ಸಾರಾಂಶ
ಶಿವಾಜಿ ಮಹಾರಾಜರು ಸ್ವರಾಜ್ಯ ಮೌಲ್ಯ ಮತ್ತು ಮರಾಠಾ ಪರಂಪರೆಯನ್ನು ತಮ್ಮ ಆಡಳಿತ ಕೌಶಲ್ಯದಿಂದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದವರು.
ಬಳ್ಳಾರಿ: ಛತ್ರಪತಿ ಶಿವಾಜಿ ಮಹಾರಾಜರು ಪ್ರಗತಿಪರ ಮತ್ತು ಸಂವೇದನಾಶೀಲ ಆಡಳಿತಗಾರರಾಗಿದ್ದರು ಎಂದು ಮೇಯರ್ ಬಿ. ಶ್ವೇತಾ ತಿಳಿಸಿದರು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಬಿಡಿಎಎ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಶಿವಾಜಿ ಮಹಾರಾಜರು ಸ್ವರಾಜ್ಯ ಮೌಲ್ಯ ಮತ್ತು ಮರಾಠಾ ಪರಂಪರೆಯನ್ನು ತಮ್ಮ ಆಡಳಿತ ಕೌಶಲ್ಯದಿಂದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದವರು. ತನ್ನ ಮರಾಠ ಸೈನ್ಯದ ಮೂಲಕ ಗೆರಿಲ್ಲಾ ಹೋರಾಟದ ತಂತ್ರಗಳನ್ನು ಪರಿಚಯಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. ಮೊಘಲರ ವಿರುದ್ಧ ಹಲವಾರು ಯುದ್ಧಗಳನ್ನು ಗೆದ್ದ ಅವರ ಶೌರ್ಯ ಮತ್ತು ತಂತ್ರಗಳಿಗೆ ಹೆಸರುವಾಸಿಯಾಗಿದ್ದರು ಎಂದರು.
ಕರ್ನಾಟಕ ಮರಾಠ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಸೇನೆ ಯುವ ಘಟಕದ ರಾಜ್ಯಾಧ್ಯಕ್ಷ ವಿನೋದ್ ಎಂ. ಚವ್ಹಾಣ ಅವರು ವಿಶೇಷ ಉಪನ್ಯಾಸ ನೀಡಿದರು. ಜಯತೀರ್ಥ ಜಾಗೀರದಾರ್ ತಂಡದವರು ವಚನ ಗಾಯನ ಪ್ರಸ್ತುತ ಪಡಿಸಿದರು.ಉಪಮೇಯರ್ ಬಿ. ಜಾನಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ. ಶಿವಾಜಿರಾವ್, ಸಮಾಜದ ಮುಖಂಡರುಗಳಾದ ಯಶವಂತರಾವ್ ಜಗತಾಪ್, ಅನಿತಾ ಸಾಳುನ್ಕೆ, ನಾಗರಾಜ್ ಚವ್ಹಾಣ್, ದಿನೇಶ್ ನಲವಡೆ, ಶಂಕರ್ ಗಾಯಕವಾಡ್ ಮತ್ತಿತರರಿದ್ದರು.
ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ಸಂಭ್ರಮದಿಂದ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ವಾದ್ಯ, ತಾಷೆ ರಾಂಡೋಲ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮೆರುಗು ನೀಡಿದವು.