ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎರಡು ದಿನ ಜರುಗಿದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಸಿದ್ದು ಅಲಗೂರ ಉದ್ಘಾಟಿಸಿದರು.

ಕೊಪ್ಪಳ: ಕೃಷಿಯಲ್ಲಿ ಸುಸ್ಥಿರ ಮತ್ತು ಬಹುಶಿಸ್ತೀಯ ಸಂಶೋಧನೆ ಅವಶ್ಯಕ ಎಂದು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಸಿದ್ದು ಅಲಗೂರ ಹೇಳಿದರು.

ನಗರದ ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎರಡು ದಿನ ಜರುಗಿದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಪ್ರಯೋಗಾಲಯಗಳ ಸಂಶೋಧನೆ ಕೃಷಿ ಭೂಮಿಗೆ ಬರಬೇಕು. ಸಾರ್ವಜನಿಕರು ನೇರ ಉಪಯೋಗವನ್ನು ಪಡೆಯಬೇಕು. ಅಲ್ಲದೆ ಸಂಶೋಧನೆಗಳು ಸುಸ್ಥಿರ ಅಭಿವೃದ್ಧಿ ಮತ್ತು ಬಹುಸ್ತೀಯ ಹಂತದಲ್ಲಿ ನಡೆಯಬೇಕು ಎಂದು ಹೇಳಿದರು.

ವಿಚಾರ ಸಂಕಿರಣದ ಸಂಚಿಕೆಯನ್ನು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ರವಿ ಅವರು ಬಿಡುಗಡೆಗೊಳಿಸಿ, ಯುವಕರು ಹೆಚ್ಚು ಪ್ರಯೋಗಾತ್ಮಕ ಸಂಶೋಧನೆಯಲ್ಲಿ ತೊಡಗಬೇಕು ಎಂದರು.

ಪುಣೆಯ ಹಿರಿಯ ವಿಜ್ಞಾನಿ ಡಾ. ದಸ್ತಗೀರ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಸಿ.ಬಿ. ಗಣೇಶ ಭಾಗವಹಿಸಿದ್ದರು. ಈ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಜಸ್ಥಾನ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ, ಕೇರಳ, ತೆಲಂಗಾಣ ಮುಂತಾದ ರಾಜ್ಯಗಳಿಂದ 120ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಅನೇಕ ತಜ್ಞರು ಮಂಡಿಸಿದರು.

ಗವಿಸಿದ್ದೇಶ್ವರ ಟ್ರಸ್ಟಿನ ಕಾರ್ಯದರ್ಶಿ ಡಾ. ಆರ್. ಮರೇಗೌಡ, ಡಾ ಎಸ್.ವಿ. ಹಿರೇಮಠ ಭಾಗವಹಿಸಿದ್ದರು. ಡಾ ಪ್ರಶಾಂತ್ ಕೊಂಕಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುಂದರ ಮೇಟಿ, ಡಾ. ಅರುಣಕುಮಾರ್, ಡಾ. ಮಂಜುನಾಥ ಎಂ. ಮುಂತಾದವರಿದ್ದರು.