ಸಾರಾಂಶ
ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದ ಸೋಮವಾರ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಹಾಗೂ ಎನ್‌ಡಿಎ ನಾಯಕರು ಭರ್ಜರಿ ಪ್ರಚಾರ ನಡೆಸಿ ತಮ್ಮ, ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸಿದರು. ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಮತದಾರರ ಒಲವು ಗಳಿಸಲು ಅಂತಿಮ ಕಸರತ್ತು ನಡೆಸಿದರು.
ಚನ್ನಪಟ್ಟಣ : ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದ್ದ ಸೋಮವಾರ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಹಾಗೂ ಎನ್‌ಡಿಎ ನಾಯಕರು ಭರ್ಜರಿ ಪ್ರಚಾರ ನಡೆಸಿ ತಮ್ಮ, ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸಿದರು. ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಮತದಾರರ ಒಲವು ಗಳಿಸಲು ಅಂತಿಮ ಕಸರತ್ತು ನಡೆಸಿದರು.
ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವರಾದ ಕುಮಾರಸ್ವಾಮಿ, ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ವಿಪಕ್ಷ ನಾಯಕ ಆರ್.ಅಶೋಕ್ , ಸಂಸದ ಡಾ.ಸಿ.ಎನ್ .ಮಂಜುನಾಥ್ , ಮಾಜಿ ಸಚಿವರಾದ ನಾರಾಯಣಗೌಡ, ಬಂಡಪ್ಪ ಕಾಶಂಪುರ್, ನಟಿ ತಾರಾ, ಸಾ.ರಾ.ಮಹೇಶ್ ಮತ್ತಿತರ ನಾಯಕರು ಭರ್ಜರಿ ಪ್ರಚಾರ ನಡೆಸಿ, ನಿಖಿಲ್ ಪರ ಮತಯಾಚಿಸಿದರು. ನಿಖಿಲ್ ಪತ್ನಿ ರೇವತಿ ಕೂಡ, ರೈಲು, ಬಸ್ ನಿಲ್ದಾಣ, ಪದವಿ ಕಾಲೇಜುಗಳ ಬಳಿ ತೆರಳಿ ಪತಿಯ ಪರ ಯುವ ಮತದಾರರ ಮನ ಸೆಳೆಯಲು ಯತ್ನಿಸಿದರು.
ಚನ್ನಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ದೇವೇಗೌಡ, ಸಿದ್ದರಾಮಯ್ಯ ಅವರನ್ನು ಹಣಕಾಸು ಸಚಿವನನ್ನಾಗಿ ಮಾಡಿದ್ದೇ ನಾನು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಸೊಕ್ಕು ಮುರಿಯಲು ನಿಖಿಲ್ ಅವರನ್ನು ಕಣಕ್ಕೆ ಇಳಿಸಿದ್ದೇವೆ. ಈ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ನಾನು ಮತ್ತು ಯಡಿಯೂರಪ್ಪ ಒಂದಾಗಿದ್ದೇವೆ ಎಂದರು. ಅಲ್ಲದೆ, ಜನವರಿಯೊಳಗೆ ಈ ಸರ್ಕಾರ ಬೀಳುವುದು ಖಚಿತ ಎಂಬ ಕೇಂದ್ರ ಸಚಿವ ವಿ.ಸೋಮಣ್ಣ ಮಾತಿನಲ್ಲಿ ಸತ್ಯಾಂಶವಿದೆ ಎಂದು ಭವಿಷ್ಯ ನುಡಿದರು.
ಕುಮಾರಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಒಟ್ಟಾಗಿ ಮತ್ತೊಮ್ಮೆ ಸುವರ್ಣ ಕಾಲ ಸರ್ಕಾರವನ್ನು ರಚನೆ ಮಾಡುತ್ತೇವೆ ಎಂದರು.
ಕಾಂಗ್ರೆಸ್‌ನಿಂದ ಬಹಿರಂಗ ಸಮಾವೇಶ:
ಇದೇ ವೇಳೆ, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರನ್ನು ಗೆಲ್ಲಿಸಲು ಪಣ ತೊಟ್ಟಿರುವ ಕಾಂಗ್ರೆಸ್ ನಾಯಕರು, ತಾಲೂಕಿನ ದೊಡ್ಡಮಳೂರು ಗ್ರಾಮದ ಬಳಿ ಬಹಿರಂಗ ಸಭೆ ನಡೆಸಿ, ಮತದಾರರ ಮನ ಗೆಲ್ಲುವ ಯತ್ನ ನಡೆಸಿದರು. ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ದೇವೇಗೌಡರನ್ನು ಸಿಎಂ ಮಾಡಿದ್ದೇ ನಾನು ಮತ್ತು ಜಾಲಪ್ಪ. ಹಿಂದೆ ಮೋದಿ ಪ್ರಧಾನಿಯಾದರೆ ದೇಶ ತೊರೆಯುವೆ ಎಂದಿದ್ದ ಗೌಡರು ಈಗ ಅಧಿಕಾರಕ್ಕಾಗಿ ಮೋದಿಯನ್ನು ಹೊಗಳುತ್ತಿದ್ದಾರೆ. ದೇವೇಗೌಡರು ಯಾವ ಒಕ್ಕಲಿಗ ನಾಯಕರನ್ನೂ ಬೆಳೆಯಲು ಬಿಡಲ್ಲ ಎನ್ನುವ ಮೂಲಕ ಒಕ್ಕಲಿಗ ಟ್ರಂಪ್ ಕಾರ್ಡ್ ಬಳಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಇತರ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡು, ಅಭ್ಯರ್ಥಿ ಪರ ಮತಯಾಚಿಸಿದರು.