ಹೊಸಪೇಟೆ: ಸಮಾಜ ವ್ಯವಸ್ಥೆಯನ್ನು‌ ಜಾಗೃತಗೊಳಿಸುವ‌‌ ನಿಟ್ಟಿನಲ್ಲಿ‌‌ ರಥೋತ್ಸವಗಳು ನಡೆಯುತ್ತವೆ ಎಂದು ಕೊಟ್ಟೂರು ಡೋಣೂರು ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯರು ತಿಳಿಸಿದರು.

ನಗರದ ಕೊಟ್ಟೂರುಸ್ವಾಮಿ ಮಠದಲ್ಲಿ ಜಗದ್ಗುರು ಕೊಟ್ಟೂರೇಶ್ವರ ಜಾತ್ರ ಮಹೋತ್ಸವ 2026ರ 9ನೇ ವರ್ಷದ ಸರ್ವಧರ್ಮ ಸಮನ್ವಯ ಮಹಾರಥೋತ್ಸವದ ಜೀವನ ದರ್ಶನ ಪ್ರವಚನ ಮಂಗಲೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲ ಸಮಾಜಗಳು ಒಗ್ಗೂಡಿ ತೇರನ್ನು ಎಳೆಯುತ್ತವೆ. ಅದರಲ್ಲೂ ಕೊಟ್ಟೂರುಸ್ವಾಮಿ ಮಠದ ಸರ್ವಧರ್ಮ ಸಮನ್ವಯ ಮಹಾರಥೋತ್ಸವವು ಸರ್ವಧರ್ಮಗಳನ್ನು ಒಳಗೊಂಡಿದೆ. ಸರ್ವ ಸಮಾಜದವರ ಉತ್ಸವ ಇದಾಗಿದೆ. ಮನುಷ್ಯ ಜನ್ಮ ಅಪರೂಪವಾದದ್ದು. ಜನ್ಮ ಜನ್ಮಗಳ ಪುಣ್ಯದ ಫಲವಾಗಿ ಲಭಿಸಿದ ಈ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಮುಂದಾಗಬೇಕು ಎಂದರು.

ಕುಟುಂಬ ವ್ಯವಸ್ಥೆಯು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಕುಟುಂಬಗಳಲ್ಲಿ ಒಗ್ಗಟ್ಟಿಲ್ಲ. ಇಂದು ಭಾರತೀಯ ಸಂಸ್ಕೃತಿಯ ತಹಳದಿಯಾದ ಕುಟುಂಬ ವ್ಯವಸ್ಥೆ ಸಂಕುಚಿತಗೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಕುಟುಂಬ ವ್ಯವಸ್ಥೆ ಕ್ಷೀಣಿಸುತ್ತಿದೆ. ಕೂಡು ಕುಟುಂಬದ ಕಲ್ಪನೆ ಬಲಗೊಳ್ಳಬೇಕಿದೆ ಎಂದರು.

ಈ ಹಿಂದೆ ಕೂಡು ಕುಟುಂಬಗಳಿದ್ದವು. ಆ ಕುಟುಂಬಗಳಲ್ಲಿ ಬೆಸುಗೆ ಇರುತ್ತಿತ್ತು. ಇಂದು ಕುಟುಂಬ ಎಂದರೆ ಗಂಡ-ಹೆಂಡತಿ ಎಂಬುದಷ್ಟೇ ಸೀಮಿತವಾಗಿದೆ. ಗಂಡ- ಹೆಂಡತಿ ನಡುವೆ ವಿರಸ ಬಂದಾಗ ತಿಳಿಹೇಳಲು ಮನೆಯಲ್ಲಿ ಹಿರಿಯರಿಲ್ಲದೇ ಇಬ್ಬರೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.


