ಸಾರಾಂಶ
ಅಜೀಜಅಹ್ಮದ ಬಳಗಾನೂರ ಹುಬ್ಬಳ್ಳಿ
ನಗರದ ದುರ್ಗದ ಬೈಲ್, ಶಾಹ ಬಜಾರ್ ಈಗ ತಂಪು ಪಾನೀಯ, ಚಾಟ್ ಸೆಂಟರ್‌ಗಳಿಂದಾಗಿ ಪ್ರಸಿದ್ಧಿ ಪಡೆಯುತ್ತಿದೆ. ರಂಜಾನ್ ತಿಂಗಳ ಉಪವಾಸ ವೃತಾಚರಣೆಯ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನ್ ಬಾಂಧವರು ಇಲ್ಲಿಗೆ ಆಗಮಿಸಿ ತಮ್ಮಿಷ್ಟದ ಖಾದ್ಯದ ರುಚಿ ಸವಿಯುತ್ತಿರುವುದು ಸಾಮಾನ್ಯವಾಗಿದೆ.ಶಾಹ ಬಜಾರ್, ದುರ್ಗದ ಬೈಲ್ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶ. ಇಲ್ಲಿಗೆ ತೆರಳಿದರೆ ಬಗೆಬಗೆಯ ಬಟ್ಟೆಗಳ ಮಳಿಗೆ, ಡ್ರೈಫ್ರೂಟ್ಸ್, ಸ್ಟೇಷನರಿ, ಚಪ್ಪಲಿಗಳ ಮಳಿಗೆ ಹೀಗೆ ಮಾರಾಟ ಮಳಿಗೆಗಳು ಕಾಣಸಿಗುತ್ತವೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆಯಾಗುತ್ತಿರುವುದು ವಿವಿಧ ಚಾಟ್ ಸೆಂಟರ್‌ಗಳು.
ಏನೆಲ್ಲ ದೊರೆಯುತ್ತವೆ?: ಚಿಕನ್ ರೋಲ್, ಚಿಕನ್ ಕಬಾಬ್, ಚಿಕನ್ ಲಾಲಿಪಾಪ್, ಹೈದರಾಬಾದಿ ಬಿರಿಯಾನಿ, ಚಿಕನ್ ಶವರ್ಮಾ, ಚಿಕನ್ ರೋಲ್, ಚಿಕನ್ ಗಡಿ, ಚಿಕನ್ ಐಸ್ ಕ್ರೀಂ, ಬೀಫ್ ಸಮೋಸಾ, ಚಿಕನ್ ಸಮೋಸಾ, ಎಗ್ ರೈಸ್, ಫ್ರೈಡ್ ರೈಸ್, ಮಶ್ರೂಮ್ ಫ್ರೈಡ್ ರೈಸ್, ಗೀ ರೈಸ್, ಕರ್ಡ್ ರೈಸ್, ಪನ್ನೀರ್ ಮಂಚೂರಿಯನ್, ಬೇಬಿಕಾರ್ನ್ ಮಂಚೂರಿಯನ್, ವೆಜ್ ಬಿರಿಯಾನಿ, ಶೇಜ್ವಾನ್ ಫ್ರೈಡ್ ರೈಸ್, ಚಿಕನ್ ರೈಸ್, ಎಗ್ ಬಿರಿಯಾನಿ, ಚಿಕನ್ ಡ್ರೈ, ಕಬಾಬ್ ಸೇರಿದಂತೆ ಹಲವು ಬಗೆಯ ಖಾದ್ಯಗಳು ಕೇವಲ ₹50ಕ್ಕೆ ಲಭ್ಯ.ಗೋಬಿ, ನೂಡಲ್ಸ್, ಸೇವ್ ಪುರಿ, ಪಾನಿಪುರಿ, ಭೇಲ್ ಪುರಿ, ದಹಿ ಪುರಿ, ಮಸಾಲಾ ಪುರಿ, ಸುಕ್ಕಾ ಪುರಿ, ಮಸಾಲೆ ದೋಸೆ, ಬೆಣ್ಣೆ ಮಸಾಲೆ ದೋಸೆ, ಖಾಲಿ ದೋಸೆ, ಸೆಟ್ ದೋಸೆ, ಉತ್ತಪ್ಪ, ಇಡ್ಲಿ, ತಟ್ಟೆ ಇಡ್ಲಿ, ವಡಾ, ಟೊಮ್ಯಾಟೋ ಆಮ್ಲೇಟ್ ₹40 ರಿಂದ ₹60 ಕ್ಕೆ ದೊರೆಯುತ್ತವೆ.
