ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ
ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.ಅಧಿವೇಶನದಲ್ಲಿ ಪಾಲ್ಗೊಳ್ಳಲು ಮಂಗಳವಾರ ಬೆಳಗಾವಿಯ ಸಾಂಬ್ರಾ ಏರ್ಪೋರ್ಟ್‌ಗೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಹಟ್ಟಿಹೊಳಿ ಅವರು ಸ್ವಾಗತಿಸಿದರು. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್’ ಎಂದು ಉಲ್ಲೇಖಿಸಿ ಪೋಸ್ಟ್ ಮಾಡಿದ್ದರು. ಹೀಗೆ ಶಿವಕುಮಾರ್‌ರನ್ನು ಸಿಎಂ ಎಂದು ಉಲ್ಲೇಖಿಸಿದ್ದು ಗಮನಕ್ಕೆ ಬಂದ ಕೂಡಲೇ ಆ ಪೋಸ್ಟ್ ಅಳಿಸಿ ಹಾಕಿದ ಹಟ್ಟಿಹೊಳಿ, ಡಿಸಿಎಂ ಎಂದು ಉಲ್ಲೇಖಿಸಿ ಹೊಸದಾಗಿ ಪೋಸ್ಟ್ ಮಾಡಿದ್ದಾರೆ. ಅಷ್ಟರಲ್ಲಾಗಲೇ ಹಟ್ಟಿಹೊಳಿ ಅವರ ಪೋಸ್ಟ್ ಕಾಂಗ್ರೆಸ್‌ನಲ್ಲಿ ಚರ್ಚೆಯ ವಿಷಯವಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಹಟ್ಟಿಹೊಳಿ, ನಮ್ಮ ಎಕ್ಸ್ ಖಾತೆಯನ್ನು ಬೇರೆಯವರು ಹ್ಯಾಂಡಲ್ ಮಾಡುತ್ತಾರೆ. ಟೈಪಿಂಗ್ ವೇಳೆ ತಪ್ಪಾಗಿದೆ ಎಂದರು.ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂಬ ಆಸೆಯಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ನನಗಷ್ಟೇ ಅಲ್ಲದೆ ಇಡೀ ರಾಜ್ಯದ ಜನರಿಗೆ ಆ ಆಸೆಯಿದೆ. ಅದನ್ನೆಲ್ಲ ಈಗ ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಚನ್ನರಾಜ ಹಟ್ಟಿಹೊಳಿ ಅವರ ಎಕ್ಸ್ ಖಾತೆಯಲ್ಲಾಗಿರುವ ಲೋಪ ಅರಿಯದೇ ಆಗಿರುವುದು. ಅದಕ್ಕೆ ನಾನು ವ್ಯಥೆ ಪಡುತ್ತಿದ್ದೇನೆ. ನಾವು ಪೋಸ್ಟ್ ಮಾಡುವುದಿಲ್ಲ. ಅದಕ್ಕೆ ಪ್ರತ್ಯೇಕ ತಂಡವಿರುತ್ತದೆ. ಅವರು ಪೋಸ್ಟ್ ಮಾಡುವಾಗ ಅಚಾತುರ್ಯವಾಗಿದೆ. ನಾನು ಮತ್ತು ನನ್ನ ಸಹೋದರ ಪಕ್ಷದ ಶಿಸ್ತಿನ ಸಿಪಾಯಿ ಎಂದು ತಿಳಿಸಿದರು.