ಬ್ಯಾಡಗಿ ಮಂದಿಗೆ ಅಗ್ಗದ ಬೆಲೆಯ ಮಕಮಲ್‌ ಟೋಪಿ!

| Published : Jul 02 2024, 01:42 AM IST

ಸಾರಾಂಶ

ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳನ್ನು ನೀಡುವುದಾಗಿ ನಂಬಿಸಿ ಇದೀಗ ಸಾರ್ವಜನಿಕರ ಲಕ್ಷಾಂತರ ರು. ಲಪಟಾಯಿಸಿದ 5 ಜನರ ತಂಡವೊಂದು ಪರಾರಿಯಾದ ಘಟನೆ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಬ್ಯಾಡಗಿ: ಕಡಿಮೆ ಬೆಲೆಗೆ ಗೃಹೋಪಯೋಗಿ ವಸ್ತುಗಳನ್ನು ನೀಡುವುದಾಗಿ ನಂಬಿಸಿ ಇದೀಗ ಸಾರ್ವಜನಿಕರ ಲಕ್ಷಾಂತರ ರು. ಲಪಟಾಯಿಸಿದ 5 ಜನರ ತಂಡವೊಂದು ಪರಾರಿಯಾದ ಘಟನೆ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಪಟ್ಟಣದ ದಂಡಿನಪೇಟೆಯಲ್ಲಿ ತಮಿಳುನಾಡು ಮೂಲದ ಟಿ.ಆರ್. ಟ್ರೇಡರ‍್ಸ ಹೆಸರಿನ ಬೋಗಸ್ ಕಂಪನಿಯೊಂದು ಗೃಹ ಬಳಕೆ ವಸ್ತುಗಳನ್ನು ಅರ್ಧ ಬೆಲೆಗೆ ಕೊಡಿಸುವ ಆಮಿಷ ತೋರಿಸಿ ಸುಮಾರು 50 ಲಕ್ಷಕ್ಕೂ ಅಧಿಕ ಹಣ ಪಂಗನಾಮ ಹಾಕಿ ಪರಾರಿಯಾಗಿದೆ.

ತಮಿಳುನಾಡು ಮೂಲದ ನಾಲ್ಕೈದು ವ್ಯಕ್ತಿಗಳ ತಂಡವೊಂದು ಇಲ್ಲಿನ ವಿನಯ ವಾಲಿಶೆಟ್ಟರ ಎಂಬುವರಿಗೆ ಸೇರಿದ ಕಟ್ಟಡವೊಂದನ್ನು ಬಾಡಿಗೆ ಪಡೆದುಕೊಂಡು, ಕಳೆದೊಂದು ತಿಂಗಳ ಹಿಂದಷ್ಟೇ ಬೋಗಸ್ ಜಿಎಸ್‌ಟಿ ನಂಬರ್‌ ಹೊಂದಿರುವ ಟಿ.ಆರ್.ಟ್ರೇಡರ್ಸ ಎಂಬ ಹೆಸರಿನ ಮೇಲೆ ಪುರಸಭೆಯಿಂದ ವ್ಯಾಪಾರಕ್ಕೆ ಅನುಮತಿ ಪಡೆದಿದ್ದರು.

ಜನರ ವಿಶ್ವಾಸ ಪಡೆಯಲೆಂದೇ ಮೊದಮೊದಲು ಅರ್ಧ ಬೆಲೆಗೆ ಫ್ರೀಡ್ಜ, ಟಿವಿ, ವಾಶಿಂಗ್ ಮಶಿನ್, ಟಿಪಾಯ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಕೊಟ್ಟು ಜನರ ವಿಶ್ವಾಸ ಗಳಿಸಿದ ತಂಡವು ಕೊಟ್ಟ ಮಾತನ್ನು ಉಳಿಸಿಕೊಂಡಿದೆ, ಅರ್ಧಬೆಲೆಗೆ ವಸ್ತುಗಳು ಸಿಗಲಿವೆ ಎಂಬ ಸುದ್ದಿ ಪಟ್ಟಣದೆಲ್ಲೆಡೆ ಹರಡಿದ್ದು ಅರ್ಧ ದರಕ್ಕೆ ವಸ್ತುಗಳನ್ನು ಪಡೆಯಲು ಜನರು ಮುಗಿ ಬಿದ್ದಿದ್ದಾರೆ.

