ್ಲಿ ಸಾಗಿ ಬಂತು. ಊರ ಪ್ರಮುಖರು, ಮಹಿಳೆಯರು, ಪುರುಷರು ಮತ್ತು ಮಕ್ಕಳು ಮೆರವಣಿಗೆಯಲ್ಲಿ ಇದ್ದರು. ವೇದಿಕೆ ಮೇಲೆ ಇತರರಾದ ಬೆಳಗಲಿ ಪಪಂ ಅಧ್ಯಕ್ಷೆ ರೂಪಾ ಹೊಸಟ್ಟಿ, ಉಪಾಧ್ಯಕ್ಷೆ ಸಹನಾ ಸಿದ್ದು. ಸಾಂಗ್ಲಿಕರ, ಡಾ.ಎ ಆರ್.ಬೆಳಗಲಿ, ಎಸ್.ಪಿ.ದಾನಪ್ಪಗೋಳ, ಅರುಣ ಕಾರಜೋಳ, ಅಶೋಕ ಅಂಗಡಿ, ಸಿದ್ದುಗೌಡ ಪಾಟೀಲ್, ಕೆ.ಆರ್. ಮಾಚಪ್ಪನ್ನವರ, ಅಶೋಕ ಸಿದ್ದಾಪುರ, ಚಿಕ್ಕಪ್ಪ ನಾಯಕ, ಶ್ರೀಶೈಲಗೌಡ ಪಾಟೀಲ್, ಮಹಾಲಿಂಗಪ್ಪ ಗುಂಜಿಗಾಂವ, ಸಿದ್ದು ಸಾಂಗ್ಲೀಕರ, ರಾಮನಗೌಡ ಪಾಟೀಲ್, ಮುಕುಂದ ಹಿಪ್ಪರಗಿ, ಮಹಾಲಿಂಗಪ್ಪ ಹೊಸಪೇಟೆ, ದ್ರಾಕ್ಷಾಯಣಿ ಮುರನಾಳ ಇದ್ದರು. ಸ್ವಾಗತ ಬಸವರಾಜ ಪುರಾಣಿಕ, ಪತ್ರಕರ್ತರಾದ ನಾರನಗೌಡ ಉತ್ತಂಗಿ ನಿರೂಪಿಸಿ, ವಂದಿಸಿದರು.