ಸಾರಾಂಶ
ರೈತರು ಬೆಳೆದ ಉತ್ಪನ್ನಗಳನ್ನು ಎಲೆಕ್ಟ್ರಾನಿಕ್ ತೂಕದ ಯಂತ್ರದ ಮೂಲಕವೇ ತೂಕ ಮಾಡಬೇಕು. ಒಂದು ವೇಳೆ ವರ್ತಕರ ವಿರುದ್ಧ ಮತ್ತೇ ದೂರುಗಳು ಬಂದರೆ ಅವರ ಮೇಲೆ ಕಾನೂನುಕ್ರಮ ಕೈಗೊಳ್ಳಲಾಗುವುದು
ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದಲ್ಲಿನ ಎಪಿಎಂಸಿಯಲ್ಲಿ ವರ್ತಕರು, ರೈತರು ಹುಟ್ಟುವಳಿ ಮಾರಾಟ ಮಾಡುವಾಗ ತೂಕದಲ್ಲಿ ಮೋಸ ಹಾಗೂ ದಲ್ಲಾಳಿ ಪಡೆಯುವ ಕುರಿತು ಹಾಗೂ ಹಮಾಲರು ಕಾಳು ತೆಗೆದುಕೊಳ್ಳುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಹಲವು ವರ್ಷಗಳಿಂದ ಇಳಕಲ್ಲ ತಾಲೂಕಿನಲ್ಲಿ ನಿರಂತರ ರೈತರಿಗೆ ಮೋಸ, ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿದ ಪ್ರತಿಭಟನಾಕಾರರು ಅಧಿಕಾರಿಗಳಿಗೆ ತಿಳಿಸಿದರು. ಈ ವೇಳೆ ಎಪಿಎಂಸಿ ವರ್ತಕರು ಹಾಗೂ ರೈತರ ಸಮ್ಮುಖದಲ್ಲಿ ಎಪಿಎಂಸಿ ಆಡಳಿತಾಧಿಕಾರಿ ರಾಜು ರಾಠೋಡ ನೇತೃತ್ವದಲ್ಲಿ ಸಭೆ ನಡೆಸಿ, ಸರಕಾರದ ನಿಯಮಾನುಸಾರವಾಗಿ ವ್ಯಾಪಾರಸ್ಥರು ರೈತರ ಜೊತೆ ವ್ಯವಹಾರ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ರೈತರು ಬೆಳೆದ ಉತ್ಪನ್ನಗಳನ್ನು ಎಲೆಕ್ಟ್ರಾನಿಕ್ ತೂಕದ ಯಂತ್ರದ ಮೂಲಕವೇ ತೂಕ ಮಾಡಬೇಕು. ಉತ್ಪನ್ನಗಳನ್ನು ಖರೀದಿಸಿದ ದಿನವೇ ರೈತರಿಗೆ ಲೆಕ್ಕ ತಿರುವಳಿ ಪಟ್ಟಿ ನೀಡುವುದು. ರೈತರಿಂದ ಯಾವುದೇ ದಲ್ಲಾಳಿ ರಿವಾಜು ಪಡೆಯತಕ್ಕದಲ್ಲ. ರೈತರ ಉತ್ಪನ್ನಗಳನ್ನು ತೂಕ ಮಾಡುವಾಗ ಖಾಲಿ ಚೀಲದ ತೂಕಕ್ಕೆ ಸಮನಾಗಿ ಸೂಟ್ ಪಡೆಯುವುದು ಹಾಗೂ ಗೋಣಿಚಿಲಗಳಲ್ಲಿ ತೂಕ ಮಾಡುವುದು. ರೈತರ ಉತ್ಪನ್ನಗಳನ್ನು ತೂಕ ಮಾಡುವಾಗ ತಮ್ಮ ಅಂಗಡಿ ಹಮಾಲರಿಗೆ ರೈತರಿಂದ ಕೆಳಕಾಳನ್ನು ಪಡೆಯಬಾರದೆಂದು ತಿಳಿಸಿದರು. ಒಂದು ವೇಳೆ ವರ್ತಕರ ವಿರುದ್ಧ ಮತ್ತೇ ದೂರುಗಳು ಬಂದರೆ ಅವರ ಮೇಲೆ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಆರ್.ಎಂ.ದಂಡಿನ, ಸಹಾಯಕ ಕಾರ್ಯದರ್ಶಿ ಪಿ.ಎಂ.ಪಟ್ಟಣಶೆಟ್ಟರ, ಲೆಕ್ಕಾಧಿಕಾರಿ ಎ.ಕೋರಿ, ಮಾರಾಟ ಸಹಾಯಕ ಬಸವರಾಜ ಜಡಿಯಪ್ಪನವರ ಇದ್ದರು. ಪ್ರತಿಭಟನೆಯಲ್ಲಿ ಸೇನೆಯ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ, ಕಾರ್ಯಾಧ್ಯಕ್ಷ ಗುರು ಗಾಣಿಗೇರ, ಉಪಾಧ್ಯಕ್ಷ ಬಸವರಾಜ ಹುಡೇದಮನಿ, ರಾಜಶೇಖರ ಹುಡೇದಮನಿ, ರೇವಣಸಿದ್ದಪ್ಪ ದೇಗನಾಳ, ಗುಂಡಪ್ಪ ಕೌದಿ, ಶಾಂತಗೌಡ ಪಾಟೀಲ, ಮಂಜುನಾಥ ಗೌಡರ, ಮಾಹಾಂತಗೌಡ ಸೊಲಬಗೇರಿ, ರಾಜಸಾಬ ವಾಲಿಕಾರ, ಕುಮಾರಗೌಡ ಪಾಟೀಲ, ನಿತೀಶ ಬೀಳಗಿ ಮತ್ತು ರೈತರು ಇದ್ದರು.