ಕನ್ನಡಪ್ರಭ ವಾರ್ತೆ ಮಂಡ್ಯ

ಎಲ್ಲ ಕ್ಷೇತ್ರಗಳಂತೆ ಅರಿವಿನ ಲೋಕದ ರಥಕ್ಕೆ ಎರಡು ಚಕ್ರಗಳು. ಒಂದು ಸಾಹಿತ್ಯ ರಚಿಸುವ ಲೇಖಕರಾದರೆ ಮತ್ತೊಂದು ಚಕ್ರ ಓದುಗರು. ಓದುಗರೆಂಬ ಚಕ್ರವನ್ನು ಕಡೆಗಣಿಸಿರುವುದರಿಂದ ಅಕ್ಷರ ಲೋಕದ ಮಹಾ ಪಯಣ ಸಾಗುತ್ತಿಲ್ಲ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ವಿಷಾದಿಸಿದರು.

ಇಲ್ಲಿನ ಕುವೆಂಪು ನಗರದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿಯ ಸಂಚಾಲಕ ಕಾರಸವಾಡಿ ಮಹಾದೇವ ಅವರ ನಿವಾಸದಲ್ಲಿ ಪುತ್ರಿ ಕೆ.ಎಂ.ದೀಕ್ಷಾ ಹುಟ್ಟುಹಬ್ಬದ ಅಂಗವಾಗಿ ‘ಮನೆಗೊಂದು ಗ್ರಂಥಾಲಯ ಅನುಷ್ಠಾನ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬದುಕುವ ಮತ್ತು ಎದುರಿಸುವ ಕಲೆಯನ್ನು ಶಿಕ್ಷಕರು ಹಾಗೂ ಪೋಷಕರು ಕಲಿಸುವುದಿಲ್ಲ. ಅವರು ಮಕ್ಕಳಿಗೆ ಬೇರೆಲ್ಲವನ್ನೂ ನೀಡುತ್ತಾರೆ. ಯಾರೂ ಕೊಡಲಾಗದ್ದನ್ನು ಪುಸ್ತಕಗಳು ನೀಡುತ್ತವೆ. ಈ ಹಿನ್ನೆಲೆಯಲ್ಲಿ ಪುಸ್ತಕಗಳು, ಅದರ ಲೇಖಕರು, ಹಾಗೆಯೇ ಓದುಗರು ಮುಖ್ಯ ಎನಿಸಿದಾಗ ಹುಟ್ಟಿಕೊಂಡಿದ್ದೇ ಮನೆಗೊಂದು ಗ್ರಂಥಾಲಯ ಪರಿಕಲ್ಪನೆ ಎಂದರು.

ಅಂಬೇಡ್ಕರ್ ಹೇಳುವಂತೆ ಗಳಿಸಿದ ಎರಡು ರೂಪಾಯಿಯಲ್ಲಿ ಒಂದು ರೂಪಾಯಿಯನ್ನು ಅನ್ನಕ್ಕೆ, ಮತ್ತೊಂದು ರೂಪಾಯಿಯನ್ನು ಪುಸ್ತಕ ಖರೀದಿಗೆ ಮೀಸಲಿಡಬೇಕು. ಅದು ಬದುಕಿಗೆ ಬೆಳಕಾಗುವುದು. ಈ ಚಿಂತನೆಯನ್ನು ಕಡೆಗಣಿಸಿದ್ದರಿಂದ ಗ್ರಂಥಾಲಯಕ್ಕೆ ಬದಲಾಗಿ ದೇವಾಲಯಗಳು ಹೆಚ್ಚಾದವು. ಅಗರಬತ್ತಿ, ಕರ್ಪೂರ, ಅರಿಶಿನ ಕುಂಕುಮ ವ್ಯಾಪಾರಿಗಳು ಶ್ರೀಮಂತರಾದರು. ಜನರು ಅಜ್ಞಾನಿಗಳಾದರು ಎಂದರು.


