ಜು. 2ರ ಸಂಜೆ 6ಕ್ಕೆ ಫಕೀರ ದಿಂಗಾಲೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಅಂಧರಗೋಷ್ಠಿ ನಡೆಯಲಿದೆ. ಬಿ.ಬಿ. ಅಸೂಟಿ, ಅನಿಲ್ ಮೆಣಸಿನಕಾಯಿ ಮುಂತಾದವರು ಪಾಲ್ಗೊಳ್ಳುವರು.
ಗದಗ: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಜು. 1ರಿಂದ ಲಿಂ. ಪಂ. ಪಂಚಾಕ್ಷರಿ ಗವಾಯಿಗಳ 82ನೇ ಹಾಗೂ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 16ನೇ ಪುಣ್ಯಸ್ಮರಣೋತ್ಸವ ಮತ್ತು ಉಭಯ ಗುರುಗಳ ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ಜು. 6ರ ವರೆಗೆ 5 ದಿನಗಳ ಕಾಲ ಪ್ರತಿದಿನ ವೇದೋಕ್ತ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಬೆಳಗ್ಗೆ ಶಿವಾನುಭವ ಕಾರ್ಯಕ್ರಮಗಳು ನಡೆಯಲಿವೆ.
ಜು. 2ರ ಸಂಜೆ 6ಕ್ಕೆ ಫಕೀರ ದಿಂಗಾಲೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಅಂಧರಗೋಷ್ಠಿ ನಡೆಯಲಿದೆ. ಬಿ.ಬಿ. ಅಸೂಟಿ, ಅನಿಲ್ ಮೆಣಸಿನಕಾಯಿ ಮುಂತಾದವರು ಪಾಲ್ಗೊಳ್ಳುವರು. ಇದೇ ವೇಳೆ ಶರಣಬಸವಾರ್ಯ ತಾತನವರ ಲೀಲಾಮೃತ ಪುರಾಣ ಹಾಗೂ ವಿಶ್ವಯೋಗಿ ವೇಮ ಮತ್ತು ಮಹಾಸಾಧ್ವಿ ಬದುಕು, ಚಿಂತನೆ ಗ್ರಂಥಗಳು ಬಿಡುಗಡೆಯಾಗಲಿವೆ. ಬೆಳಗ್ಗೆ ಎಸ್.ಎಚ್. ಸಂಕನಗೌಡರ, ಅಶೋಕ ಮೋಟಗಿ ಅವರಿಗೆ ಸನ್ಮಾನ ಹಾಗೂ ರಾತ್ರಿ 10.30ಕ್ಕೆ ಬಂಜೆ ತೊಟ್ಟಿಲು ನಾಟಕ ಪ್ರದರ್ಶನವಿದೆ.ಜು. 3ರಂದು ಸಂಜೆ 6ಕ್ಕೆ ಡಾ. ಅನ್ನದಾನೀಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಸಂಸದ ಬಸವರಾಜ ಬೊಮ್ಮಾಯಿ, ಡಾ. ಎಚ್.ಕೆ. ಪಾಟೀಲ, ಸಿ.ಸಿ. ಪಾಟೀಲ ಸೇರಿದಂತೆ ಪ್ರಮುಖರು ಉಪಸ್ಥಿತರಿರುವರು. ಪಂ. ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ ಗ್ರಂಥ ಲೋಕಾರ್ಪಣೆಯಾಗಲಿದೆ. ರಾತ್ರಿ 10ರಿಂದ ಅಹೋರಾತ್ರಿ ಸಂಗೀತ ನಡೆಯಲಿದೆ. ಬೆಳಗ್ಗೆ ರೋಣದ ವರ್ತಕರಿಗೆ ಸನ್ಮಾನವಿದೆ.
