ಕೆರೆಬಿಳಚಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಅವ್ಯವಸ್ಥೆ: ಪ್ರಾಚಾರ್ಯ, ಸಿಬ್ಬಂದಿಗೆ ಶಾಸಕ ತರಾಟೆ

| Published : Jul 10 2024, 12:40 AM IST

ಕೆರೆಬಿಳಚಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಅವ್ಯವಸ್ಥೆ: ಪ್ರಾಚಾರ್ಯ, ಸಿಬ್ಬಂದಿಗೆ ಶಾಸಕ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ತಾಲೂಕಿನ ಸೂಳೆಕೆರೆ ಸಮೀಪದ ಕೆರೆಬಿಳಚಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಂಗಳವಾರ ಶಾಸಕ ಬಸವರಾಜು ವಿ. ಶಿವಗಂಗಾ ದಿಢೀರ್‌ ಭೇಟಿ ನೀಡಿ, ಅಲ್ಲಿಯ ಅವ್ಯವಸ್ಥೆಗಳ ಕಂಡು ಪ್ರಾಚಾರ್ಯ ವೀರೇಶ್ ಅವರಿಗೆ ತರಾಟೆಗೆ ತೆಗೆದುಕೊಂಡರು.

- ಸರ್ಕಾರಿ ಎಲ್ಲ ಸವಲತ್ತು ಬಡವರ ವಿದ್ಯಾರ್ಥಿಗಳಿಗೆ ತಪ್ಪದೇ ತಲುಪಿಸಬೇಕು: ಶಾಸಕ ಬಸವರಾಜ ವಿ. ಶಿವಗಂಗಾ ಸೂಚನೆ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಸೂಳೆಕೆರೆ ಸಮೀಪದ ಕೆರೆಬಿಳಚಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಂಗಳವಾರ ಶಾಸಕ ಬಸವರಾಜು ವಿ. ಶಿವಗಂಗಾ ದಿಢೀರ್‌ ಭೇಟಿ ನೀಡಿ, ಅಲ್ಲಿಯ ಅವ್ಯವಸ್ಥೆಗಳ ಕಂಡು ಪ್ರಾಚಾರ್ಯ ವೀರೇಶ್ ಅವರಿಗೆ ತರಾಟೆಗೆ ತೆಗೆದುಕೊಂಡರು.

ವಸತಿ ಶಾಲೆಗೆ ಭೇಟಿ ನೀಡಿದ ಶಾಸಕರು ವಿದ್ಯಾರ್ಥಿಗಳಿಗೆ ಆಹಾರ ತಯಾರು ಮಾಡುವ ಅಡುಗೆ ಮನೆ, ವಿದ್ಯಾರ್ಥಿಗಳ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ಘಟಕ, ಬೋಧನಾ ಕೊಠಡಿಗಳು ಸೇರಿದಂತೆ ವಸತಿ ಶಾಲೆ ಸುತ್ತಮುತ್ತಲೂ ಪರಿಸದ ಪರಿಸ್ಥಿತಿ ಪರಿಶೀಲಿಸಿದರು. ಈ ವೇಳೆ ಅವ್ಯವಸ್ಥೆ ಕಣ್ಣಾರೆ ಕಂಡು ಸ್ವಚ್ಛತೆ ಕಾಪಾಡಲು ಹೆಚ್ಚು ಆದ್ಯತೆ ನೀಡಬೇಕು ಎಂದು ಶಾಲಾ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸರ್ಕಾರ ಬಡಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ವಸತಿ ಶಾಲೆಗಳನ್ನು ತೆರೆದಿದೆ. ವಿದ್ಯಾರ್ಥಿಗಳಿಗೆ ಯಾವುದೇ ಲೋಪಗಳಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಎಲ್ಲ ಸಿಬ್ಬಂದಿ ಮೇಲಿದೆ. ಇತ್ತೀಚೆಗೆ ಡೆಂಘೀಜ್ವರ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಮಕ್ಕಳಿಗೆ ಆರೋಗ್ಯದಲ್ಲಿ ಯಾವುದೇ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಶಾಲೆಗೆ ಗೈರಾಗದೇ ಎಲ್ಲ ಸಿಬ್ಬಂದಿ ಸಮರ್ಪಕವಾಗಿ ಕೆಲಸ ಮಾಡಬೇಕು. ಸಮಯಕ್ಕೆ ತಕ್ಕಂತೆ ತರಗತಿಗಳು ನಡೆಯಬೇಕು ಎಂದು ತಾಕೀತು ಮಾಡಿದರು.

ಮಕ್ಕಳಿಗೆ ನೀಡುವ ಆಹಾರದಲ್ಲಿ ಯಾವುದೇ ರೀತಿಯ ಲೋಪಗಳಾಗಬಾರದು. ಸರ್ಕಾರ ನೀಡುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು. ಪುಷ್ಠಿದಾಯಕ ಆಹಾರ ತಯಾರಿಸಿ, ನೀಡಬೇಕು. ಗುಣಮಟ್ಟದ ತರಕಾರಿಗಳನ್ನು ಪ್ರತಿದಿನ ಖರೀದಿ, ಬಳಸಬೇಕು. ಶೇಖರಣೆ ಮಾಡಿದ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳಿಗೆ ನೀಡಿರುವುದು ತಿಳಿದುಬಂದರೆ ಪರಿಣಾಮ ನೆಟ್ಟಗಿರದು ಎಂದು ಪ್ರಾಚಾರ್ಯರು, ಸಿಬ್ಬಂದಿಗೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಸಿಬ್ಬಂದಿ ಹಾಜರಿದ್ದರು.

- - -

ಕೋಟ್‌ ಶಿಕ್ಷಕರಾದವರು ಉತ್ತಮವಾದ ಬೋಧನೆ ಮಾಡುತ್ತ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಬೇಕು. ವಸತಿ ನಿಲಯಕ್ಕೆ ಆಹಾರ ಸರಬರಾಜು ಮಾಡುವ ಟೆಂಡರ್‌ದಾರರು ಟೆಂಡರಿನಲ್ಲಿ ನಮೂದಿಸಿದ ಪ್ರಕಾರವೇ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಬೇಕು. ಇದರಲ್ಲಿ ಯಾವುದೇ ಮೋಸ, ಅನ್ಯಾಯ ಕಂಡುಬಂದರೂ ಸೂಕ್ತ ಕ್ರಮ ಕೈಗೊಳ್ಳುತ್ತೇನೆ

- ಬಸವರಾಜ ವಿ. ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ

- - --9ಕೆಸಿಎನ್ಜಿ2,3,4:

ಚನ್ನಗಿರಿ ತಾಲೂಕಿನ ಕೆರೆಬಿಳಚಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ಬಸವರಾಜು ವಿ. ಶಿವಗಂಗಾ ದಿಢೀರ್ ಭೇಟಿ ನೀಡಿ ಅವ್ಯವಸ್ಥೆಗಳ ಪರಿಶೀಲನೆ ನಡೆಸಿದರು.