ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ 500 ವರ್ಷಗಳ ಕನಸು ಸೋಮವಾರ ನನಸಾದ ಸಮಯ. ಗಿರಿ ಜಿಲ್ಲೆ ಯಾದಗಿರಿಯಲ್ಲಿ ಎಲ್ಲೆಡೆ ಹಬ್ಬದ ಸಂಭ್ರಮ-ಸಡಗರ, ಮನೆ-ಮನಗಳಲ್ಲಿ ರಾಮನಾಮ ಜಪ ತಪಗಳ ಪ್ರತಿಧ್ವನಿ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತಿದ್ದಂತೆಯೇ, ಹರ್ಷದ ಹೊನಲು ಉಕ್ಕೇರಿ ಹರಿದು ಬಂದ ಗಳಿಗೆ.ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ಸುರಪುರ, ಶಹಾಪುರ, ಹುಣಸಗಿ, ಗುರುಮಠಕಲ್ ಮುಂತಾದೆಡೆ ಗಲ್ಲಿ ಗಲ್ಲಿಗಳಲ್ಲಿ ಸೋಮವಾರ ರಾಮೋತ್ಸವದ ಸಡಗರ, ಭಗವಾಧ್ವಜದ ಕೇಸರಿ ವಾತಾವರಣದಲ್ಲಿ ಮಿಂದೆದ್ದ ಭಕ್ತಸಾಗರ. ಶತ ಶತಮಾನಗಳ ನಂತರ ಸಾಕ್ಷಿಯಾಗುತ್ತಿರುವ ಇಂತಹುದ್ದೊಂದು ಅಪೂರ್ವ ಯಾದಗಿರಿ ನಗರದಲ್ಲಿ ಸೋಮವಾರ ಜೈ ಶ್ರೀರಾಮ ಘೋಷಣೆಗಳು ಮುಗಿಲು ಮುಟ್ಟಿದ್ದವು. ಗುಡಿ ಗುಂಡಾರಗಳಲ್ಲಿ ವಿಶೇಷ ಪೂಜೆಗಳು ಹೋಮ-ಹವನ, ಜಪ-ತಪಗಳು, ಸಂಜೆ ದೀಪಾಲಂಕಾರ, ಮೆರವಣಿಗೆ, ಎಲ್ಲವೂ ಮತ್ತೊಂದು ದೀಪಾವಳಿಗೆ ಸಾಕ್ಷಿಯಾಗಿತ್ತು.
ಯಾದಗಿರಿ ತಾಲೂಕಿನ ಅರಕೇರಾ ಗ್ರಾಮದಲ್ಲಿ ಹಬ್ಬದ ವಾತಾವರಣ ಏರ್ಪಟ್ಟಿತ್ತು. ರಾಮ, ಲಕ್ಷ್ಮಣ, ಹನುಮ ವೇಷಧಾರಿಗಳ ಭವ್ಯ ಮೆರವಣಿಗೆ ನಡೆಯಿತು. ಡೊಳ್ಳು, ತಮಟೆ, ಭಜನೆ ಮೂಲಕ ವೇಷಧಾರಿಗಳ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ವೇಷಧಾರಿಗಳಿಗೆ ಕೈ ಮುಗಿದು ಗ್ರಾಮಸ್ಥರು ನಮಿಸಿದರು. ಪಟಾಕಿ ಹಚ್ಚಿ, ಸಿಡಿಮದ್ದು ಸಿಡಿಸಿ ಸಂಭ್ರಮಾಚರಣೆ ಆಚರಿಸಲಾಯಿತು.ಅರಕೇರಾ ಗ್ರಾಮದ ಪ್ರಮುಖ ರಸ್ತೆಯಿಂದ ಆಂಜನೇಯ ದೇವಸ್ಥಾನದ ವರೆಗೆ ಭವ್ಯ ಮೆರವಣಿಗೆ ನಡೆಯಿತು. ಯಾದಗಿರಿ ನಗರದ ಬಾಲಾಜಿ ಮಂದಿರದಲ್ಲಿ ರಾಮ ಭಕ್ತರಿಂದ ಹೋಮ-ಹವನ ನಡೆಸಿ ವಿಶೇಷ ಪೂಜೆ ನಡೆಸಿದರು. ಬಾಲಾಜಿ ಮಂದಿರದ ಆವರಣದಲ್ಲಿ ಶ್ರೀರಾಮನ ಪಲ್ಲಕ್ಕಿ ಉತ್ಸವ ನೆರವೇರಿಸಿದ ಭಕ್ತರು ಕುದುರೆ ಸಾರೋಟದ ವಾಹನದಲ್ಲಿ ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ ಹಾಗೂ ಅಂಜನೇಯ ವೇಷಧಾರಿ ಮಕ್ಕಳಿಗೆ ಭವ್ಯ ಮೆರವಣಿಗೆಯಾಯಿತು. ರಾಮ ಭಕ್ತರಿಂದ ಕೈಯಲ್ಲಿ ಶ್ರೀರಾಮನ ಭಾವಚಿತ್ರ ಹಿಡಿದು ನೃತ್ಯ ಮಾಡಿದರು.
