ಡಿವೈಎಸ್‌ಪಿ ಕೆ.ಸಿ.ಗಿರಿ ರಾಷ್ಟ್ರಪತಿ ಪದಕ

| Published : Aug 15 2024, 01:47 AM IST

ಸಾರಾಂಶ

ಚನ್ನಪಟ್ಟಣ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಸಿ. ಗಿರಿ ಅವರಿಗೆ ರಾಷ್ಟ್ರಪತಿ ಪದಕ ದೊರೆತಿದೆ. ಗಿರಿಯವರು ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಚನ್ನಪಟ್ಟಣ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಸಿ. ಗಿರಿ ಅವರಿಗೆ ರಾಷ್ಟ್ರಪತಿ ಪದಕ ದೊರೆತಿದೆ. ಗಿರಿಯವರು ರಾಷ್ಟ್ರಪತಿಯವರ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

ಕೆ.ಸಿ.ಗಿರಿ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಚಂದಕ್ಕಮಕ್ಕಿ ಗ್ರಾಮದವರು. ಇವರ ತಂದೆ ಸಿ.ಜಿ. ಕೃಷ್ಣಮೂರ್ತಿ ಹಾಗೂ ರತ್ನಮ್ಮ. ಗಿರಿಯವರು ೧೯೯೯ರಲ್ಲಿ ಪಿಎಸ್‌ಐ ಆಗಿ ನೇಮಕಗೊಂಡರು. ನಂತರ ೨೦೦೭ರಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಮುಂಬಡ್ತಿ ಹೊಂದಿದರು. ೨೦೧೯ರಲ್ಲಿ ಡಿವೈಎಸ್ಪಿ ಹುದ್ದೆಗೆ ಮುಂಬಡ್ತಿ ಹೊಂದಿದ ಅವರು ಮೊದಲಿಗೆ ಸಿಐಡಿ ಡಿವೈಎಸ್‌ಪಿಯಾಗಿ ನಂತರ ಕೋಲಾರ ಜಿಲ್ಲೆಯ ಮುಳಬಾಗಿಲು ಸಬ್‌ಡಿವಿಷನ್‌ನಲ್ಲಿ, ಚಿಕ್ಕಪೇಟೆ ಡಿವೈಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತತ ಚನ್ನಪಟ್ಟಣ ಉಪವಿಭಾಗದ ಡಿವೈಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬೆಂಗಳೂರು ನಗರದ ಚಿಕ್ಕಪೇಟೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಚಿಕ್ಕಪೇಟೆ ವ್ಯಾಪ್ತಿಯಲ್ಲಿ ನಡೆದ ಡಕಾಯಿತಿ ಪ್ರಕರಣವನ್ನು ಭೇದಿಸಿ ೧೩ ಕೆಜಿ ಚಿನ್ನಾಭರಣ ವಶ ಪಡೆದ ಪ್ರಕರಣ ಸೇರಿದಂತೆ ಪ್ರಮುಖ ಪ್ರಕರಣಗಳ ಪತ್ತೆ ಹಚ್ಚುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಸಹ ಪ್ರಮುಖ ಪಾತ್ರ ವಹಿಸಿದ್ದರು.

ಗಿರಿಯವರು ಬೆಂಗಳೂರು ನಗರದಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುವಾಗ ೨೦೧೭ರಲ್ಲಿ ಮುಖ್ಯಮಂತ್ರಿಗಳ ಸೇವಾ ಪದಕಕ್ಕೆ ಭಾಜನರಾಗಿದ್ದರು. ಇದೀಗ ರಾಷ್ಟ್ರಪತಿಗಳ ಪದಕಕ್ಕೆ ಭಾಜನರಾಗಿದ್ದಾರೆ.

ರಾಮನಗರ ಎಸ್ಪಿ ಕಾರ್ತೀಕ್ ರೆಡ್ಡಿಯವರ ಶಿಫಾರಸ್ಸಿನ ಮೇರೆಗೆ ಇವರಿಗೆ ರಾಷ್ಟ್ರಪತಿ ಪದಕ ದೊರೆತಿದೆ. ಕಾರ್ತಿಕ್ ರೆಡ್ಡಿಯವರ ಶಿಫಾರಸ್ಸಿನ ಮೇರೆಗೆ ಇವರು ೨೦೧೭ರಲ್ಲಿ ಮುಖ್ಯಮಂತ್ರಿಗಳ ಸೇವಾ ಪದಕಕ್ಕೂ ಭಾಜನರಾಗಿದ್ದರು ಎಂಬುದು ವಿಶೇಷ.