ವರ್ಗೀಕೃತ ವ್ಯವಸ್ಥೆ ಬಲಗೊಳ್ಳುತ್ತಿರುವ ಈ ದಿನಗಳಲ್ಲಿ ಬಸವಣ್ಣನವರ ಅನುಯಾಯಿಗಳು ಎಲ್ಲರೂ ಬಸವಣ್ಣನವರ ಆಚಾರ- ​ ವಿಚಾರಗಳು, ಸಮ ಸಮಾಜದ ಪರಿಕಲ್ಪನೆಗಳ ಪಾಲನೆ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಪ್ರಸ್ತುತ ದಿನಮಾನಗಳಲ್ಲಿ ನಮ್ಮ ಆಹಾರ ಪದ್ಧತಿಯ ಬಗ್ಗೆ ಎಚ್ಚರ ವಹಿಸಬೇಕು. ಹೊಟೇಲ್‌ ಆಹಾರ ಸಂಸ್ಕೃತಿ ಹೆಚ್ಚುತ್ತಿದೆ. ಮನೆಯಲ್ಲಿ ಸಿದ್ಧಪಡಿಸಿದ ಆಹಾರವೇ ಆರೋಗ್ಯಕ್ಕೆ ಉತ್ತಮವಾಗಿದೆ. ನಿತ್ಯ ಮಾತ್ರೆ ನುಂಗದೇ ನಿದ್ದೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ನಾವು ಎಷ್ಟೇ ಸಂಪಾದಿಸಿದರೂ ಅದು ಆಸ್ಪತ್ರೆ ಪಾಲಾದರೆ ಬದುಕಿಗೆ ಅರ್ಥವಿರುವುದಿಲ್ಲ. ಮುಂದಿನ ನಮ್ಮ ಪೀಳಿಗೆಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವುದು ಅನಿರ್ವಾಯವಾಗಿದೆ ಎಂದರು.

ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಉತ್ತಂಗಿಯ ಶಂಕರ ಸ್ವಾಮಿ ಮಠದ ಜಗದ್ಗುರು ಸೋಮೇಶ್ವರ ಮಹಾಸ್ವಾಮಿಗಳು, ಹಿರೇಮಲ್ಲನಕೆರೆಯ ವಿರಕ್ತಮಠದ ಅಭಿನವ ಚನ್ನಬಸವ ಮಹಾಸ್ವಾಮಿಗಳು, ಕೂಡ್ಲಿಗಿ‌ ಹಿರೇಮಠದ ಪ್ರಶಾಂತಸಾಗರ ಶಿವಾಚಾರ್ಯರು, ನಂದೀಪುರದ ಚರಂತೇಶ್ವರ ಮಠದ ಡಾ.ಮಹೇಶ್ವರ ಮಹಾಸ್ವಾಮಿಗಳು ವೇದಿಕೆಯಲ್ಲಿದ್ದರು.

ಡೋಣಿ ಗದಗದ ಹಿರೇಮಠದ ಶಶಿಧರ ಶಾಸ್ತ್ರಿಗಳು ಪ್ರವಚನ ಮಂಗಲ ನುಡಿ ನುಡಿದರು. ಸುರೇಶ ಕುಮಾರ ಮತ್ತು ಸಿದ್ಧಲಿಂಗೇಶ ಅವರು ಸಂಗೀತ ಸಾಥ್ ನೀಡಿದರು.

ಸಿ.ಎಸ್.‌ ಶರಣಯ್ಯ ಮತ್ತು ಡಾ. ಎಚ್.ಎಂ. ಚಂದ್ರಶೇಖರ ಶಾಸ್ತ್ರಿ ಅವರು ಕಾರ್ಯಕ್ರಮ ನಿರೂಪಿಸಿದರು. ವಿದುಷಿ ಅಚಲ ಜಿ.ಎಸ್.,‌ ವಿಹಾನ್ ತಂಡವು ವಚನ ಸಂಗೀತೋತ್ಸವವನ್ನು ನೆರವೇರಿತು. ವಿವಿಧ‌ ಮಠಾಧಿಪತಿಗಳು ಮತ್ತು ಗಣ್ಯರು ವೇದಿಕೆಯಲ್ಲಿದ್ದರು.