ಸ್ಕಂದ ಪುರಾಣದಲ್ಲಿ ಉಲ್ಲೇಖ ರಾಮಲಿಂಗೇಶ್ವರ ಬೆಟ್ಟದಲ್ಲಿ ಹೋಮ:ಸ್ಕಂದ ಪುರಾಣದಲ್ಲಿ ಉಲ್ಲಖೇಗೊಂಡ, ಪೌರಾಣಿಕ ಪ್ರಸಿದ್ಧ ಯರಗೋಳದ ಶ್ರೀರಾಮಲಿಂಗೇಶ್ವರ ಬೆಟ್ಟದ ಕೊಳ್ಳದಲ್ಲಿ ಗ್ರಾಮಸ್ಥರು ವಿಶೇಷ ಪೂಜೆ, ಹೋಮ-ಹವನಗಳನ್ನು ನಡೆಸಿದರು. ಬೆಳಗ್ಗೆಯಿಂದಲೇ ಅಲ್ಲಿ ಪಾದಯಾತ್ರೆ, ಜೈಕಾರಗಳ ಘೋಷಣೆ ನಡೆದಿತ್ತು. ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅಲ್ಲಿ ವಿಶೇಷ ಪೂಜೆಗೆ ಸಾಕ್ಷಿಯಾದರು. ಸಾವಿರಾರು ಗ್ರಾಮಸ್ಥರು ರಾಮತೀರ್ಥದಲ್ಲಿ ಭಕ್ತಿಪರವಶರಾಗಿ ಪುನೀತರಾದರು.
ಯಾದಗಿರಿ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರ ಕಚೇರಿಯಲ್ಲಿ, ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ್ ಉಪಸ್ಥಿತಿಯಲ್ಲಿ ವಿಶೇಷ ಪೂಜೆ ನಡೆಯಿತು. ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆ ನೇರ ಪ್ರಸಾರ ವೀಕ್ಷಿಸಲು ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿತ್ತು.ಮಾಜಿ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಮಾತನಾಡಿ, ಇದೊಂದು ಐತಿಹಾಸಿಕ ಕಾರ್ಯಕ್ರಮ ಈ ಸಂದರ್ಭದಲ್ಲಿ ಭಾರತ ದೇಶದ ಎಲ್ಲರ ಸಾಂಸ್ಕೃತಿಕ ಪ್ರತಿಯಾಗಿರುವಂತಹ ಶ್ರೀರಾಮಚಂದ್ರನ ಆದರ್ಶಗಳನ್ನು ಎಲ್ಲರಿಗೂ ತಲುಪಲಿ ಎಂದರು. ಜನರಿಗೆ ನಿಜವಾದ ಇತಿಹಾಸ ಗೊತ್ತಾಗಿ, ಹೊಸ ಭಾರತ ನಿರ್ಮಾಣ ಆಗಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಬರೀ ಸುಳ್ಳನ್ನೇ ನಂಬಿದಂತಹ ಸುಳ್ಳಿನ ಇತಿಹಾಸವನ್ನೇ ಪ್ರಚುರ ಪಡಿಸಲಾದ ಸಂದರ್ಭದಲ್ಲಿ ಸತ್ಯವನ್ನು ತಿಳಿಹೇಳುವ ನಿಟ್ಟಿನಲ್ಲಿ ಇಂಥದ್ದೊಂದು ಮಹತ್ವದ ಕಾರ್ಯಕ್ರಮ ದೇಶದಲ್ಲಿ ನಡೆಯುತ್ತಿರುವುದು ಅತ್ಯಂತ ಮಹತ್ವಪೂರ್ಣದ್ದಾಗಿದೆ ಎಂದರು.
