ಸಾರಾಂಶ
ಶಹಾಬಾದ ನಗರದ ಮುಖ್ಯ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಬಟ್ಟೆ ಅಂಗಡಿ ವ್ಯಾಪಾರ ನಡೆಸುತ್ತಿದ್ದ ಭಾಟೀಯಾ ಕುಂಟುಂಬ, ನಗರದ ಜನರಲ್ಲಿ ಠೇವಣಿ, ಚೀಟ್ ಫಂಡ್, ಮುದ್ದತ್ ಠೇವಣಿ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಲಪಟಾಯಿಸಿ, ಪಂಗನಾಮ ಹಾಕಿ, ರಾತ್ರೋರಾತ್ರಿ ಪರಾರಿಯಾಗಿದ್ದು, ಈ ಕುರಿತು ಸಂತ್ರಸ್ಥರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಶಹಾಬಾದ
ನಗರದ ಮುಖ್ಯ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ಬಟ್ಟೆ ಅಂಗಡಿ ವ್ಯಾಪಾರ ನಡೆಸುತ್ತಿದ್ದ ಭಾಟೀಯಾ ಕುಂಟುಂಬ, ನಗರದ ಜನರಲ್ಲಿ ಠೇವಣಿ, ಚೀಟ್ ಫಂಡ್, ಮುದ್ದತ್ ಠೇವಣಿ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಲಪಟಾಯಿಸಿ, ಪಂಗನಾಮ ಹಾಕಿ, ರಾತ್ರೋರಾತ್ರಿ ಪರಾರಿಯಾಗಿದ್ದು, ಈ ಕುರಿತು ಸಂತ್ರಸ್ಥರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.ಹೆಸರಿಗೆ ತಕ್ಕಂತೆ ಸ್ಟ್ಯಾಂಡರ್ಡ ಬಟ್ಟೆ (ಸರ್ದಾಜೀ ಬಟ್ಟೆ ಅಂಗಡಿ) ಅಂಗಡಿಯನ್ನು ಮಾಲೀಕ ಅವತಾರ ಸಿಂಗ್ ಭಾಟೀಯಾ ನಗರದಲ್ಲಿ ಸುಮಾರು 5 ದಶಕಗಳಿಗಿಂತ ಹೆಚ್ಚು ವರ್ಷ ಇಲ್ಲಿ ವ್ಯಾಪಾರ ಮಾಡಿ ಹೆಸರು ಗಳಿಸಿತ್ತು. ಬಟ್ಟೆ ವ್ಯಾಪಾರದೊಂದಿಗೆ ಭಾಟೀಯಾ ಫೈನಾನ್ಸ್ ಆ್ಯಂಡ್ ಇನ್‍ವೆಸ್ಟ್‌ಮೆಂಟ್ ಕಾರ್ಫೋರೇಷನ್ ಹೆಸರಿನಲ್ಲಿ ಚೀಟ್ ಫಂಡ್, (ಬಿಸಿ) ಮುದ್ದತ್ ಠೇವಣಿ, ‘ಸಹಯೋಗ’ ಮನಿ ಸೇವಿಂಗ್ಸ್ ಸ್ಕೀಂ ಒಳಗೊಂಡ ಹಣಕಾಸು ವ್ಯವಹಾರವನ್ನು ನಡೆಸುತ್ತಿದ್ದರು.
