ಚಿಕ್ಕಮಗಳೂರುನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡಲು ಪ್ರತಿ ಕಾರ್ಡ್‌ಗೆ ತಲಾ ₹10 ರಿಂದ ₹20 ವಸೂಲಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ಅಸಮಾಧಾನ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡಲು ಪ್ರತಿ ಕಾರ್ಡ್‌ಗೆ ತಲಾ ₹10 ರಿಂದ ₹20 ವಸೂಲಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.ಬುಧವಾರ ಚಿಕ್ಕಮಗಳೂರಿನ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕಚೇರಿಯಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕಳಸ ತಾಲೂಕಿನ ಎರಡು ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ಪ್ರತಿ ಕಾರ್ಡ್‌ಗೆ ತಲಾ ₹10 ರಿಂದ ₹20 ನ್ಯಾಯ ಬೆಲೆ ಅಂಗಡಿ ಮಾಲೀಕರು ವಸೂಲಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಲಾಯಿತು.

ಕಳಸ ಹಾಗೂ ಇಡಕಣದ ನ್ಯಾಯ ಬೆಲೆ ಅಂಗಡಿಯಲ್ಲಿ ವಸೂಲಿ ಮಾಡಲಾಗುತ್ತಿತ್ತು. ಇಡಕಣ ನ್ಯಾಯ ಬೆಲೆ ಅಂಗಡಿಯಲ್ಲಿ ಹಣ ವಸೂಲಿ ನಿಲ್ಲಿಸಲಾಗಿದೆ. ಆದರೆ, ಕಳಸ ನ್ಯಾಯ ಬೆಲೆ ಅಂಗಡಿಯಲ್ಲಿ ಇಂದಿಗೂ ಹಣ ವಸೂಲಿ ಮಾಡಲಾಗುತ್ತಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು.ಅದಕ್ಕೆ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಕೆಲವು ಸದಸ್ಯರು, ನ್ಯಾಯ ಬೆಲೆ ಅಂಗಡಿಯವರು ಗೋದಾಮಿನಿಂದ ಅಂಗಡಿಗೆ ತೆಗೆದುಕೊಂಡು ಹೋಗಲು ಸಾಗಾಣಿಕೆ ವೆಚ್ಚ ಮಾಡಿರುತ್ತಾರೆ. ಹೀಗಾಗಿ ಪಡೆದುಕೊಳ್ಳುತ್ತಾರೆ. ಜತೆಗೆ, ಸರ್ಕಾರ ದಿಂದ ಸುಮಾರು ₹600 ಗೂ ಅಧಿಕ ಮೊತ್ತದ ಪಡಿತರ ಪಡೆದುಕೊಂಡಿರುತ್ತಾರೆ. ಹೀಗಿರುವಾಗ ₹10 ರಿಂದ ₹20 ಕೊಟ್ಟರೆ ಏನು ಸಮಸ್ಯೆ ಇಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿಯೇ ವ್ಯಕ್ತಪಡಿಸಿದರು.ಈ ಕುರಿತು ಪ್ರತಿಕ್ರಿಯೆ ನೀಡಿದ ಆಹಾರ ಇಲಾಖೆ ಉಪನಿರ್ದೇಶಕ ಯೋಗಾನಂದ್, ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡಲು ಹಣ ಪಡೆಯುವಂತಿಲ್ಲ. ಈ ಕುರಿತು ಲಿಖಿತ ದೂರು ಸಲ್ಲಿಸಿದರೆ ನ್ಯಾಯ ಬೆಲೆ ಅಂಗಡಿ ಅನುಮತಿ ರದ್ದುಪಡಿಸಲಾಗುವುದು ಎಂದು ತಿಳಿಸಿದರು.ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಮಾತನಾಡಿ ನ್ಯಾಯಬೆಲೆ ಅಂಗಡಿಗಳಲ್ಲಿ ಟೋಕನ್ ಪದ್ಧತಿ ರೂಪಿಸಿದರೆ ಅನುಕೂಲವಾಗುತ್ತದೆ. ಒಂದು ನ್ಯಾಯಬೆಲೆ ಅಂಗಡಿಯಲ್ಲಿ ಹೆಚ್ಚು ಕಾರ್ಡ್‌ಗಳಿದ್ದರೆ ಕ್ಯೂ ಜಾಸ್ತಿಯಾಗುತ್ತದೆ. ಇದನ್ನು ಸರಿಪಡಿ ಸುವಂತೆ ಸಲಹೆ ನೀಡಿದರು.ಅದಕ್ಕೆ ಪ್ರಕ್ರಿಯೆ ನೀಡಿದ ಉಪನಿರ್ದೇಶಕ ಯೋಗಾನಂದ್‌ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಹಾಗೂ ಸಂಜೆ 4 ರಿಂದ ರಾತ್ರಿ 8 ಗಂಟೆವರೆಗೆ ಪಡಿತರ ವಿತರಿಸಬೇಕು. ಕೇಂದ್ರ ಸರ್ಕಾರದ ಪಡಿತರ ವಿತರಿಸುತ್ತಿರುವುದರಿಂದ ಬೆಳಗ್ಗೆ 6 ರಿಂದಲೇ ನ್ಯಾಯಬೆಲೆ ಅಂಗಡಿ ತೆರೆಯಲಾಗುತ್ತಿದೆ. ಜನರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ೬,೨೨೬ ಪದವೀಧರರು ನೋಂದಣಿಯಾಗಿದ್ದು, ಜೂನ್ ಅಂತ್ಯದವರೆಗೆ ₹೧೭.೧೩ ಕೋಟಿ ಗಳನ್ನು ಹಾಗೂ ಡಿಪ್ಲೊಮಾ ಪದವಿ ಪಡೆದ ೮೪ ಮಂದಿಗೆ ₹೬.೪೫ ಲಕ್ಷ ಗಳನ್ನು ಸಂದಾಯ ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಸಭೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಎನ್.ಮಂಜುನಾಥ್, ಹವ್ವಳ್ಳಿ ಕೃಷ್ಣೇಗೌಡ, ಸಮೀವುಲ್ಲಾ, ಚಂದ್ರಮೌಳಿ, ಹೇಮಾವತಿ ಹಾಗೂ ತಾಲೂಕು ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ರಾಜಗೋಪಾಲ್ ಇದ್ದರು. -- ಬಾಕ್ಸ್‌--