ಮುಗಿಬಿದ್ದ ಜನರು: ಹಣದೊಂದಿಗೆ ನಾಪತ್ತೆಯಾದ ವದಂತಿ ಪಟ್ಟಣದಲ್ಲಿ ಹರಡುತ್ತಿದ್ದಂತೆ ಟಿ.ಆರ್.ಟ್ರೇಡರ‍್ಸ ಅಂಗಡಿ ಎದುರು ನೂರಾರು ಜನರು ಜಮಾಯಿಸಿದರು. ಏಕಾಏಕಿ ಅಂಗಡಿ ಬಾಗಿಲು ಹಾಕಿದ್ದನ್ನು ಕಂಡು ಆಕ್ರೋಶ ಹೊರಹಾಕಿದರು. ಇನ್ನೂ ಕೆಲವರು ಮುಂದೇನು..? ಎಂಬ ಚಿಂತೆಯಲ್ಲಿದ್ದು ಸದರಿ ವಿಷಯವನ್ನು ಪೋಲಿಸರಿಗೆ ತಿಳಿಸಿದರು. ಬಳಿಕ ಪೋಲಿಸರು ಸದರಿ ಅಂಗಡಿಗೆ ವಿಶೇಷ ಕಾವಲು ನೇಮಕ ಮಾಡಿದರು.

ಹಣ ಕಟ್ಟಿದ ಮೊತ್ತ ಈವರೆಗೂ 50 ಲಕ್ಷ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಕೋಟಿ ದಾಟಬಹುದು ಎನ್ನಲಾಗುತ್ತಿದೆ. ತಮಿಳುನಾಡಿನ ಕೊಡುಕೊಟ್ಟಾಯಿ ಎಂಬ ಊರಿನ ಆಧಾರ ಕಾರ್ಡ, ಪೋನ್ ನಂಬರ್ ಪೋಲಿಸರಿಗೆ ದೊರೆತಿದ್ದು, ಗ್ರಾಹಕರಿಗೆ ನೀಡಿದ ರಸೀದಿಯಲ್ಲಿ ನಕಲಿ ಜಿಎಸ್‌ಟಿ ಸಂಖ್ಯೆ ನಮೂದಾಗಿದ್ದು ಬೆಳಕಿಗೆ ಬಂದಿದೆ.

ಹಣ ಸಂಗ್ರಹಿಸಿ ಪರಾರಿಯಾದ ಆರೋಪಿ ಪತ್ತೆ ಮಾಡಲು ಪೋಲಿಸರು ಪುರಸಭೆಗೆ ಆತ ಪರವಾನಗಿ ಪಡೆಯಲು ಸಲ್ಲಿಸಿದ ದಾಖಲೆಗಳನ್ನು ಸಂಗ್ರಹಿಸಿದ್ದು, ಪಾನ್ ಕಾರ್ಡ್‌ ಲಭ್ಯವಾಗಿದೆ. ಅಲ್ಲದೆ ಅಂಗಡಿಯ ನಾಮಫಲಕ ಹಾಗೂ ಈ ಎಲ್ಲ ದಾಖಲೆಗಳು ಅಸಲಿಯೋ ನಕಲಿಯೋ ಎಂಬುದು ಸಮಗ್ರ ತನಿಖೆ ನಂತರ ಹೊರಬರಲಿದೆ.

