ಪದವಿಗಿಂತಲೂ ಗುಣ ಹಾಗೂ ನಡತೆಗೆ ಮಹತ್ವ ಹೆಚ್ಚು

| Published : Oct 03 2025, 01:07 AM IST

ಪದವಿಗಿಂತಲೂ ಗುಣ ಹಾಗೂ ನಡತೆಗೆ ಮಹತ್ವ ಹೆಚ್ಚು
Share this Article
  • FB
  • TW
  • Linkdin
  • Email

ಸಾರಾಂಶ

ಒಬ್ಬ ಪದವೀಧರ ಎಷ್ಟೇ ಜ್ಞಾನ ಸಂಪಾದನೆ ಮಾಡಿದರೂ ಆತನ ಗುಣ, ನಡತೆ ಹೆಚ್ಚಿನ ಮಹತ್ವವನ್ನು ಪಡೆಯುತ್ತದೆ. ವೈದ್ಯರಾದವರಿಗೆ ಅವರ ನಡತೆಯ ಬಗ್ಗೆ ಹೆಚ್ಚು ಗಮನವಿರಬೇಕು ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಿಯಾಜ್ ಬಾಷಾ ತಿಳಿಸಿದರು. ೧೫೦೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುತ್ತದೆ. ಅದರಲ್ಲಿ ೮೦ಕ್ಕೂ ಹೆಚ್ಚು ಆಯುರ್ವೇದ ವೈದ್ಯಕೀಯ ಕಾಲೇಜುಗಳು ಇವೆ. ಆದರೆ ಡಾ ರಾಜೀವ್‌ ಅವರ ಸಾಧನೆಯ ಫಲವಾಗಿ ರಾಜೀವ್‌ ಆಯುರ್ವೇದ ಮಹಾವಿದ್ಯಾಲಯವು ಅಲ್ಪಾವಧಿಯಲ್ಲಿ ಉನ್ನತ ಮಟ್ಟಕ್ಕೆ ಬೆಳೆದು ನಿಂತಿದೆ. ಕರ್ನಾಟಕದಲ್ಲೇ ಹೆಸರುವಾಸಿಯಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಒಬ್ಬ ಪದವೀಧರ ಎಷ್ಟೇ ಜ್ಞಾನ ಸಂಪಾದನೆ ಮಾಡಿದರೂ ಆತನ ಗುಣ, ನಡತೆ ಹೆಚ್ಚಿನ ಮಹತ್ವವನ್ನು ಪಡೆಯುತ್ತದೆ. ವೈದ್ಯರಾದವರಿಗೆ ಅವರ ನಡತೆಯ ಬಗ್ಗೆ ಹೆಚ್ಚು ಗಮನವಿರಬೇಕು ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಿಯಾಜ್ ಬಾಷಾ ತಿಳಿಸಿದರು. ನಂದಗೋಕುಲ ಕನ್ವೆನ್ಷನ್ ಹಾಲ್‌ನಲ್ಲಿ ರಾಜೀವ್‌ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ೨೦೧೯ನೇ ಸಾಲಿನ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳ ಅಭ್ಯುದಯ ಪ್ರಥಮ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿಗೆ ನಿಮ್ಮ ಪೋಷಕರು ನೀಡುವ ಪಾಕೆಟ್ ಮನಿ ಮುಗಿಯಿತು. ನೀವು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಇಚ್ಛಾಶಕ್ತಿ ಹಾಗೂ ಬದ್ಧತೆಯಿಂದ ಕೆಲಸವನ್ನು ಮಾಡಿ. ಆಗ ಮಾತ್ರ ಯಶಸ್ಸು ಸಾಧ್ಯ.ನಿಮ್ಮನ್ನು ಈ ಹಂತಕ್ಕೆ ತಂದ ಪೋಷಕರನ್ನು ಹಾಗೂ ಗುರುಗಳನ್ನು ಮರೆಯಬೇಡಿ ಎಂದು ಪದವೀಧರರಿಗೆ ಕಿವಿಮಾತು ಹೇಳಿದರು.