ಒಳ್ಳೆ ಹೆಸರು ಮಾಡಿದ್ದ ಅವತಾರ ಸಿಂಗ್ ಅವರ ಪುತ್ರ ಹರಜೀತ್ ಸಿಂಗ್ ಭಾಟೀಯಾ, ಅವರ ಪತ್ನಿ ಪ್ರೀತಿ ಕೌರ್ ಭಾಟೀಯಾ, ಮಕ್ಕಳಾದ ಅಂಗದ ಸಿಂಗ್ ಭಾಟೀಯಾ, ಪುನೀತ್ ಸಿಂಗ್ ಭಾಟೀಯಾ, ಅವರು ಕಳೆದ ಮಾ.21ರಂದು ರಾತ್ರೋರಾತ್ರಿ ಅಂಗಡಿ ಮುಚ್ಚಿಕೊಂಡು ತಮ್ಮಲ್ಲಿ ಹಣ ಹೂಡಿದ ಜನರಿಗೆ ಪಂಗನಾಮ ಹಾಕಿ ಪರಾರಿಯಾಗಿದ್ದಾರೆ.ಈ ಕುರಿತು ರೋಹಿತ್ ವಿಜಯಕುಮಾರ ಪಾಟೀಲ ಅವರು ನೀಡಿದ ದೂರಿನನ್ವಯ ಭಾಟೀಯಾ ಫೈನಾನ್ಸ್‌ಗೆ ಕಳೆದ 1/8/2020ರಿಂದ 21/3/2024 ವರೆಗೆ ತಮ್ಮ ಚಹಾದ ಅಂಗಡಿಯಿಂದ ಪ್ರತಿದಿನ ಸಾವಿರ ರು. ಚೀಟ್ ಫಂಡ್ ಹಣ ಪಡೆದು ಪಾಸ್‍ಬುಕ್‍ನಲ್ಲಿ ಎಂಟ್ರಿ ಮಾಡಿಕೊಂಡಿದ್ದು, 2024 ಮಾರ್ಚ್ ತಿಂಗಳಲ್ಲಿ 5 ಲಕ್ಷ, ಮೇ ತಿಂಗಳಲ್ಲಿ 5 ಲಕ್ಷ ರು. ಮುದ್ದತ ಹಣವನ್ನು ನೀಡದೆ ಪರಾರಿಯಾಗಿದ್ದಾರೆ.
ಒಟ್ಟು ರೋಹಿತ್ ಪಾಟೀಲ ₹10 ಲಕ್ಷ, ನೀಲಕಂಠ ಕುಂಬಾರ ₹10 ಲಕ್ಷ, ರಘುರಾಮ ಅಚ್ಚುಕುಂದ ₹24 ಲಕ್ಷ, ಮಲ್ಲಿಕಾರ್ಜುನ ಅಲ್ಲೂರ ₹20 ಲಕ್ಷ, ಸುಶೀಲಾ ಜೈನ್ ₹18 ಲಕ್ಷ,ಶೇಖ ಇಮ್ರಾನ್ ಮ.ಹುಸೇನ್ ₹31.80 ಲಕ್ಷ, ಶ್ರೀನಿವಾಸ ಟೆಂಗಳಿ ₹24 ಲಕ್ಷ, ಶಂಕರರಾವ ದೊಡ್ಡಮನಿ ₹8 ಲಕ್ಷ, ವಿಜಯಸಾರಥಿ ಆಚಾರಲು ₹8 ಲಕ್ಷ, ಅಣ್ಣರಾವ ಕಂಗಳಗಿ ₹2 ಲಕ್ಷ, ನಾಗೇಂದ್ರ ಕಾಶೀನಾಥ ₹2 ಲಕ್ಷ, ಹೀಗೆ ಒಟ್ಟು ₹1.57 ಕೋಟಿ ಪಂಗನಾಮ ಹಾಕಿದ್ದಾರೆ.ಇಷ್ಟೇ ಅಲ್ಲದೆ ಇನ್ನೂ ಅನೇಕರು 50 ವರ್ಷದ ವಿಶ್ವಾಸದ ಆಧಾರದ ಮೇಲೆ ಚೀಟ್‍ಫ್‍ಂಡ್ (ಬಿಸಿ), ಠೇವಣಿ ಹೂಡಿಕೆ ಮಾಡಿದ್ದು, ಅವರಲ್ಲಿ ಯಾವುದೇ ಸೂಕ್ತ ದಾಖಲೆಗಳು ಇಲ್ಲದೇ ಇರುವುದರಿಂದ ಹಣ ಕಳೆದುಕೊಂಡು ಕಣ್ಣೀರು ಹಾಕುತ್ತ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಕುರಿತು ಶನಿವಾರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.