ಜು. 4ರ ಸಂಜೆ 6ಕ್ಕೆ ತೋಂಟದ ಡಾ. ಸಿದ್ದರಾಮ ಶ್ರೀಗಳ ಸಾನ್ನಿಧ್ಯದ ಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಜಗದೀಶ ಶೆಟ್ಟರ, ಬಿ. ಶ್ರೀರಾಮುಲು ಭಾಗವಹಿಸುವರು. ಕುಸಗೂರಿನ ನೀಲಕಂಠ ಶಾಸ್ತ್ರಿಗಳಿಗೆ ಪದ್ಮಭೂಷಣ ಪಂ. ಪುಟ್ಟರಾಜ ಪ್ರಶಸ್ತಿ ಹಾಗೂ ಪಂ. ಡಾ. ಎಸ್. ಬಾಳೇಶ ಭಜಂತ್ರಿ, ಶಶಿಧರಶಾಸ್ತ್ರಿ ಹಿರೇಮಠ, ಬಸವರಾಜ ಅಮರಗೋಳ ಅವರಿಗೆ ಕುಮಾರಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪರಮಪಂಚಾಕ್ಷರ ಮಹಾಪುರಾಣ ಗ್ರಂಥ ಲೋಕಾರ್ಪಣೆ ಹಾಗೂ ರಾತ್ರಿ 10ಕ್ಕೆ ಸಂಗೀತ ಸಮಾರಾಧನೆ ಜರುಗಲಿದೆ. ಬೆಳಗ್ಗೆ ನಾಗಭೂಷಣ ಬೂತಲದಿನ್ನಿ ಸೇರಿದಂತೆ ಹಲವರಿಗೆ ಸನ್ಮಾನವಿದೆ.ಜು. 5ರಂದು ಬೆಳಗ್ಗೆ 8 ಕ್ಕೆ ಉಭಯ ಗುರುಗಳ ಭಾವಚಿತ್ರದ ಮೆರವಣಿಗೆ, ಮಧ್ಯಾಹ್ನ ಮಹಾಪ್ರಸಾದ ಹಾಗೂ ಸಂಜೆ 4ಕ್ಕೆ ಪುರಾಣ ಮಂಗಲ ಜರುಗಲಿದೆ. ಸಂಜೆ 6ಕ್ಕೆ ಉಭಯ ಗುರುಗಳ ಮಹಾರಥೋತ್ಸವ, ನಂತರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮೋತ್ತೇಜಕ ಮಹಾಸಭೆ ನೆರವೇರಲಿದೆ.
ಸಭಾಪತಿ ಬಸವರಾಜ ಹೊರಟ್ಟಿ ಮತ್ತಿತರರು ಭಾಗವಹಿಸುವ ಸಭೆಯಲ್ಲಿ ಕಲ್ಲಯ್ಯಜ್ಜನವರಿಗೆ ಪಂಚಾಕ್ಷರ ಶಿವಾಚಾರ್ಯ ಪ್ರಶಸ್ತಿ ಹಾಗೂ ಡಾ. ಶಿವಶರಣೆ ನಂದೀಶ್ವರಿ ಅಮ್ಮನವರು, ಪಂ. ಎಂ. ಕಲ್ಲಿನಾಥ ಶಾಸ್ತ್ರಿಗಳು, ಡಾ. ಪುರುಷೋತ್ತಮಗೌಡ್ರು ಅವರಿಗೆ ಗೌರವ ಸನ್ಮಾನ ನಡೆಯಲಿದೆ. ರಾತ್ರಿ 10.30ಕ್ಕೆ ಸಂಗೀತ ಸಮಾರಾಧನೆ ಇರಲಿದೆ.ಜು. 6ರಂದು ಬೆಳಗ್ಗೆ ಕಲ್ಲಯ್ಯಜ್ಜನವರಿಂದ ಮಂಗಲ ಸಂಗೀತ, ಮಧ್ಯಾಹ್ನ 3ಕ್ಕೆ ಎಪಿಎಂಸಿ ಯಾರ್ಡ್‌ನಲ್ಲಿ ಬೃಹತ್ ಕುಸ್ತಿ ಸ್ಪರ್ಧೆ ಹಾಗೂ ರಾತ್ರಿ 10.30ಕ್ಕೆ ಸುಪಾರಿ ಸರೋಜಾ ನಾಟಕ ಪ್ರದರ್ಶನದೊಂದಿಗೆ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ. ಎಲ್ಲ ದಿನಗಳ ಬೆಳಗಿನ ಸನ್ಮಾನ ಹಾಗೂ ರಾತ್ರಿಯ ನಾಟಕ ಕಾರ್ಯಕ್ರಮಗಳಿಗೆ ಅಡ್ನೂರ ಬ್ರಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು, ಕಲ್ಲಯ್ಯಜ್ಜನವರು ಹಾಗೂ ಡಾ. ಶಿವಶರಣೆ ನಂದೀಶ್ವರಿ ಅಮ್ಮನವರು ನೇತೃತ್ವ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.