ಖಾಸಗಿ ಕಾರ್ಖಾನೆಯೊಂದರಲ್ಲಿ ಗುತ್ತಿಗೆ ಆಧಾರದ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ
--------
ಕನ್ನಡಪ್ರಭ ವಾರ್ತೆ ನಂಜನಗೂಡುಪಟ್ಟಣದ ಹೊರವಲಯದ ಕೋರೆಹುಂಡಿಗೆ ತೆರಳುವ ರಸ್ತೆಯಲ್ಲಿ ಬೈಕ್ ಸಮೇತ ಯುವಕನೋರ್ವ ಸಜೀವವಾಗಿ ದಹನವಾಗಿದ್ದು, ಶವ ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಯುವಕನ ಸಾವಿನ ಬಗ್ಗೆ ಕುಟುಂಬದವರು ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.ತಾಲೂಕಿನ ರಾಂಪುರ ಗ್ರಾಮದ ನಿವಾಸಿ ಬಸವಣ್ಣ ಎಂಬವರ ಪುತ್ರ ಆದಿತ್ಯ (23) ಮೃತಪಟ್ಟ ಯುವಕ.
ನಂಜನಗೂಡಿನನಿಂದ ಕೋರೆಹುಂಡಿಗೆ ತೆರಳುವ ರಸ್ತೆಯಲ್ಲಿರುವ ಹುಲ್ಲಹಳ್ಳಿ ನಾಲೆ ಸಮೀಪದ ನಿರ್ಜನ ಪ್ರದೇಶದಲ್ಲಿ ಬೈಕ್ ಹಾಗೂ ಆದಿತ್ಯನ ಶವ ಸಂಪೂರ್ಣ ಸುಟ್ಟಿರುವ ಸ್ಥಿತಿಯಲ್ಲಿ ಸೋಮವಾರ ರಾತ್ರಿ ಪತ್ತೆಯಾಗಿದೆ.ಖಾಸಗಿ ಕಾರ್ಖಾನೆಯೊಂದರಲ್ಲಿ ಗುತ್ತಿಗೆ ಆಧಾರದ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಈತ ಸೋಮವಾರ ಬೆಳಗ್ಗೆ ತನ್ನ ಬೈಕ್ ದುರಸ್ತಿ ಮಾಡಿಸುತ್ತೇನೆ ಎಂದು ಮನೆಯಿಂದ ಹೋದವನು ವಾಪಸ್ ಬಂದಿರಲಿಲ್ಲ, ಸಂಜೆ 4ಕ್ಕೆ ಆದಿತ್ಯ ತಾಯಿ ಅಂಬಿಕಾ ಅವರು ಮನೆಗೆ ಬೇಗ ಬರುವಂತೆ ಕರೆ ಮಾಡಿದಾಗ, ಆದಿತ್ಯ ಮನೆಗೆ ಬೇಗ ಬರುವುದಾಗಿ ತಾಯಿಗೆ ತಿಳಿಸಿದ್ದಾರೆ. ಸಂಜೆ 7ಕ್ಕೆ ಬೈಕ್ ಸಮೇತ ಬೆಂಕಿಗೆ ಆಹುತಿಯಾಗಿರುವುದಾಗಿ ಪರಿಚಿತರು ಪೋನ್ ಮೂಲಕ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮೃತನ ತಂದೆ ಮಾದೇಶ ಮಗನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ, ನಂಜನಗೂಡು ಗ್ರಾಮಾಂತರ ಠಾಣೆಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಿ ತನಿಖೆ ಕೈಗೊಂಡಿದ್ದಾರೆ.ನಿರ್ಜನ ಪ್ರದೇಶದಿಂದ ಆದಿತ್ಯ ಚಲಿಸುವ ಬೈಕ್ ನಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಯುವಕನ ಸಾವು ಆಕಸ್ಮಿಕವೋ ಅಥವಾ ಕೊಲೆಯೋ ಎಂಬ ಸತ್ಯ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
----------------