ಸಾರಾಂಶ
ಪ್ರತಿಭಟನೆ । ಕೊಟ್ಟಿಗೆ ಧ್ವಂಸ, ಜಾನುವಾರು ಮೇಲೆ ದಾಳಿ । ಜೀವ ಭಯದಲ್ಲಿ ಗ್ರಾಮಸ್ಥರ ಬದುಕು । ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಬಿಕ್ಕೋಡು ಹೋಬಳಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಳೆದ 15 ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಬೆಳೆ ನಷ್ಟದ ಜತೆಗೆ ರೈತರು ಜೀವದ ಹಂಗನ್ನು ತೊರೆದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅರಣ್ಯ ಇಲಾಖೆ ನಿರ್ಲಕ್ಷ್ಯ ತಾಳುತ್ತಿದೆ ಎಂದು ಆರೋಪಿಸಿ ಚೌಡನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ತಾಲೂಕಿನ ಬಿಕ್ಕೋಡು ಹೋಬಳಿ ಚೌಡನಹಳ್ಳಿ, ಬೊಮ್ಮಡಿಹಳ್ಳಿ, ಕರಡಗೋಡು, ಮೊಗಸಾವರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಳೆದ 15 ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ರೈತರ ಬೆಳೆದ ಭತ್ತ ರಾಗಿ ಕಾಫಿ ಅಡಿಕೆ ಜೋಳ ಹಾಗೂ ಶುಂಠಿ ಬೆಳೆಗಳ ಮೇಲೆ ದಾಳಿ ಮಾಡಿ ತಾವು ಬೆಳೆದ ಫಸಲು ಕೈ ಸೇರುವ ಮುನ್ನವೇ ಮಣ್ಣು ಪಾಲು ಮಾಡುತ್ತಿದ್ದು ಬೆಳೆ ನಷ್ಟದ ಜತೆಗೆ ಜನಸಾಮಾನ್ಯರು ಜೀವದ ಹಂಗನ್ನು ತೊರೆದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ದೂರಿದರು.ಈ ಸಂದರ್ಭದಲ್ಲಿ ರೈತರಾದ ಕುಮಾರಸ್ವಾಮಿ, ಶೇಖರ್, ಶಿವೇಗೌಡ, ಸೋಮಶೇಖರ್ ಮಾತನಾಡಿ, ಕಾಡಾನೆಗಳು ಅನೇಕ ರೀತಿಯ ತೊಂದರೆ ನೀಡುತ್ತಿವೆ. ಕೂಡಲೇ ಅವುಳನ್ನು ಹಿಡಿದು ಶಾಶ್ವತವಾಗಿ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಶುಕ್ರವಾರ ರಾತ್ರಿ ಗ್ರಾಮದ ಶಂಕರಯ್ಯ ಎಂಬುವವರಿಗೆ ಸೇರಿದ ಕೊಟ್ಟಿಗೆಯ ಮೇಲೆ ದಾಳಿ ಮಾಡಿರುವ ಒಂಟಿ ಸಲಗ ಮೇಲ್ಚಾವಣಿಯನ್ನು ಪುಡಿಮಾಡಿ ಜಾನುವಾರು ಮೇಲೆ ದಾಳಿ ಮಾಡಿದೆ. ಹಗಲು ರಾತ್ರಿ ಎನ್ನದೆ ತಿರುಗುತ್ತಿರುವ ಕಾಡಾನೆಗಳ ಸಂಚಾರಕ್ಕೆ ಹೆದರಿ ಜನರು ಮನೆಯಿಂದ ಹೊರ ಬರುವುದಕ್ಕೆ ಭಯಪಡುತ್ತಿದ್ದಾರೆ. ಶೀಘ್ರದಲ್ಲೇ ಕಾಡಾನೆಗಳ ಸಮಸ್ಯೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ರೂಪಿಸಲಾಗುವುದೆಂದು ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದರು.
ಇನ್ನು ಬೊಮ್ಮಡಿ ಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ 40ಕ್ಕೂ ಹೆಚ್ಚು ಕಾಡಾನೆಗಳು ಹಿಂಡು ರಾತ್ರಿ ವೇಳೆ ಗುಂಪು ಗುಂಪಾಗಿ ದಾಳಿ ಮಾಡುತ್ತಿದ್ದರೂ ಅರಣ್ಯ ಇಲಾಖೆ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಾಟಾಚಾರದ ಮಾಹಿತಿ ನೀಡುವ ಅರಣ್ಯ ಇಲಾಖೆ ಅಧಿಕಾರಿಗಳು ಕಳೆದ ತಿಂಗಳು ಬಿಕ್ಕೋಡಿನ ಬಯಲು ರಂಗ ಮಂದಿರದಲ್ಲಿ ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಅಧಿಕಾರಿಗಳು ತಿಂಗಳೊಳಗಾಗಿ ಕಾಡಾನೆಗಳನ್ನು ಹಿಡಿದು ಶಾಶ್ವತವಾಗಿ ಸ್ಥಳಾಂತರ ಮಾಡುವ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಧರ್ಮರಾಜ್, ಮಂಜುನಾಥ್, ಜಗದೀಶ್, ಆಶೋಕ್, ಗಿರೀಶ್, ಶಂಕರಯ್ಯ, ಕುಮಾರ್ ಇತರರು ಹಾಜರಿದ್ದರು.