ಮೊಬೈಲ್ ಸ್ವಿಚ್ ಆಫ್: ಜೂ.7ರಿಂದ ಎರಡು ವಾರಗಳ ಕಾಲ ವಸ್ತು ವಿತರಣೆ ಮಾಡಿದ ತಂಡವು ಪ್ರತಿ ದಿನ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದೆ. ಇದರಲ್ಲಿ ಬಹಳಷ್ಟು ಜನರಿಗೆ ಜು.1ರಂದು ವಸ್ತುಗಳನ್ನು ವಿತರಣೆ ಮಾಡಬೇಕಾಗಿತ್ತು. ಆದರೆ ಜೂ.30ರಿಂದಲೇ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಎಲ್ಲಾ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಜನರಿಗೆ ಮಕ್ಮಲ್ ಟೋಪಿ ಹಾಕಿ ನಾಪತ್ತೆಯಾಗಿದ್ದಾರೆ.ಟಿ.ಆರ್.ಟ್ರೇಡರ‍್ಸ ಹೆಸರಿನಲ್ಲಿ ಲೈಸೆನ್ಸ್ ಪಡೆಯಲು ಬಂದಾಗ ಸ್ಥಳೀಯ ನಿವಾಸಿಯೊಬ್ಬರು ತಾವು ಬಾಡಿಗೆ ನೀಡಿರುವ ಬಾಡಿಗೆ ಕರಾರು ಪತ್ರ, ಆಧಾರ ಕಾರ್ಡ, ಪಾನ್ ಕಾರ್ಡ ಝರಾಕ್ಸ ಪ್ರತಿಗಳನ್ನು ಸಲ್ಲಿಸಿದ್ದಾರೆ. ಎಲ್ಲ ದಾಖಲೆಗಳನ್ನು ಅಧಿಕೃತವಾಗಿ ಪರಿಶೀಲಿಸಿ ಲೈಸೆನ್ಸ್ ನೀಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೇಳಿದರು.

ಅರ್ಧಬೆಲೆಗೆ ಗೃಹ ಬಳಕೆ ವಸ್ತುಗಳ ಆಸೆಗೆ ಬಿದ್ದು ಹಣ ಕಳೆದುಕೊಂಡ ಸುಮಾರು 200 ಕ್ಕೂ ಅಧಿಕ ಗ್ರಾಹಕರು ತಮಗೆ ತಮಿಳುನಾಡಿನ ವ್ಯಕ್ತಿಯಿಂದ ಮೋಸವಾಗಿದೆ ಎಂದು ದೂರು ಸಲ್ಲಿಸಿದ್ದಾರೆ. ಈ ಕುರಿತಂತೆ ಸಮಗ್ರ ತನಿಖೆ ನಡೆಸಿದ ನಂತರ ಎಷ್ಟು ಹಣ ಮೋಸವಾಗಿದೆ ಎಂಬ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಸಿಪಿಐ ಮಾಲತೇಶ ಲಂಬಿ ಹೇಳಿದರು.

ಕಡಿಮೆ ಬೆಲೆಯಲ್ಲಿ ವಸ್ತು ಸಿಗುವ ಆಸೆಯಿಂದ ಹಣ ಕಟ್ಟಿದ್ದೆ, ಮಾತಿನಂತೆ ಇಂದು ವಸ್ತುಗಳನ್ನು ನೀಡಬೇಕಾಗಿತ್ತು, ಟಿ.ಆರ್.ಟ್ರೇಡರ್ಸ್‌ ಹತ್ತಿರ ಬಂದು ನೋಡಿದರೆ ಹಣದೊಂದಿಗೆ ಪರಾರಿಯಾಗಿದ್ದಾರೆ. ನನ್ನಂತೆ ನೂರಾರು ಜನರಿಗೆ ಮೋಸವಾಗಿದೆ ಎಂದು ದೂರುದಾರ ಅಜೀಜ್‌ ಬಿಜಾಪುರ ಹೇಳಿದರು.