ಪುಕ್ಕಟ್ಟೆ ಕೊಟ್ಟ ಪುಸ್ತಕಗಳು ಓದಿಸಿಕೊಳ್ಳುವುದಿಲ್ಲ. ಓದುಗರೊಂದಿಗೆ ಸಂಪರ್ಕಕ್ಕೆ ಬರುವುದಿಲ್ಲ. ಕೊಂಡು ಓದುವ ಸಂಸ್ಕೃತಿ ಬೆಳೆಸಲು ಓದುಗರಿಗಾಗಿ ನಾಲ್ಕು ವಲಯಗಳಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಪುಸ್ತಕ ಸಂಸ್ಕೃತಿ ಬೆಳೆಯಲು ಓದುಗರೂ ಮುಖ್ಯ ಎಂದು ಈ ಮೂಲಕ ಸಾರಲಾಗಿದೆ ಎಂದರು.

ರೆಡ್‌ಕ್ರಾಸ್‌ ಸಂಸ್ಥೆ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಹುಟ್ಟು ಹಬ್ಬದಂದು ಗ್ರಂಥಾಲಯ ಆರಂಭಿಸುವುದು ಉತ್ತಮ ನಡೆ. ಜ್ಞಾನವೇ ಶಕ್ತಿ. ಆ ಶಕ್ತಿಯನ್ನು ಕೊಡುವುದು ಪುಸ್ತಕ. ಎಲ್ಲ ದೇಶಗಳ ಜ್ಞಾನವನ್ನು ಮನೆಯಲ್ಲೇ ಕೊಡುವುದೇ ಗ್ರಂಥಾಲಯ. ದೇಹದೊಳಗಿನ ಆತ್ಮದಂತೆ ಗ್ರಂಥಾಲಯ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಮಾತನಾಡಿ, ಪುಸ್ತಕ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳಸಬೇಕು. ಮೂರನೇ ವರ್ಷದಲ್ಲಿ ಕಲಿತಿದ್ದು ನೂರು ವರ್ಷ ಬಾಳಿಸುತ್ತದೆ. ಪುಸ್ತಕಗಳು ಅಂಬೇಡ್ಕರ್ ಅವರನ್ನು ವಿಶ್ವಜ್ಞಾನಿಯನ್ನಾಗಿ ಮಾಡಿವೆ ಎಂದು ಹೇಳಿದರು.

ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕ ಕಾರಸವಾಡಿ ಮಹದೇವ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಹಾಗೂ ಉಪನ್ಯಾಸಕ ಎಂ.ಮಂಚಶೆಟ್ಟಿ, ಜಿಲ್ಲಾ ಜಾಗೃತ ಸಮಿತಿಯ ಸದಸ್ಯರಾದ ಡಾ. ಎಂ. ಕೆಂಪಮ್ಮ, ಮಂಜು ಮುತ್ತೇಗೆರೆ, ಚಂದ್ರಶೇಖರ ದ.ಕೋ.ಹಳ್ಳಿ, ಶಿವಕುಮಾರ ಆರಾಧ್ಯ, ಮಂಚಶೆಟ್ಟಿ ಎಂ., ಉಮೇಶ ದಡಮಹಳ್ಳಿ, ಸದ್ದಾಂ ತಗ್ಗಹಳ್ಳಿ ಉಪಸ್ಥಿತರಿದ್ದರು.

ಕೊತ್ತತ್ತಿ ರಾಜು, ಕೀಲಾರ ಕೃಷ್ಣೇಗೌಡ, ಹೆಮ್ಮಿಗೆ ಕಾಳಪ್ಪ, ಬಿ.ಯರಹಳ್ಳಿ ಚಂದ್ರಶೇಖರ, ಕೋಣನಹಳ್ಳಿ ಜಯರಾಂ, ಯೋಗಿಶ್ ಅಪ್ಪಾಜಯ್ಯ, ಕವಿಗಳಾದ ಸಬ್ಬನಹಳ್ಳಿ ಶಶಿಧರ, ಬಸವರಾಜ್ ಜಯಪುರ, ಲೋಕೇಶ್ ಕಲ್ಕುಣಿ, ಥಾಮಸ್ ಬೆಂಜಮಿನ್, ನಾ.ಲೋಕೇಶ ಸ್ಥಪತಿ, ಮಂಜುನಾಥ್, ಮತ್ತಿತರರು ಭಾಗವಹಿಸಿದ್ದರು.