ಗ್ಯಾರಂಟಿ ಯೋಜನೆಗಳು ದುರುಪಯೋಗವಾಗದಂತೆ ಎಚ್ಚರ ವಹಿಸಿರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪಬೇಕು. ಯಾವುದೇ ಕಾರಣಕ್ಕೂ ಯೋಜನೆಗಳು ದುರುಪಯೋಗವಾಗದಂತೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಸೂಚಿಸಿದರು.ಗೃಹಲಕ್ಷ್ಮೀ ಯೋಜನೆಯಡಿ ಸವಲತ್ತು ಪಡೆಯುತ್ತಿದ್ದ ಒಟ್ಟು ೪,೫೫೬ ಫಲಾನುಭವಿಗಳು ಮರಣ ಹೊಂದಿದ್ದು, ಈ ಪೈಕಿ ೧೦೧೨ ಮರಣ ಹೊಂದಿದ ಫಲಾನುಭವಿಗಳ ಖಾತೆಯಿಂದ ೧,೧೦,೫೭,೮೩೪ ಗಳನ್ನು ಹಿಂಪಡೆದು ಸರ್ಕಾರದ ನಿಧಿಗೆ ಜಮೆ ಮಾಡಲಾಗಿದೆ. ಮರಣ ಹೊಂದಿರುವ ಫಲಾನುಭವಿಗಳ ಕುಟುಂಬದ ಸ್ವ ಇಚ್ಛೆಯಿಂದ ಅರ್ಜಿ ನೀಡಿ ಯೋಜನೆಯಿಂದ ಹೊರಗುಳಿಯಬೇಕು. ಅರ್ಹರಿಗೆ ಈ ಸೌಲಭ್ಯ ದೊರೆಯಬೇಕು ಎಂದರು.ಗೃಹಲಕ್ಷ್ಮೀ ಯೋಜನೆಯಡಿ ತಲಾ ₹2 ಸಾವಿರ ದಂತೆ 32 ಕಂತುಗಳು ಫಲಾನುಭವಿಗಳ ಖಾತೆಗೆ ಸಂದಾಯವಾಗಿದೆ. ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂದು ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ೮೦ ಕ್ಲಸ್ಟರ್‌ಗಳ ವ್ಯಾಪ್ತಿಯ ಅಂಗನವಾಡಿ, ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಕಚೇರಿ ಹಾಗೂ ಪ್ರಮುಖ ಸ್ಥಳಗಳಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳಿಂದ ಸಸಿಗಳನ್ನು ನೆಡಿಸಿ ಸಂಭ್ರಮಾಚರಣೆ ಮಾಡಲಾಗಿದೆ. ಇದು ರಾಜ್ಯಕ್ಕೆ ಮಾದರಿ ಎಂದರು.

ಗೃಹಜ್ಯೋತಿಯಲ್ಲಿ ಉಚಿತ ವಿದ್ಯುತ್ ಯೋಜನೆಯಡಿ ೩,೧೨,೬೭೮ ಮೀಟರ್‌ಗಳಿಗೆ ₹೪೦೬ ಕೋಟಿ ೫೫ ಲಕ್ಷದ ೮೭ ಸಾವಿರದ ೧೩೧ ಗಳನ್ನು ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆಯಡಿ ೭.೧೬ ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಇದಕ್ಕೆ ₹೨೮೧.೬೭ ಕೋಟಿ ಭರಿಸಲಾಗಿದೆ ಎಂದು ತಿಳಿಸಿದರು.