ಜೋಡೆತ್ತಿನ ಗಾಡಿ ಓಟ ಸ್ಪರ್ಧೆ: ಬಹುಮಾನ ವಿತರಣೆ

| Published : Apr 22 2025, 01:51 AM IST

ಸಾರಾಂಶ

ಬಸವ ಜಯಂತಿ ನಿಮಿತ್ತ ನಗರದ ಶ್ರೀ ಕುಂಬಳೇಶ್ವರ 108 ಲಿಂಗೇಶ್ವರ ಸೇವಾ ಸಮಿತಿಯಿಂದ ಭಾನುವಾರ ನಗರದ ಅಮರಾವತಿ ಹತ್ತಿರದ ಸೆಂಟ್ ಅಲೋಷಿಯಸ್ ಕಾಲೇಜು ಸಮೀಪದ ವಿಶಾಲ ಪ್ರದೇಶದಲ್ಲಿ ಜೋಡೆತ್ತಿನ ಖಾಲಿ ಗಾಡಿ ಓಡಿಸುವ ಸ್ಪರ್ಧೆ ನಡೆಯಿತು.

- ಬಿ.ಕೆ.ಹಳ್ಳಿಯ ಶ್ರೀ ಗ್ರಾಮ ದೇವತೆ ಪ್ರಸನ್ನ ಬಂಡಿ ಪ್ರಥಮ - ಹಳೆ ಹುಬ್ಬಳ್ಳಿ ಈಚಲ ಎಲ್ಲಾಪುರ ಸಿದ್ದಾರೂಢ ಪ್ರಸನ್ನ ಬಂಡಿ ದ್ವಿತೀಯ

- ಹರಿಹರದ ಗಂಗನರಸಿ ಆಂಜನೇಯ ಪ್ರಸನ್ನ ಬಂಡಿ ತೃತೀಯ

- - -

ಕನ್ನಡಪ್ರಭ ವಾರ್ತೆ ಹರಿಹರ

ಬಸವ ಜಯಂತಿ ನಿಮಿತ್ತ ನಗರದ ಶ್ರೀ ಕುಂಬಳೇಶ್ವರ 108 ಲಿಂಗೇಶ್ವರ ಸೇವಾ ಸಮಿತಿಯಿಂದ ಭಾನುವಾರ ನಗರದ ಅಮರಾವತಿ ಹತ್ತಿರದ ಸೆಂಟ್ ಅಲೋಷಿಯಸ್ ಕಾಲೇಜು ಸಮೀಪದ ವಿಶಾಲ ಪ್ರದೇಶದಲ್ಲಿ ಜೋಡೆತ್ತಿನ ಖಾಲಿ ಗಾಡಿ ಓಡಿಸುವ ಸ್ಪರ್ಧೆ ನಡೆಯಿತು.

ಜೋಡೆತ್ತಿನ ಖಾಲಿ ಗಾಡಿ ಓಡಿಸುವ ಸ್ಪರ್ಧೆಯಲ್ಲಿ ಒಂದೆಡೆ ಜಿದ್ದಿಗೆ ಬಿದ್ದಂತೆ ಹೋರಿಗಳು ಓಡುತ್ತಿದ್ದರೆ, ಇನ್ನೊಂದೆಡೆ ರಣಬಿಸಿಲನ್ನೂ ಲೆಕ್ಕಿಸದೇ ಸ್ಪರ್ಧೆಯ ಎತ್ತುಗಳ ಶರವೇಗದ ಓಟವನ್ನು ರೈತರು, ಯುವಕರು ಕಣ್ತುಂಬಿಕೊಂಡರು. ಜಿದ್ದಿಗೆ ಬಿದ್ದ ಹೋರಿಗಳ ಓಟಕ್ಕೆ ಪ್ರೇಕ್ಷಕರು ಕೇಕೆ ಹಾಕಿ, ಹುರಿದುಂಬಿಸುತ್ತಿದ್ದ ದೃಶ್ಯ ರೋಮಾಂಚನವಾಗಿತ್ತು.

ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ, ರಾಯಚೂರು ಸೇರಿದಂತೆ ಹರಿಹರ ತಾಲೂಕು ಮತ್ತು ರಾಜ್ಯದ ನಾನಾ ಭಾಗಗಳಿಂದ 36ಕೂ ಹೆಚ್ಚು ಜತೆ ಹೋರಿ-ಗಾಡಿಗಳನ್ನು ರೈತರು ಸ್ಪರ್ಧೆಗಾಗಿ ಕರೆತಂದಿದ್ದರು. ಬಂಡಿಯ ನೊಗಕ್ಕೆ ಸಿಂಗರಿಸಿದ ಜೋಡೆತ್ತು ಕಟ್ಟಿ ಒಂದು ಕೈಯಲ್ಲಿ ಎತ್ತುಗಳಿಗೆ ಕಟ್ಟಿದ ಮೂಗುದಾರದ ಹಗ್ಗಗಳ ಹಿಡಿದು, ಅವು ದಾರಿ ತಪ್ಪಿ ಹೋಗದಂತೆ ಬಾರಕೋಲು ಹಿಡಿದು ಬೆದರಿಸುತ್ತಿದ್ದ ಸಾಹಸಿಗಳ ಸಾಹಸಕ್ಕೆ ಜನರು ಹುಬ್ಬೇರಿಸಿದರು. ಅತ್ಯಂತ ಕಡಿಮೆ ಸಮಯದಲ್ಲಿ ನಿಗದಿತ ಗುರಿ ತಲುಪಿ, ಪ್ರಥಮ ಬಹುಮಾನ ಗಿಟ್ಟಿಸಲು ಬಂಡಿ ಮಾಲೀಕರ ಪ್ರಯತ್ನ ಜನರನ್ನು ರಂಜಿಸಿತು.

ಸ್ಪರ್ಧೆ ಆಯೋಜಕರೊಬ್ಬರು ಕೈಯಲ್ಲಿ ಟೈಮರ್ ಹಿಡಿದು ಗಾಡಿ ಹಿಂಬದಿಯಲ್ಲಿ ಕುಳಿತಿದ್ದು. ನಿಗದಿತ ಸಮಯ ಪೂರ್ಣಗೊಳ್ಳುತ್ತಲೇ, ಕೈಯಲ್ಲಿದ್ದ ಕೆಂಪು ಬಣ್ಣದ ಗಂಟನ್ನು ಕೆಳಗೆ ಹಾಕುತ್ತಾರೆ. ಆಗ ಗಾಡಿ ಓಡಿದ ದೂರ ಮತ್ತು ಸಮಯ ಲೆಕ್ಕ ಹಾಕಿ, ಗುರುತು ಹಾಕಲಾಯಿತು. ಒಂದು ನಿಮಿಷದಲ್ಲಿ ಹೆಚ್ಚು ದೂರ ಕ್ರಮಿಸಿದ ಜೋಡೆತ್ತುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನಿಗದಿಪಡಿಸಲಾಗಿತ್ತು.