ದರ್ಪಣ-೨೦೨೫ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಎಸ್ ವ್ಯಾಸ ವಿಶ್ವ ವಿದ್ಯಾಲಯದ ಪ್ರೊ-ಕುಲಪತಿ ಡಾ. ಬಿ. ಆರ್‌ ರಾಮಕೃಷ್ಣ ಅವರು, ವಿದ್ಯಾರ್ಥಿ ಜೀವನ ಮುಗಿಸಿ ಕಾಲೇಜಿನಿಂದ ಹೊರಗೆ ಬಂದ ಮೇಲೆ ನಮ್ಮ ನಿಜವಾದ ಪರೀಕ್ಷೆ ಆರಂಭವಾಗುತ್ತದೆ. ವೈದ್ಯಕೀಯ ವಿದ್ಯಾರ್ಥಿಯಾದವನು ಕೇವಲ ವೈದ್ಯಕೀಯಶಾಸ್ತ್ರ ಜ್ಞಾನಕ್ಕೆ ಸೀಮಿತವಾಗಿರದೆ ಹೆಚ್ಚು ಹೆಚ್ಚು ರೋಗಿಗಳನ್ನು ನೋಡಿ ನಮ್ಮ ಕ್ರಿಯಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.ವೈದ್ಯನಾದವನು ಬಡ ರೋಗಿಗಳಲ್ಲಿ ಅನುಕಂಪವನ್ನು ತೋರಿಸಿ ಹಣವಿಲ್ಲದಿದ್ದರೂ ಗುಣಮಟ್ಟದ ಚಿಕಿತ್ಸೆಯನ್ನು ಕೊಡಬೇಕು. ಜೀವನಶೈಲಿಯ ಕಾಯಿಲೆಗಳನ್ನು ಗುಣಪಡಿಸಲು ನಾವು ಆಯುರ್ವೇದ ಸಂಹಿತ ಗ್ರಂಥಗಳಲ್ಲಿ ಹೇಳಿರುವ ಆಹಾರ, ಆಚಾರ, ವಿಚಾರಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದನ್ನು ನಿಮ್ಮ ರೋಗಿಗಳಿಗೆ ತಿಳಿಹೇಳಿ. ಇಡೀ ವಿಶ್ವವೇ ಆಯುರ್ವೇದ ಚಿಕಿತ್ಸೆಯಲ್ಲಿ ಹೇಳಿರುವ ಆಹಾರ ಪದ್ಧತಿ, ಆಚಾರ ವಿಚಾರಗಳ ಬಗ್ಗೆ ಹೆಚ್ಚು ಒಲವನ್ನು ತೋರುತ್ತಿದೆ ಎಂದರು.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಶಶಿಕುಮಾರ್ ಎಚ್.ಸಿ ಮಾತನಾಡಿ, ೧೫೦೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುತ್ತದೆ. ಅದರಲ್ಲಿ ೮೦ಕ್ಕೂ ಹೆಚ್ಚು ಆಯುರ್ವೇದ ವೈದ್ಯಕೀಯ ಕಾಲೇಜುಗಳು ಇವೆ. ಆದರೆ ಡಾ ರಾಜೀವ್‌ ಅವರ ಸಾಧನೆಯ ಫಲವಾಗಿ ರಾಜೀವ್‌ ಆಯುರ್ವೇದ ಮಹಾವಿದ್ಯಾಲಯವು ಅಲ್ಪಾವಧಿಯಲ್ಲಿ ಉನ್ನತ ಮಟ್ಟಕ್ಕೆ ಬೆಳೆದು ನಿಂತಿದೆ. ಕರ್ನಾಟಕದಲ್ಲೇ ಹೆಸರುವಾಸಿಯಾಗಿದೆ ಎಂದರು.ರಾಜೀವ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ರಂಜಿತ್‌ ರಾಜೀವ್ ಮಾತನಾಡಿ, ಸಾಧನೆಯತ್ತ ಮುಖ ಮಾಡಿ ನಿಮ್ಮ ಮುಂದಿನ ಜೀವನವನ್ನು ಆಯ್ದುಕೊಳ್ಳಿ. ನಿರಂತರ ಪರಿಶ್ರಮ ಸಾಧನೆಯ ಶಿಖರವನ್ನು ಸುಲಭವಾಗಿ ಏರಲು ನೆರವಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಎನ್‌ ರತ್ನ, ಇಂದು ಡಾ.ರಾಜೀವ್‌ ಅವರ ಕನಸು ನನಸಾಗಿದೆ ಹಾಗೂ ವಿದ್ಯಾರ್ಥಿಗಳು ಶ್ರಮ ವಹಿಸಿ ಸಾಧನೆ ಮಾಡುವುದರೊಂದಿಗೆ ತಮ್ಮನ್ನು ತಾವು ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳಬೇಕೆಂದರು.ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎ. ನಿತಿನ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪಾಂಡುರಂಗ ಪದವೀಧರರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಡಾ. ಅಜಯ್‌ ಕುಮಾರ್ ಸ್ವಾಗತಿಸಿದರು. ಡಾ. ತೇಜಸ್ವಿನಿ ವಂದಿಸಿದರು. ಡಾ. ಶಿಲ್ಪ ಎಸ್‌ಎನ್ ಹಾಗೂ ಡಾ.ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ ಹಳೆ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವೂ ನಡೆಯಿತು.