ಮಾಜಿ ಶಾಸಕರ ಕಾರ್ಯಾಲಯದ ಪಕ್ಕದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ ಮಹೇಶರೆಡ್ಡಿ ಮುದ್ನಾಳ್ ನೇತೃತ್ವದಲ್ಲಿ ರುದ್ರಾಭಿಷೇಕ ಹಾಗೂ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆತುಮಕೂರು, ಅಯ್ಯಣ್ಣ ಹುಂಡೆಕಾರ, ನಗರಸಭೆ ಸದಸ್ಯ ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಪ್ರಭಾವತಿ ಮಾರುತಿ ಕಲಾಲ್, ವಿಜಯಲಕ್ಷ್ಮಿ ಕಿಟ್ಟು ನಾಯಕ, ಮೋಹನ್ ಬಾಬು, ಬಸವರಾಜ ಚಂಡ್ರಕಿ, ರವಿ ಬಾಪುರೆ, ಗೋಪಾಲ್ ದಾಸನಕೇರಿ, ರಮೇಶ್ ದೊಡಮನಿ, ರಾಜು ಸ್ವಾಮಿ ಅನಂಪಲ್ಲಿ, ಸುರೇಶ ಸಾವು ತಳಬಿಡಿ, ವೀಣಾ ಮೋದಿ, ಸುನಿತಾ ಚೌವ್ಹಾಣ, ಭೀಮಾಬಾಯಿ ಶಂಡಗಿ, ದೀಪಾ ರಸಳಕರ, ಲಕ್ಷ್ಮೀಪುತ್ರ ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಯರಗೋಳ: ಶ್ರೀರಾಮಲಿಂಗೇಶ್ವರ ಬೆಟ್ಟಕ್ಕೆ ಪಾದಯಾತ್ರೆಶಾಸಕ ಶರಣಗೌಡ ಕಂದಕೂರು ಅವರಿಂದ ವಿಶೇಷ ಪೂಜೆ: ಅಯೋಧ್ಯೆಯಲ್ಲಿನ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಅಂಗವಾಗಿ ಸೋಮವಾರ ಗ್ರಾಮದ ರಾಮಲಿಂಗೇಶ್ವರ ಬೆಟ್ಟದ ರಾಮತೀರ್ಥಕೊಳ್ಳಕ್ಕೆ ಸಾವಿರಾರು ಸಂಖ್ಯೆಯ ಗ್ರಾಮಸ್ಥರಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.
ಊರಿನ ಬಸ್ ತಂಗುದಾಣದಿಂದ, ಆಂಜನೇಯ ಕಟ್ಟೆ, ಗುಡೆ ಕಟ್ಟೆ ಮುಖಾಂತರ ಬೆಟ್ಟದ ಇಕ್ಕೆಲಗಳಲ್ಲಿ ಜನರು ನಡೆದು, ಶ್ರೀ ರಾಮ ತೀರ್ಥಕೊಳಕ್ಕೆ ಜೈ ಶ್ರೀರಾಮ ಎಂದು ಜೈಕಾರ ಕೂಗುತ್ತಾ ತಲುಪಿದರು.ಕೋಬಾಳದ ಹಣಮಂತ ತಾತನವರ ಪೂಜೆಯಲ್ಲಿ ಭಾಗವಹಿಸಿದರು. ಜೊತೆಗೆ ಶಾಸಕರಾದ ಶರಣಗೌಡ ಕಂದಕೂರು ಅವರು ಭಕ್ತರೊಟ್ಟಿಗೆ ಸೇರಿ ವಿಶೇಷ ಪೂಜೆ ನೆರವೇರಿಸಿ ಗ್ರಾಮದ ಒಳಿತಿಗಾಗಿ ಪ್ರಾರ್ಥಿಸಿದರು. ಐತಿಹಾಸಿಕ ಶ್ರೀರಾಮಲಿಂಗೇಶ್ವರ ಬೆಟ್ಟದಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ದರ್ಶನ ಪಡೆದಕೊಂಡರು.
