ಕಾರ್ಕಳ: ಮುಂದಿನ ವರ್ಷ ನಡೆಯಲಿರುವ ಶ್ರೀ ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ನಡೆಯುತ್ತಿರುವ ಈ ಚಾತುರ್ಮಾಸ ವ್ರತಾಚರಣೆಯು ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿ, ಆತ್ಮಶುದ್ಧಿ ಹಾಗೂ ಆತ್ಮಕಲ್ಯಾಣದತ್ತ ಪ್ರೇರೇಪಿಸುವಂತಾಗಲಿ ಎಂದು ಶ್ರೀ ಏಲಾಚಾರ್ಯ ಮುನಿಶ್ರೀ ೧೦೮ ಪ್ರಸಂಗ ಸಾಗರ ಮಹಾರಾಜರು ಆಶಿಸಿದ್ದಾರೆ.ಕಾರ್ಕಳದಲ್ಲಿ ತಮ್ಮ 16ನೇ ಚಾತುರ್ಮಾಸ ವ್ರತಾಚರಣೆ ಅಂಗವಾಗಿ ಮಂಗಳಪುರ ಪ್ರವೇಶ ಮಾಡಿದ ಶ್ರೀಗಳು ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.

ಚಾತುರ್ಮಾಸ ವ್ರತವನ್ನು ಆಡಂಬರ ಹಾಗೂ ಅನಗತ್ಯ ಖರ್ಚಿಲ್ಲದೆ ಸರಳತೆ ಮತ್ತು ಭಕ್ತಿಭಾವದಿಂದ ಆಚರಿಸುವಂತೆ ಕರೆ ನೀಡಿದರು.ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಮಾತನಾಡಿ, ಮಹಾಮಸ್ತಕಾಭಿಷೇಕದ ಪೂರ್ವದಲ್ಲಿ ನಡೆಯುತ್ತಿರುವ ಈ ಚಾತುರ್ಮಾಸ ವ್ರತಾಚರಣೆಯು ಭಕ್ತರ ಪುಣ್ಯದ ಫಲವಾಗಿದ್ದು, ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸುವ ಮಹತ್ವದ ಸಾಧನವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಚಾತುರ್ಮಾಸ ವ್ರತಾಚರಣೆಯ ಮೊದಲ ಕಾರ್ಯಕ್ರಮದಲ್ಲೇ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರ ಉತ್ಸಾಹ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ ಎಂದರು.

ಇದೇ ವೇಳೆ ಚಾತುರ್ಮಾಸ ವ್ರತಾಚರಣೆಗೆ 5 ಲಕ್ಷ ರು. ದೇಣಿಗೆ ಘೋಷಿಸಿದರು.ಶ್ರೀ ಏಲಾಚಾರ್ಯ ಮುನಿಶ್ರೀ ೧೦೮ ಪ್ರಸಂಗ ಸಾಗರ ಮಹಾರಾಜರು, ಕಾರ್ಕಳ ಜೈನ ಮಠದ ಪರಮಪೂಜ್ಯ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಕ್ಷುಲ್ಲಕ ಪ್ರಗುಣ ಸಾಗರ ಮಹಾರಾಜರು ಹಾಗೂ ಅವರ ಸಂಘ, ಡಾ. ಎಂ.ಎನ್. ರಾಜೇಂದ್ರ ಕುಮಾರ್, ಕಾರ್ಕಳ ಪಟ್ಟದ ಪುರೋಹಿತ ವರ್ಧಮಾನ ಇಂದ್ರ ಹಾಗೂ ಕಾರ್ಕಳದ ವಿವಿಧ ಜೈನ ಸಂಘ ಸಂಸ್ಥೆಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಪ್ರೊ. ಗುಣಪಾಲ ಕಡಂಬ ನಿರೂಪಿಸಿದರು.