ತಂಪು ಪಾನೀಯಗಳಾದ ಮ್ಯಾಂಗೊ ಲಸ್ಸಿ, ಮ್ಯಾಂಗೊ ಮಿಲ್ಕ್ ಶೇಕ್, ಕಾಜೂ ಗುಲ್ಕನ್, ರಸ್ಮಲಾಯ್, ಬಾದಾಮ್, ಪಿಸ್ತಾ, ವೆನಿಲ್ಲಾ, ಕಲ್ಲಂಗಡಿ ಶರ್ಬತ್, ಮೊಹಬ್ಬತ್ ಶರ್ಬತ್, ಮೋಸಂಬಿ ಜ್ಯೂಸ್, ಮ್ಯಾಂಗೋ, ಮಿಕ್ಸ್ ಫ್ರೂಟ್ಸ್‌ನಂತಹ ತಂಪು ಪಾನೀಯಗಳು ಕಡಿಮೆ ಬೆಲೆಯಲ್ಲಿ ಮಾರಾಟವಾಗುತ್ತಿವೆ.ಸಂಜೆ ಚಿತ್ರಣವೇ ಬದಲು: ರಂಜಾನ್ ಉಪವಾಸ ವೃತಾಚರಣೆ ಆರಂಭವಾಗಿರುವುದರಿಂದಾಗಿ ಸಂಜೆಯ ವೇಳೆ ದುರ್ಗದ ಬೈಲ್, ಶಾಹ ಬಜಾರ್‌ನ ಚಿತ್ರಣವೇ ಬದಲಾಗುತ್ತದೆ. ಮುಸಲ್ಮಾನ್ ಬಾಂಧವರು ಸಂಜೆ ಉಪವಾಸ ವೃತಾಚರಣೆ (ಇಫ್ತಾರ್) ಕೈ ಬಿಡುತ್ತಾರೆ. ಬಳಿಕ ಶಾಹ ಬಜಾರ್‌ನ ಈ ಮಾರುಕಟ್ಟೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಲಗ್ಗೆಯಿಟ್ಟು ತಮ್ಮಿಷ್ಟದ ತಿಂಡಿ-ತಿನಿಸು ತಿನ್ನುತ್ತಾರೆ.
ಬಗೆಬಗೆಯ ಹಣ್ಣುಗಳ ಮಾರಾಟ: ವೈವಿಧ್ಯಮಯ ಖಾದ್ಯಗಳಷ್ಟೇ ಅಲ್ಲದೇ ಹಲವು ಬಗೆಯ ಹಣ್ಣುಗಳ ಮಾರಾಟ ನಡೆಯುತ್ತಿದೆ. ಪಪ್ಪಾಯಿ, ಕಲ್ಲಂಗಡಿ, ಖರಬೂಜ ಹಣ್ಣುಗಳನ್ನು ಕತ್ತರಿಸಿ ಮಾರಾಟ ಮಾಡಲಾಗುತ್ತದೆ. ಜತೆಗೆ ಎಲ್ಲ ಹಣ್ಣುಗಳನ್ನು ಒಳಗೊಂಡ ಫ್ರುಟ್ ಬೌಲ್‌ಗೆ ಹೆಚ್ಚಿನ ಬೇಡಿಕೆಯಿದೆ.ನಿತ್ಯ 10 ಸಾವಿರಕ್ಕೂ ಅಧಿಕ ಗ್ರಾಹಕರು: ರಂಜಾನ್ ತಿಂಗಳಲ್ಲಿ ಬಟ್ಟೆ ವ್ಯಾಪಾರಕ್ಕೆಂದು ಹುಬ್ಬಳ್ಳಿ, ಧಾರವಾಡ ಸೇರಿದಂತೆ ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿನ ಶಾಹ ಬಜಾರ್, ದುರ್ಗದಬೈಲ್‌ಗೆ ಆಗಮಿಸುತ್ತಾರೆ. ಇವರಲ್ಲಿನ ಭಾಗಶಃ ಜನರು ಇಲ್ಲಿನ ಚಾಟ್ ಸೆಂಟರ್‌ಗಳಿಗೆ ಆಗಮಿಸುತ್ತಾರೆ. ಉಳಿದ ದಿನಗಳಲ್ಲಿ 3-4 ಸಾವಿರ ಗ್ರಾಹಕರು ಭೇಟಿ ನೀಡುತ್ತಾರೆ. ಆದರೆ, ರಂಜಾನ್ ತಿಂಗಳಲ್ಲಿ ನಿತ್ಯವೂ 10 ಸಾವಿರಕ್ಕೂ ಅಧಿಕ ಗ್ರಾಹಕರು ಭೇಟಿ ನೀಡುತ್ತಿದ್ದು, ನಮಗಿಷ್ಟದ ಖಾದ್ಯದ ರುಚಿ ಸವಿದು ಹೋಗುತ್ತಿದ್ದಾರೆ ಎಂದು ಐಸ್‌ಕ್ರೀಂ ಮಾರಾಟಗಾರ ಜಬ್ಬಾರಅಲಿ ಮೊರಬ "ಕನ್ನಡಪ್ರಭಕ್ಕೆ " ತಿಳಿಸಿದರು.
ಇಲ್ಲಿನ ಚಾಟ್ ಸೆಂಟರ್‌ಗಳಲ್ಲಿ ಕಡಿಮೆ ಬೆಲೆಯಲ್ಲಿ ರುಚಿಕರವಾದ ಖಾದ್ಯಗಳು ದೊರೆಯುತ್ತವೆ. ರಂಜಾನ್ ಉಪವಾಸ ವೃತಾಚರಣೆಯ ನಮಾಜ್ ಮಾಡಿದ ಬಳಿಕ ನಿತ್ಯವೂ ಇಲ್ಲಿಗೆ ಸ್ನೇಹಿತರೊಂದಿಗೆ ಆಗಮಿಸಿ ನಮಗಿಷ್ಟದ ತಿಂಡಿ ತಿನ್ನುತ್ತೇವೆ ಎಂದು ಗ್ರಾಹಕರಾದ - ಅನ್ವರ ಮನಿಯಾರ್, ಮೊಹ್ಮದ ಇಸಾಕ್ ಹೇಳಿದ್ದಾರೆ.