ಭಕ್ತರಿಗಾಗಿ ಹುಗ್ಗಿ, ಅನ್ನ, ಸಾಂಬಾರ್ ದಾಸೋಹ ಏರ್ಪಡಿಸಲಾಗಿತ್ತು. ಕೊಳದಲ್ಲಿ ನೀರು ಚಿಮ್ಮುವ ಮನಮೋಹಕ ದೃಶ್ಯ ಭಕ್ತರು ಕಣ್ತುಂಬಿಕೊಂಡರು. ಕೊಳದ ನೀರನ್ನು ತೀರ್ಥದಂತೆ ಕುಡಿದು ಪುನೀತರಾದರು. ಯುವತಿಯರು, ಯುವಕರು, ಚಿಕ್ಕ ಮಕ್ಕಳು, ತೀರ್ಥ ಕೊಳದ ಬಲದಲ್ಲಿ ಸಾಲಾಗಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು, ಅಂಗವಿಕಲರು, ವೃದ್ಧರು, ದೂರದ ಊರಿನ ಭಕ್ತರು, ಪಾದಯಾತ್ರೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.ಯರಗೋಳ ಉತ್ತರಾದಿಮಠದ ವ್ಯವಸ್ಥಾಪಕರಾದ ಪಂ ಸತ್ಯಬೋಧಾಚಾರ್ಯ ಘಟಾಲಿ ಪೂಜೆ ಕಾರ್ಯಗಳನ್ನು ನೆರವೇರಿಸಿದರು.
ಗ್ರಾಪಂ ಅಧ್ಯಕ್ಷ ರಾಮಣ್ಣ ಅಲ್ಲಿಪುರ, ಸಾಬಣ್ಣ ಬಾನರ್, ಶಿವು ಹಿರಿಕೇರಿ, ನಾಗರೆಡ್ಡಿ ಬಾನರ್, ಮಾರ್ಕಂಡಪ್ಪ ಮಾನೇಗಾರ, ಶಿವಯೋಗಿ ಹಿರಿಕೇರಿ, ನಿಂಗನಗೌಡ ಪೊಲೀಸ್ ಗೌಡ, ಮಲ್ಲಿಕಾರ್ಜುನ್ ಹುಬ್ಬಳ್ಳಿ, ಮಲ್ಲಿಕಾರ್ಜುನ್ ಸಬಕರ್, ನಾಗರಾಜ್ ಮಾಂತಗೌಡರ್, ವಿಜಯಕುಮಾರ್ ದಿಬ್ಬಾ, ನಾಗರಾಜ್ ಗಮಗ, ಹಣಮಂತ ತಳವಾರ ಇದ್ದರು.ಶ್ರೀರಾಮನೇ ನೆಲನಿಂತು, ತೀರ್ಥಕೊಳವನ್ನು ನಿರ್ಮಿಸಿದ್ದಾನೆ ಎನ್ನುವುದು ಇಲ್ಲಿನ ಭಕ್ತರ ಪ್ರತೀತಿಯಿದೆ. ಬರುವ ದಿನಗಳಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಬೇಕೆನ್ನುವುದು ಯೋಚನೆಯಿದೆ. ಅರಣ್ಯ ಇಲಾಖೆಯೊಂದಿಗೆ ಸ್ಥಳದ ಬಗ್ಗೆ ಚರ್ಚಿಸಿ, ಬೆಟ್ಟದ ಅಭಿವೃದ್ಧಿಗೆ ಸೂಕ್ತ ಕ್ರಮವಹಿಸಲಾಗುವುದು.:- ಶರಣಗೌಡ ಕಂದಕೂರು, ಶಾಸಕರು, ಗುರುಮಠಕಲ್ ಮತಕ್ಷೇತ್ರ.