ಪ್ರಥಮ: ಸ್ಪರ್ಧೆಯಲ್ಲಿ ಭಾಗವಹಿಸಿದ ಕರಡಿಕೊಪ್ಪ ಬಿ.ಕೆ.ಹಳ್ಳಿಯ ಶ್ರೀ ಗ್ರಾಮ ದೇವತೆ ಪ್ರಸನ್ನ ಹೆಸರಿನ ಬಂಡಿ ಪ್ರಥಮ ಸ್ಥಾನ ಗಳಿಸಿ, ₹65 ಸಾವಿರ ನಗದು ಸ್ವೀಕರಿಸಿತು. ಹಳೇ ಹುಬ್ಬಳ್ಳಿಯ ಈಚಲ ಎಲ್ಲಾಪುರ ಸಿದ್ದಾರೂಢ ಪ್ರಸನ್ನ ಹೆಸರಿನ ಬಂಡಿ ₹45 ಸಾವಿರ ಮೊತ್ತವನ್ನು ದ್ವಿತೀಯ ಬಹುಮಾನವಾಗಿ ಗಳಿಸಿತು. ಹರಿಹರ ತಾಲೂಕಿನ ಗಂಗನರಸಿ ಆಂಜನೇಯ ಪ್ರಸನ್ನ ಬಂಡಿಯು ತೃತೀಯ ಬಹುಮಾನವಾದ ₹30 ಸಾವಿರ ನಗದು ಗಳಿಸಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಇತರ 25 ಎತ್ತು ಹಾಗೂ ಹೋರಿಗಳ ಮಾಲೀಕರಿಗೂ ಪ್ರೋತ್ಸಾಹಕವಾಗಿ ನಗದು ಬಹುಮಾನಗಳನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಚ್.ಎಚ್. ಶಿವಶಂಕರ್, ಕಾಂಗ್ರೆಸ್ ಮುಖಂಡ ಹಾಲೇಶ್ ಗೌಡ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ನಗರಸಭಾ ಸದಸ್ಯ ಕೆ.ವಿ ರಾಜಶೇಖರ್, ಎಂ.ಎಚ್.ಬಿ. ಚಂದ್ರಶೇಖರ್, ಅಮರಾವತಿ ಚಪಾತಿ ಬಸಣ್ಣ, ಕುಂಭಳೇಶ್ವರ ಸೇವಾ ಸಮಿತಿ ಗೌರವ ಅಧ್ಯಕ್ಷ ಜಿ.ನಂಜಪ್ಪ, ಅಧ್ಯಕ್ಷ ರೇವಣಸಿದ್ದಪ್ಪ, ಕಾರ್ಯದರ್ಶಿ ಮಾಲತೇಶ ಜಿ.ಬಿ., ಖಜಾಂಚಿ ಬೆಣ್ಣಿ ಸಿದ್ದಪ್ಪ, ಸಹ ಕಾರ್ಯದರ್ಶಿಗಳಾದ ವಿರೂಪಾಕ್ಷ, ಶಿವಯೋಗಿ, ಉಪಾಧ್ಯಕ್ಷ ಬಸವರಾಜ ಚಂದ್ರಣ್ಣ ಮಜ್ಗಿ, ಸದಸ್ಯರಾದ ಮಲ್ಲೇಶಪ್ಪ ಬೇಲೂರು, ಗಜೇಂದ್ರ, ಕೆಂಚಿಕೆರೆ ಶಿವಪ್ರಕಾಶ್, ಪೂಜಾರ್ ರಾಜಣ್ಣ, ಸುರೇಶ್ ಪೈಲ್ವಾನ್, ಅಡಕಿ ಪ್ರೇಮ್ ಕುಮಾರ್, ಭರಂಪುರದ ಯುವಕರ ತಂಡದವರು ಭಾಗವಹಿಸಿದ್ದರು.

- - -

-21ಎಚ್‍ಆರ್‍ಆರ್03:

ಹರಿಹರದ ಶ್ರೀ ಕುಂಭಳೇಶ್ವರ 108 ಲಿಂಗೇಶ್ವರ ಸೇವಾ ಸಮಿತಿಯಿಂದ ನಗರದ ಅಮರಾವತಿ ಹತ್ತಿರದ ಸೆಂಟ್ ಅಲೋಷಿಯಸ್ ಕಾಲೇಜು ಸಮೀಪದ ವಿಶಾಲ ಪ್ರದೇಶದಲ್ಲಿ ಜೋಡೆತ್ತಿನ ಖಾಲಿ ಗಾಡಿ ಓಡಿಸುವ ಸ್ಪರ್ಧೆ ಜನರನ್ನು ರಂಜಿಸಿತು.